ಶಿಕ್ಷಕರ ತರಬೇತಿ ನೆಪದಲ್ಲಿ ಹಣ ಲಪಟಾಯಿಸುವ ದಂಧೆ: ನೋಡಲ್ ಅಧಿಕಾರಿ ವಿರುದ್ಧ ಆರೋಪ ಡಯಟ್,ನಿರ್ದೇಶಕರಿಗೆ ದೂರು ನಿರ್ವಹಣಾ ವೆಚ್ಚಕ್ಕೆಂದು ಹಣ ವಸೂಲಿ

01-01-rama-education
Published on

ರಾಮನಗರ:  ಕಳೆದ ಹಲವು ವರ್ಷಗಳಿಂದ ತಹಬದಿಗೆ ಬಂದಿದ್ದ ಶಿಕ್ಷಕರಿಗೆ ತರಬೇತಿ ನೀಡುವ ನೆಪದಲ್ಲಿ ಹಣ ಲಪಟಾಯಿಸುವ ದಂಧೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಸನಿವಾಸ ತರಬೇತಿ ವೇಳೆ ಶಿಕ್ಷಕರಿಗೆ ಸಾಕಷ್ಟು ತೊಂದರೆ ಆಗಿದೆ ಎಂದು ಡಯಟ್ ಉಪನಿರ್ದೇಶಕರಿಗೆ ದೂರು ನೀಡಲಾಗಿದೆ.

ಇತ್ತೀಚೆಗೆ ಇಂಗ್ಲಿಷ್ ಭಾಷಾ ಶಿಕ್ಷಕರಿಗೆ ಬುನಾದಿ ತರಬೇತಿ 1 (ಎಂಪಿಐಪಿ - 1) ಸನಿವಾಸ ತರಬೇತಿಯಲ್ಲಿ ಶಿಕ್ಷಕರು ಅನುಭವಿಸಿದ ಸಮಸ್ಯೆಗಳ ಬಗ್ಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿಯಲ್ಲಿ ವಿವರವಾಗಿ ತಿಳಿಸಿದ್ದಾರೆ.

ಮವಿಯಲ್ಲಿ ಏನಿದೆ?: ಎಂಟಿಐಪಿ-1 ಸನಿವಾಸ ತರಬೇತಿ ಪಡೆದ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ದೂರಿನ ರೂಪದಲ್ಲಿ ಸಂಘಕ್ಕೆ ನೀಡಿದ್ದಾರೆ. ತರಬೇತಿ ಅವ್ಯವಸ್ಥೆಯ ಆಗರವಾಗಿತು. ತರಬೇತಿ ಸಂದರ್ಭದಲ್ಲಿ ಕಳಪೆ ಊಟ ನೀಡಲಾಗಿದೆ.

ಚಟುವಟಿಕೆಗಳಿಗೆ ಯಾವುದೇ ಸಾಮಗ್ರಿ ಒದಗಿಸದೆ ಶಿಕ್ಷಕರೇ ತರಲು ಒತ್ತಾಯ ಮಾಡಲಾಗಿದೆ. ತರಬೇತಿಗೆ ನೀಡಿದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ತರಬೇತಿ ಸಮಯದಲ್ಲಿ ಉಳಿದುಕೊಂಡಿದ್ದ ಶಿಕ್ಷಕರಿಗೆ ರಾತ್ರಿ ಹೊರಗಿನಿಂದ ವಿತರಿಸಿರುವ ಊಟ ಕಳಪೆಯಾಗಿದ್ದು, ಅದನ್ನು ತಿರಸ್ಕರಿಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತರಬೇತಿಗೆ ಬಾರದವರಿಂದ ಸಹಿ ಮಾಡಿಸಿ ಟಿಎ, ಡಿಎ ನೀಡಿ ನಂತರ ಅವರಿಂದ ಹಣ ಹಿಂಪಡೆಯಲಾಗಿದೆ. ಈ ಹಿಂದೆ ನಡೆದ ತರಬೇತಿಗಳಲ್ಲಿ ನಿರ್ವಹಣಾ ವೆಚ್ಚ ಸಾಲದು ಎಂದು ಪ್ರತಿ ಶಿಕ್ಷಕರಿಂದ (30್ಡ15) 450 ರೂ.ಗಳನ್ನು ಡಿಎ ಹಣದಲ್ಲಿ ನಗದು ರೂಪದಲ್ಲಿ ಕಡ್ಡಾಯವಾಗಿ ನೀಡಲು ಒತ್ತಾಯಿಸಿ ಶಿಕ್ಷಕರಿಂದ ಪಡೆಯಲಾಗಿದೆ. ಹಾಗೂ ಪ್ರಸ್ತುತ ತರಬೇತಿಯಲ್ಲೂ ಶಿಕ್ಷಕರಿಂದ ಇದೇ ರೀತಿ ಸುಲಿಗೆ ಮಾಡಿದ್ದಾರೆ ಎಂದು ದೂರಿದರು.

