

ಗುರು ದೇವರು ಪೇಜಾವರ ಶ್ರೀಗಳಿಗೆ ‘ಎಷ್ಟು ಹೊತ್ತಿಗೆ ಬಂದರೆ ಉಡುಪಿಯ ದೇವರ ದರ್ಶನ ಮಾಡಬಹುದು?’ ಎಂದು ಕೇಳಲು ಶ್ರೀಗಳು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಬಂದರೆ ಒಳಿತು ಎಂದರು. ಶ್ರೀಗಳು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ದೇವಸ್ಥಾನದ ಬಾಗಿಲಲ್ಲಿ ನಿಂತರು. ಪೂರ್ಣಕುಂಭವನ್ನು ಸಿದ್ಧಮಾಡಿಕೊಂಡು ತಮ್ಮ ಶಿಷ್ಯ ಪರಿವಾರದ ಜೊತೆ ಗುರುದೇವರಿಗಾಗಿ ಕಾಯುತ್ತಿದ್ದರು. ಗುರುದೇವ್ ಹಣೆಗೆ ವಿಭೂತಿಯನ್ನು ಹಚ್ಚಿ, ರುದ್ರಾಕ್ಷಿ ಮಾಲೆಗಳನ್ನು ಧರಿಸಿಕೊಂಡು ಕಾರಿನಲ್ಲಿ ಬಂದರು. ಗುರುದೇವ್ ವಿಶ್ವದ ಎಲ್ಲೆಡೆ ಪರಿಚಿತರಾಗಿದ್ದವರು, ಅಧ್ಯಾತ್ಮದಲ್ಲೂ, ಧಾರ್ವಿುಕ ವಿಚಾರದಲ್ಲೂ ಎಲ್ಲರಿಗಿಂತ ಎತ್ತರಕ್ಕೆ ಇದ್ದವರು.
ಕಾರಿನಿಂದ ಇಳಿದವರೇ ಪೇಜಾವರ ಶ್ರೀಗಳ ಕಾಲಿಗೆ ದೀರ್ಘದಂಡ ಪ್ರಣಾಮವನ್ನು ಮಾಡಿದರು. ಇದು ಅನಿರೀಕ್ಷಿತ ಸಂಗತಿ. ಎಲ್ಲರೂ ಸ್ವಾಮೀಜಿಯವರು ಬರುತ್ತಾರೆ, ಅವರಿಗೆ ನಮಸ್ಕರಿಸಿ ಪೂರ್ಣಕುಂಭ ದೊಂದಿಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಬೇಕು ಎಂದು ತಿಳಿದಿ ದ್ದರೆ ಸ್ವಾಮೀಜಿಯವರೇ ಶ್ರೀಗಳ ಕಾಲಿಗೆ ಪ್ರಣಾಮ ಮಾಡಿದ್ದರು.
ಪೇಜಾವರ ಶ್ರೀಗಳಿಗೆ ಸಂಕೋಚವಾಗಿ ಮುದುಡಿಕೊಂಡು ನಿಂತಿದ್ದರು. ಆಮೇಲೆ ದೇವರ ದರ್ಶನವಾಯಿತು. ಮಂಗಳೂರಿಗೆ ಹಿಂತಿರುಗಿದರು. ದಾರಿಯಲ್ಲಿ ಗುರುದೇವರನ್ನು ಬ್ರಹ್ಮಾಜಿಯವರು ಕೇಳಿದರು. ‘ಸ್ವಾಮೀಜಿ, ಪೇಜಾವರ ಶ್ರೀಗಳು ನಿಮಗಿಂತ 10-12 ವರ್ಷ ಚಿಕ್ಕವರು. ಆದರೂ ನೀವು ಅವರ ಕಾಲಿಗೆ ನಮಸ್ಕಾರ ಮಾಡಿದ್ದು ಹೇಗೆ?’ ಎಂದು. ಅದಕ್ಕೆ ಗುರುದೇವ್ ಕೊಟ್ಟ ಉತ್ತರ ಹೀಗಿತ್ತು: ‘ನಾನು ನಮಸ್ಕರಿಸಿದ್ದು ಅವರಿಗಲ್ಲ, ಅವರ ಪೀಠಕ್ಕೆ. ಅವರು ಕುಳಿತಿರುವುದು ಮಧ್ವ ಪೀಠದಲ್ಲಿ. ಅವರು ಪೂಜಿಸುತ್ತಿರುವುದು ಶ್ರೀಕೃಷ್ಣಪರಮಾತ್ಮನನ್ನು. ನಾನು ಅವರನ್ನು ನೋಡುವುದು ಅವರೇ ಶ್ರೀಕೃಷ್ಣ ಎಂಬ ದೃಷ್ಟಿಯಿಂದ. ಆದ್ದರಿಂದಲೇ ಅವರಿಗೆ ನಮಸ್ಕರಿಸಿದೆ’ ಎಂದು. ಎಂತಹ ಉದಾತ್ತ ಮನೋಭಾವ ಗುರುದೇವರದು.