

ಬೆಂಗಳೂರು: ವಿಧಾನ ಪರಿಷತ್ ನಾಮನಿರ್ದೇಶನ ಮಾಡುವಾಗ ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಪರಿಗಣಿಸಬೇಕು, ಅವಕಾಶ ಪಡೆದವರಿಗೆ ಪುನಃ ಅವಕಾಶ ಕೊಡಬಾರದೆಂದು ದನಿ ಎತ್ತಿದ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವೊಲಿಸಿದ್ದಾರೆ.
ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಪ್ರಕ್ರಿಯೆ ನಡೆದಿದ್ದು, ಈ ವೇಳೆ ಉಮಾಶ್ರೀ, ಎಂ.ಆರ್.ಸೀತಾರಾಮ್, ಸುಧಾಮ್ ದಾಸ್ ಹೆಸರು ಅಂತಿಮಗೊಳಿಸಲಾಗಿದೆ ಎಂಬ ವಿಚಾರ ಪಕ್ಷದ ಕೆಲವು ಮುಖಂಡರನ್ನು ಕೆರಳಿಸಿತ್ತು. ಹೀಗಾಗಿ ಸೋಮವಾರ ಪಕ್ಷದ ಕಚೇರಿ ಸಮೀಪದ ಸಭಾಂಗಣದಲ್ಲಿ ಸಭೆ ಕರೆದಿದ್ದರು.
ಈ ಸಭೆಗೆ ಕಾರ್ಯಕರ್ತರು ತೆರಳದಂತೆ ತಡೆಯುವ ಪ್ರಯತ್ನವೂ ನಡೆದಿತ್ತು. ಈ ನಡುವೆಯೂ 25ಕ್ಕೂ ಹೆಚ್ಚು ಮಂದಿ ಒಟ್ಟುಗೂಡಿ ಚರ್ಚೆ ನಡೆಸಿದ್ದಾರೆ. ಬಳಿಕ ಅವರನ್ನು ಡಿ.ಕೆ.ಶಿವಕುಮಾರ್ ಕರೆಸಿ ಸಮಾಧಾನ ಮಾಡಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ, ನೋವಾಗದಂತೆ ನೋಡಿಕೊಳ್ಳಲಾಗುವುದು. ಅವಕಾಶದ ಅಪೇಕ್ಷಿತರು ಅರ್ಜಿ ಕೊಟ್ಟರೆ ನಿಗಮ ಮಂಡಳಿ ನೇಮಕದಲ್ಲಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.