ರೇವ್​ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ; ಬಂಧಿತ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

Noida RaveParty
Published on

ನೋಯ್ಡಾ: ಉತ್ತರಪ್ರದೇಶದ ನೋಯ್ಡಾದಲ್ಲಿ ರೇವ್​ ಪಾರ್ಟಿ ಆಯೋಜನೆ ಮಾಡಿದ ಆರೋಪದ ಮೇಲೆ ಹಿಂದಿ ಬಿಗ್​ ಬಾಸ್​ ಸೀಸನ್​-2 ವಿನ್ನರ್​ ಎಲ್ವಿಶ್​ ಯಾದವ್ ಸೇರಿದಂತೆ ಆರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.

ರೇವ್​ ಪಾರ್ಟಿ ಆಯೋಜನೆ ಹಾಗೂ ಹಾವಿನ ವಿಷ ಬಳಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣದ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅವರನ್ನು ಸೂರಜ್​ಪುರ ಮ್ಯಾಜಿಸ್ಟ್ರೇಟ್​ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ಐವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಎಲ್ವಿಶ್​ ಯಾದವ್​ನನ್ನು ಪೊಲೀಸರು ಈವರೆಗೆ ಬಂಧಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈತ ಉತ್ತರಪ್ರದೇಶ ಹಾಗೂ ಹರಿಯಾಣದ ಪ್ರಭಾವಿ ನಾಯಕರ ಜತೆ ಒಡನಾಟ ಹೊಂದಿದ್ದು, ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್​ ಅವರ ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಲ್ವಿಶ್​ ವಿರುದ್ಧ ಸಾಕಷ್ಟು ಕ್ರಿಮಿನಲ್​ ಮೊಕದ್ದಮೆಗಳು ದಾಖಲಾಗಿದ್ದು, ಪ್ರಭಾವಿಗಳು ಈತನ ಬೆನ್ನಿಗೆ ನಿಂತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net