ಕ್ವಾಂಟನ್ ಸಮ್ಮೇಳನಕ್ಕೆ ನೋಬೆಲ್ ವಿಜ್ಞಾನಿಗಳು: ಬೋಸರಾಜು | Technology development discussion

Boseraju meeting
Published on

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಕ್ವಾಂಟಮ್ ಸಮ್ಮೇಳನದಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಡಂಕನ್ ಹಲ್ದಾನೆ, ಪ್ರೊ.ಡೇವಿಡ್ ಗ್ರಾಸ್ ಭಾಗಿಯಾಗಲಿದ್ದು, ಕ್ವಾಂಟಮ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾಹಿತಿ ನೀಡಿದ್ದಾರೆ.

ವಿಕಾಸಸೌಧದಲ್ಲಿ 31 ಹಾಗೂ ಆ.1ರಂದು ನಡೆಯಲಿರುವ ಕ್ವಾಂಟಮ್ ಸಮ್ಮೇಳನದ ಪೂರ್ವಭಾವಿ ಸಭೆಯ ನಂತರ ಮಂಗಳವಾರ ಮಾತನಾಡಿದ ಅವರು, ಕ್ವಾಂಟಮ್ ತಂತ್ರಜ್ಞಾನದಲ್ಲಿ ರಾಜ್ಯವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರು ಹಾಗೂ ಕರ್ನಾಟಕ ಮುಂದಿರುವಂತೆಯೇ ಕ್ವಾಂಟಮ್ ಕ್ಷೇತ್ರದಲ್ಲಿ ಛಾಪು ಮೂಡಿಸುವ ಸಲುವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆಶಯದಂತೆ ಕ್ವಾಂಟಮ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಮ್ಮೇಳನದಲ್ಲಿ ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಎನ್.ಎಸ್.ಬೋಸರಾಜು ಹೇಳಿದರು.

ಪಥನಕ್ಷೆ ಅನಾವರಣ

ಕ್ವಾಂಟಮ್ ತಂತ್ರಜ್ಞಾನದಲ್ಲಿ ಬೆಂಗಳೂರು ಹೆಜ್ಜೆ ಗುರುತು ಮೂಡಿಸಿದೆ. ಹಲವು ಕಂಪನಿಗಳು ಬಂಡವಾಳ ಹೂಡಿಕೆ ಮಾಡಿ ಅಭಿವೃದ್ಧಿಪಡಿಸುತ್ತಿವೆ. ಪೂರಕವಾಗಿ ಕ್ವಾಂಟಮ್ ಪಥನಕ್ಷೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ತಯಾರಿಸುತ್ತಿದೆ.

ಭಾರತೀಯ ವಿಜ್ಞಾನ ಸಂಸ್ಥೆ ನೆರವಿನೊಂದಿಗೆ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ಕ್ವಾಂಟಮ್ ಸಿಟಿ ಸ್ಥಾಪಿಸಲು ಸರ್ಕಾರ ಉತ್ಸುಕವಾಗಿದೆ. ಸಮ್ಮೇಳನದ ಮೊದಲ ದಿನ ಈ ಪಥನಕ್ಷೆಯನ್ನು ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಆಂಧ್ರ ಸಿಎಂ ಗಾಳ

ಕ್ವಾಂಟಮ್ ತಂತ್ರಜ್ಞಾನವೆಂದರೆ ಸೂಪರ್ ಕಂಪ್ಯೂಟರ್‌ಗಳ ಅಭಿವೃದ್ಧಿ. 128 ತಾಸುಗಳ ಕೆಲಸವನ್ನು ಕ್ವಾಂಟಮ್ ತಂತ್ರಜ್ಞಾನದ ಬಲದಿಂದ ಎಂಟು ತಾಸುಗಳಲ್ಲಿ ಸಾಧಿಸಬಹುದಾಗಿದೆ. ಜಗತ್ತಿನೆಲ್ಲೆಡೆ ಎಐ ರೀತಿಯಲ್ಲಿ ಕ್ವಾಂಟಮ್ ತಂತ್ರಜ್ಞಾನವೂ ಪ್ರಾಮುಖ್ಯತೆ ಪಡೆಯುತ್ತಿದೆ.

ನೆರೆಯ ಆಂಧ್ರಪ್ರದೇಶದ ಚಂದ್ರಬಾಬುನಾಯ್ಡು ಈ ಬೆಳವಣಿಗೆ ಗುರುತಿಸಿ, ಕರ್ನಾಟಕದ ಜತೆಗೆ ಸ್ಪರ್ಧೆಗೆ ಇಳಿದಿದ್ದಾರೆ. ಅಮರಾವತಿ ಬಳಿ ‘ಕ್ವಾಂಟಮ್ ಸಿಟಿ’ ಸ್ಥಾಪಿಸಲಾಗುವುದು ಎಂದು ೋಷಿಸಿ ಕರ್ನಾಟಕದಲ್ಲಿನ ಕ್ವಾಂಟಮ್ ಕಂಪನಿಗಳಿಗೆ ಗಾಳ ಹಾಕಿದ್ದಾರೆ.

ತಂತ್ರಜ್ಞಾನ ಅಭಿವೃದ್ಧಿನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿರುವ ಎರಡು ಕಂಪನಿಗಳ ಪ್ರಮುಖ ಪ್ರತಿನಿಧಿಗಳನ್ನು ಆಂಧ್ರಪ್ರದೇಶಕ್ಕೆ ಆಹ್ವಾನಿಸಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net