ನೋಡಲ್ ಅಧಿಕಾರಿ ಚಂದ್ರಿಕಾ ಅವರು ಈ ಹಿಂದಿನ ತರಬೇತಿಗಳಲ್ಲೂ ಅವ್ಯವಹಾರ ಮಾಡಿದ ಆರೋಪವಿದೆ. ಇದರಿಂದ ಈ ಹಿಂದೆಯೂ ಶಿಕ್ಷಕರ ಸಂಘ ಬೇಸತ್ತು ಡಯಟ್ ಪ್ರಾಂಶುಪಾಲರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ಇಂತಹ ಅಧಿಕಾರಿಗಳು ನಡೆಸಿರುವ ಅವ್ಯವಹಾರವನ್ನು ತನಿಖೆ ಮಾಡಿ, ಮುಂದಿನ ತರಬೇತಿಗಳಿಗೆ ನೋಡಲ್ ಅಧಿಕಾರಿಯಾಗಿ ನೇಮಿಸದೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಶಿಕ್ಷಕರ ತರಬೇತಿಗಳು ಯಶಸ್ವಿಯಾಗುವುದಿಲ್ಲ ಮನವಿಯಲ್ಲಿ ತಿಳಿಸಿದ್ದಾರೆ.

ವಿಭಾಗೀಯ ಮಟ್ಟದ ತರಬೇತಿಯಾದ್ದರಿಂದ ವಿವಿಧ ಜಿಲ್ಲೆಗಳಿಂದಲೂ ಶಿಕ್ಷಕರು ಆಗಮಿಸಿದ್ದಾರೆ. ಬಹುತೇಕರು ತಮಗಾದ ನೋವನ್ನು ತೋಡಿಕೊಂಡಿದ್ದಾರೆ. ನೋಡಲ್ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿ ಚಂದ್ರಿಕಾ ವಿರುದ್ದ ತನಿಖೆ ನಡೆಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಬಿ. ಗುಣಶೇಖರಯ್ಯ, ಸಂಘದ ಜಿಲ್ಲಾಧ್ಯಕ್ಷ ರಮೇಶ್, ಖಜಾಂಚಿ ಕೆ.ಎಂ. ಗುರುಮೂರ್ತಿ, ರಾಮನಗರ ತಾಲೂಕು ಅಧ್ಯಕ್ಷ ಕಾಂತರಾಜು, ಪ್ರಧಾನ ಕಾರ್ಯದರ್ಶಿ ಪಿ. ವಾಸುದೇವ್ ಅವರು ಡಯಟ್ ಉಪನಿರ್ದೇಶಕ ಪ್ರಸನ್ನ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಅಭಿಪ್ರಾಯಕ್ಕೆ ಅವಕಾಶವಿಲ್ಲ: ಸನಿವಾಸ ತರಬೇತಿಯಲ್ಲಿ ನಿಯಮಾನುಸಾರ ಶೇ.25 ಡಿಎ ನೀಡಲು ನಿರಾಕರಿಸುವುದು, ಶಿಕ್ಷಕರನ್ನು ಗೌರವಯುತವಾಗಿ ನಡೆಸಿಕೊಳ್ಳದೆ ಹೆದರಿಸಿ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶ ನೀಡದಿರುವುದು, ಅವ್ಯವಹಾರ ನಡೆದಿದ್ದರೂ ನೋಡಲ್ ಅಧಿಕಾರಿಗಳು ಮೊಂಡುತನ ತೋರಿಸುತ್ತ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net