

Nobel Prize 2025 : ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜಾನ್ ಕ್ಲಾರ್ಕ್, ಯೇಲ್ ವಿಶ್ವವಿದ್ಯಾಲಯ ಮತ್ತು ಸಾಂಟಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮೈಕೆಲ್ ಹೆಚ್. ಡೆವೊರೆಟ್ ಮತ್ತು ಸಾಂಟಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜಾನ್ ಎಂ. ಮಾರ್ಟಿನಿಸ್ ಅವರು 2025ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಾನ್ ಕ್ಲಾರ್ಕ್ ಅವರು ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್. 1946ರಲ್ಲಿ ಯುನೈಟೆಡ್ ಕಿಂಗಡಮ್ ಕೇಂಬ್ರಿಡ್ಜ್ನಲ್ಲಿ ಜನಿಸಿದರು. 1968ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು.
ಮೈಕೆಲ್ ಎಚ್. ಡೆವೊರೆಟ್ ಅವರು ಯೇಲ್ ವಿಶ್ವವಿದ್ಯಾಲಯ ಹಾಗೂ ಸ್ಯಾಂಟಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್. 1953ರಲ್ಲಿ ಪ್ಯಾರಿಸ್, ಫ್ರಾನ್ಸ್‌ನಲ್ಲಿ ಜನಿಸಿದರು. 1982ರಲ್ಲಿ ಪ್ಯಾರಿಸ್-ಸುಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು.
ಇನ್ನು ಜಾನ್ ಎಂ. ಮಾರ್ಟಿನಿಸ್ ಅವರು ಸ್ಯಾಂಟಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಪ್ರೊಫೆಸರ್. 1958ರಲ್ಲಿ ಜನಿಸಿದರು. 1987ರಲ್ಲಿ ಬರ್ಕ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು.
ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನಲಿಂಗ್ ಮತ್ತು ಎನರ್ಜಿ ಕ್ವಾಂಟೈಜೇಸನ್ ಆವಿಷ್ಕಾರಕ್ಕಾಗಿ ಈ ಮೂವರಿಗೆ ನೊಬೆಲ್ ಗೌರವ ಒಲಿದಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಈ ಮೂವರನ್ನು ಗುರುತಿಸಿ ಗೌರವಿಸಿದೆ. ಈ ಮೂವರು ಮಾಡಿದ ಪ್ರಯೋಗಗಳು ಅಣುಗಳು ಮತ್ತು ಕಣಗಳ ಜಗತ್ತನ್ನು ನಿಯಂತ್ರಿಸುವ ಅದ್ಭುತ ಕ್ವಾಂಟಮ್ ಪರಿಣಾಮಗಳನ್ನು ಹೆಚ್ಚು ದೊಡ್ಡ ವಸ್ತುಗಳಲ್ಲಿ ಕಾಣಬಹುದೆಂದು ತೋರಿಸಿವೆ. ಕ್ವಾಂಟಮ್ ಕಂಪ್ಯೂಟರ್‌ಗಳಂತಹ ತಂತ್ರಜ್ಞಾನಗಳಿಗೆ ಈ ಆವಿಷ್ಕಾರ ಆಧಾರವಾಗಿದೆ.
ಭೌತಶಾಸ್ತ್ರದಲ್ಲಿ ಒಂದು ದೊಡ್ಡ ಪ್ರಶ್ನೆಯಿದೆ ಅದೇನೆಂದರೆ, ಕ್ವಾಂಟಮ್ ಮೆಕ್ಯಾನಿಕ್ಸ್ ಪರಿಣಾಮಗಳನ್ನು ತೋರಿಸುವ ವ್ಯವಸ್ಥೆಯ ಗರಿಷ್ಠ ಆಕಾರ ಏನು ಎಂಬುದು. ಈ ಮೂವರು ವಿಜ್ಞಾನಿಗಳು ವಿದ್ಯುತ್ ಸರ್ಕ್ಯೂಟ್‌ನೊಂದಿಗೆ ಪ್ರಯೋಗಗಳನ್ನು ನಡೆಸಿ, ಕೈಯಲ್ಲಿ ಹಿಡಿಯಬಹುದಷ್ಟು ದೊಡ್ಡ ವ್ಯವಸ್ಥೆಯಲ್ಲಿ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಮತ್ತು ಪರಿಮಾಣೀಕೃತ ಶಕ್ತಿ ಮಟ್ಟಗಳನ್ನು ತೋರಿಸಿದರು. ಇದು ಕ್ವಾಂಟಮ್ ಭೌತಶಾಸ್ತ್ರವನ್ನು ಮ್ಯಾಕ್ರೋಸ್ಕಾಪಿಕ್ ಆಕಾರದಲ್ಲಿ ಕಾಣುವಂತೆ ಮಾಡಿತು.
