ನಿಲ್ಲದ ಗುಮಾನಿ, ಯಾರೂ ಬಿಟ್​ ಕೊಡ್ತಿಲ್ಲ ಗುಟ್ಟು; ಪ್ರಕರಣದ ಚರ್ಚೆಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ, ಪ್ರತಿಪಕ್ಷ ಕಾಂಗ್ರೆಸ್ ಪಟ್ಟು ಬಿಡುತ್ತಿಲ್ಲ

Bit Coin
Published on

ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ಕುರಿತ ಎದ್ದಿರುವ ಊಹಾಪೋಹಕ್ಕೆ ತೆರೆ ಬೀಳುವ ಲಕ್ಷಣ ಕಾಣಿಸುತ್ತಿಲ್ಲ. ತನಿಖೆಗೊಪ್ಪಿಸಿರುವ ಕುರಿತು ಸರ್ಕಾರ ಸ್ಪಷ್ಟನೆ ನೀಡಿದ್ದರ ಹೊರತು ಹೆಚ್ಚಿನ ಚರ್ಚೆಗೆ ಆಸಕ್ತಿ ತೋರಿಸಿಲ್ಲ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಮಾತ್ರ ಈ ವಿಚಾರವನ್ನು ಬಿಡುವ ಲಕ್ಷಣ ಗೋಚರಿಸುತ್ತಿಲ್ಲ.

ಪ್ರಕರಣದಲ್ಲಿ ಸ್ಪಷ್ಟತೆ ಇಲ್ಲದೆ ಇದ್ದರೂ ಪದೇಪದೆ ಕೆದಕುವ ಮೂಲಕ ಅನುಮಾನಗಳನ್ನು ಬಾಕಿ ಇರುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮುಂದುವರಿಸಿದ್ದಾರೆ. ಇದೇ ಕಾರಣಕ್ಕೆ ಒಂದಾದ ಮೇಲೊಂದು ಅನುಮಾನಗಳು ಹುಟ್ಟಿಕೊಳ್ಳುತ್ತಲೇ ಇದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿ, ಬಿಟ್ ಕಾಯಿನ್ ಸುದ್ದಿ ಕಾವು ಪಡೆದುಕೊಳ್ಳುತ್ತಿದ್ದಂತೆ ಜನರ ಗಮನ ಬೇರೆಡೆ ಸೆಳೆಯಲು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ ಎಂದು ಟೀಕಿದರು. ಬಿಟ್​ಕಾಯಿನ್​ನಲ್ಲಿ ಅನೇಕರು ಬಂಡವಾಳ ಹೂಡುತ್ತಿದ್ದಾರೆ. ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹ್ಯಾಕ್ ಮಾಡಲಾಗಿದ್ದು, ಹ್ಯಾಕ್ ಮಾಡಿರುವ ವ್ಯಕ್ತಿಗೆ ಪ್ರಭಾವಿ ನಾಯಕರ ಸಂಪರ್ಕವಿದೆ. ಪ್ರಭಾವಿ ನಾಯಕರ ಮಗ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಊಹಾಪೋಹವಿದೆ. ಸಿಬಿಐಗೆ ಪ್ರಕರಣ ಹೋದಮೇಲೆ ಗೆಜೆಟ್ ಆಗಿರಬೇಕಲ್ಲವೇ? ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದರು.

ಬಿಟ್ ಕಾಯಿನ್ ಬಗ್ಗೆ ಮಾತನಾಡಲ್ಲ. ಪ್ರಕರಣ ತನಿಖೆ ಹಂತದಲ್ಲಿದೆ. ಇದರಲ್ಲಿ ಕಾಂಗ್ರೆಸ್​ನವರು ಇದ್ದಾರೋ, ಬಿಜೆಪಿಯವರು ಇದ್ದಾರೋ ಗೊತ್ತಿಲ್ಲ. ಓಂ ಪ್ರಕಾಶ್ ಚೌತಾಲ ಅವರೊಬ್ಬರಿಗೆ ಕಂಟಕ ಆಗಿದೆ. ಇಡಿ, ಸಿಓಡಿ ಇದೆ ತನಿಖೆ ಮಾಡಲಿ. ಬಂಧಿತ ಶ್ರೀಕೃಷ್ಣ ಯಾವ ಹೋಟೆಲ್​ನಲ್ಲಿದ್ದ ಗೊತ್ತಿದೆ. ಹೋಟೆಲ್​ನವರೇ ಪೊಲೀಸರಿಗೆ ಮಾಹಿತಿ ನೀಡಿದ್ದೂ ಗೊತ್ತು. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ಕಾಂಗ್ರೆಸ್ ವಾದವೇನು?

  1. ಈ ಹಗರಣದ ಸೂತ್ರಧಾರಿ, ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾಗ ಈ ಬೃಹತ್ ಮೊತ್ತದ ಹಗರಣ ಬಯಲಿಗೆ ಬಂದಿತ್ತು. ಅಂದು ಗೃಹಮಂತ್ರಿಯಾಗಿದ್ದ ಬೊಮ್ಮಾಯಿ ಅವರೇ, ಇಂದು ಸಿಎಂ ಆಗಿದ್ದಾರೆ. ಆದರೆ ಈವರೆಗೂ ತನಿಖೆ ಪೂರ್ಣ ವಿವರವನ್ನು ಬಹಿರಂಗಪಡಿಸದೆ ಇರುವುದು ಹಲವು ಅನುಮಾನ ಮೂಡಿಸಿದೆ.
  2. ಬೊಮ್ಮಾಯಿ ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ವಿಚಾರ ಮುಚ್ಚಿಟ್ಟಿದ್ದು, ಇಂಟರ್ ಪೋಲ್ ಹಾಗೂ ಅಂತರಾಷ್ಟ್ರೀಯ ತನಿಖಾ ಸಂಸ್ಥೆಗೆ ವಿಷಯ ತಿಳಿಸದೆ ಇರುವುದು, ದಂಧೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಭಾಗಿಯಾಗಿರುವದನ್ನು ಖಚಿತಪಡಿಸಿದೆ.
  3. ಹಗರಣದ ಆರೋಪಿ 5000 ಬಿಟ್ ಕಾಯಿನ್​ಗಳನ್ನು ದೋಚಿದ್ದು, ಅದರ ಮೊತ್ತ ಸುಮಾರು 2,283 ಕೋಟಿ ರೂ.ಗಳೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ವಿವರಿಸಿದ್ದಾರೆ.
  4. ಈ ಬಿಟ್​ಕಾಯಿನ್​ಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆಯೇ? ಮಾಡಿದ್ದರೆ, ವಶಪಡಿಸಿಕೊಂಡಿರುವ ಬಿಟ್​ಕಾಯಿನ್ ಸ್ವತ್ತು ಯಾರ ಬಳಿ ಇದೆ? ಎಂಬ ವಿಷಯವನ್ನು ಸರ್ಕಾರ ಈವರೆಗೂ ಬಹಿರಂಗಪಡಿಸಿಲ್ಲ.
  5. ಪ್ರಕರಣದ ತನಿಖೆ ವಿಚಾರವಾಗಿಯೂ ಗೃಹಸಚಿವರು ಹಾಗೂ ಸಿಎಂ ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ನಿಸ್ಸಂಶಯವಾಗಿ ಈ ಬಹುಕೋಟಿ ಹಗರಣದಲ್ಲಿ ಕಾಣದ ಕೈಗಳು ಅಡಗಿರುವುದು ಖಾತರಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net