ಗುಂಡು ಹಾರಿಸಿದರು ಚಿಂತೆಯಿಲ್ಲ, ಬಂಗಾಳಿ ಭಾಷೆಯ ಅವಮಾನದ ವಿರುದ್ಧ ಹೋರಾಡುತ್ತೇನೆ: ಮಮತಾ| Mamata Banerjee

Mamata Banerjee 2
Published on

Mamata Banerjee: ಬಂಗಾಳಿ ಭಾಷೆ ಮತ್ತು ಗುರುತನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ನೀವು ನನ್ನನ್ನು ಬಂಧಿಸಿದರು, ಗುಂಡು ಹಾರಿಸಿದರು ಚಿಂತೆಯಿಲ್ಲ ನಾನು ಬಂಗಾಳಿ ಭಾಷೆಯ ಅವಮಾನದ ವಿರುದ್ದ ಹೋರಾಡುತ್ತೇನೆ ಎಂದು ಬುಧವಾರ(ಆಗಸ್ಟ್ 6) ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದ ಝಾರ್​ಗ್ರಾಮ್​ನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮಮತಾ, "ದೇಶಾದ್ಯಂತ ಬಿಜೆಪಿ, ಬಂಗಾಳಿ ಮಾತನಾಡುವ ವಲಸಿಗರ ವಿರುದ್ಧ ದೌರ್ಜನ್ಯ ನಡೆಸುತ್ತಿದೆ. ಒಬ್ಬ ವ್ಯಕ್ತಿ ಬಂಗಾಳಿ ಮಾತನಾಡಿದ ತಕ್ಷಣ ಆತನನ್ನು ಬಾಂಗ್ಲಾದೇಶಿ ಎಂದು ಪಟ್ಟಿ ಬಂಗಾಳಿ ಭಾಷೆಗೆ ಅವಮಾನ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರತ್ವ, ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಬಂಗಾಳಿಗಳ ವಿರುದ್ಧ ಬಿಜೆಪಿ ಕಿರುಕುಳ ನೀಡುವ ಅಭಿಯಾನ ಆಯೋಜಿಸುತ್ತಿದೆ. ಬಂಗಾಳಿ ಎನ್ನುವ ಭಾಷೆಯೇ ಇಲ್ಲ ಎಂದು ಹೇಳುತ್ತಿದೆ. ನಾನು ಪ್ರಪಂಚದ ಮುಂದೆ ಅವರನ್ನು ಬಯಲು ಮಾಡುತ್ತೇನೆ. ನೀವು ಬಂಗಾಳಿ ಭಾಷೆ, ಜನರ ಮೇಲೆ ದಾಳಿ ಮಾಡಿದ್ರೆ ನಾನು ಸುಮ್ಮನಿರಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ (SIR) ವಿರುದ್ಧ ವಾಗ್ದಾಳಿ ನಡೆಸಿದರು. ಮತದಾರರ ಪಟ್ಟಿಯನ್ನು ಬಿಜೆಪಿ ಪಟ್ಟಿಯನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ಹಿಂಬಾಗಿಲಿನ ಮೂಲಕ ಜಾರಿಗೆ ತರುವ ದೊಡ್ಡ ಯೋಜನೆಯ ಭಾಗವಾಗಿ ಈ ಪ್ರಕ್ರಿಯೆ ನಡೆದಿದೆ ಎಂದು ಬ್ಯಾನರ್ಜಿ ಆರೋಪಿಸಿದರು.

ಬಂಗಾಳಿಯಲ್ಲಿ ಮಾತನಾಡಿದ ಮಾತ್ರಕ್ಕೆ ಒಬ್ಬ ವ್ಯಕ್ತಿಯನ್ನು ಬಾಂಗ್ಲಾದೇಶಿ ಎಂದು ಹೇಗೆ ಹಣೆಪಟ್ಟಿ ಕಟ್ಟಬಹುದು?" ಎಂದು ಪ್ರಶ್ನಿಸಿದ ಅವರು ಇದು ನಮ್ಮ ಜನರನ್ನು ಕಿರುಕುಳ ನೀಡುವ ಪಿತೂರಿ ಅಲ್ಲದೇ ಬೇರೆನೂ ಅಲ್ಲ. ಪೌರತ್ವ ದಾಖಲೆ ಕೇಳುವ ಬಿಜೆಪಿ ನಾಯಕರು ಸ್ವತಃ ಜನನ ಪ್ರಮಾಣ ಪತ್ರಗಳನ್ನು ಹೊಂದಿದ್ದಾರೆಯೇ? ಇತರರ ಪೌರತ್ವದ ಗುರುತು ಪ್ರಶ್ನಿಸಲು ಅವರಿಗೆ ಯಾವ ಹಕ್ಕಿದೆ? ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಹೀಗಿನಿಂದಲೇ ಭಾಷಾ ಅಭಿಮಾನದ ದಾಳ ಉರುಳಿಸಿರುವ ಮಮತಾ ಬ್ಯಾನರ್ಜಿ, ತಮ್ಮನ್ನು ತಾವು ಬಂಗಾಳಿಗಳ ಹೆಮ್ಮೆ, ಭಾಷೆ ಹಾಗೂ ಗುರುತಿನ ರಕ್ಷಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net