ಕ್ವಾಂಟಮ್ ಮೆಕ್ಯಾನಿಕ್ಸ್ ಪ್ರಕಾರ, ಒಂದು ಕಣ ಬ್ಯಾರಿಯರ್ ಅನ್ನು ನೇರವಾಗಿ ದಾಟುವುದು ಸಾಧ್ಯ (ಟನೆಲಿಂಗ್). ಆದರೆ ದೊಡ್ಡ ಸಂಖ್ಯೆಯ ಕಣಗಳು ಇದ್ದಾಗ, ಈ ಪರಿಣಾಮಗಳು ಕಡಿಮೆಯಾಗುತ್ತವೆ. ಆದರೆ ಈ ವಿಜ್ಞಾನಿಗಳ ಪ್ರಯೋಗಗಳಲ್ಲಿ, ಸೂಪರ್‌ಕಂಡಕ್ಟರ್ ಮೂಲಕ ಹರಿಯುವ ಚಾರ್ಜ್ಡ್ ಕಣಗಳು ಸಂಪೂರ್ಣ ಸರ್ಕ್ಯೂಟ್ ಅನ್ನು ಒಂದು ಏಕ ಕಣದಂತೆ ನಡೆದುಕೊಂಡವು. ಈ ಮ್ಯಾಕ್ರೋಸ್ಕಾಪಿಕ್ ಕಣ ಸಿಸ್ಟಮ್ ಜೀರೋ-ವೋಲ್ಟೇಜ್ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ ಆದರೆ, ಕ್ವಾಂಟಮ್ ಟನೆಲಿಂಗ್ ಮೂಲಕ ಇದ್ದು ಹೊರಬರುತ್ತದೆ. ಇದರಿಂದ ವೋಲ್ಟೇಜ್ ಕಾಣುತ್ತದೆ. ಅಲ್ಲದೆ, ಈ ಸಿಸ್ಟಮ್ ಕ್ವಾಂಟಮ್ ಮೆಕ್ಯಾನಿಕ್ಸ್ ಪ್ರಕಾರ ಪರಿಮಾಣೀಕೃತವಾಗಿದ್ದು, ನಿರ್ದಿಷ್ಟ ಶಕ್ತಿ ಮಾತ್ರ ಶೋಷಿಸುತ್ತದೆ ಅಥವಾ ಹೊರಸೂಸುತ್ತದೆ.
ಆವಿಷ್ಕಾರದ ಬಗ್ಗೆ ನೊಬೆಲ್ ಕಮಿಟಿ ಚೇರ್ಮನ್ ಒಲ್ಲೆ ಎರಿಕ್‌ಸನ್ ಮಾತನಾಡಿದ್ದು, ಶತಮಾನಗಳ ಹಳೆಯ ಕ್ವಾಂಟಮ್ ಮೆಕ್ಯಾನಿಕ್ಸ್ ನಿರಂತರವಾಗಿ ಹೊಸ ಹೊಸ ಆಶ್ಚರ್ಯಗಳನ್ನು ನೀಡುತ್ತದೆ. ನಿಜಕ್ಕೂ ಇದು ಡಿಜಿಟಲ್ ತಂತ್ರಜ್ಞಾನದ ಆಧಾರವಾಗಿದೆ ಎಂದಿದ್ದಾರೆ. (ಏಜೆನ್ಸೀಸ್)