ಕಾಸಿಲ್ಲದೆ ನನಸಾಗುತ್ತಿಲ್ಲ ಸುಮಾರ್ಗ ಕನಸು

Road
Published on

ಬೆಂಗಳೂರು: ಕೈಗಾರಿಕೆ, ಉದ್ಯಮಗಳಿಗೆ ಮಾತ್ರವಲ್ಲದೆ ರಾಜ್ಯದ ಗ್ರಾಮೀಣ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ ಸರ್ಕಾರದ ಯೋಜನೆಗೂ ಆರ್ಥಿಕ ಕುಸಿತದ ಬಿಸಿ ತಟ್ಟಿದೆ. ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ 24,246 ಕಿಲೋ ಮೀಟರ್ ಗ್ರಾಮೀಣ ರಸ್ತೆಯನ್ನು ಆದ್ಯತಾ ರಸ್ತೆಯನ್ನಾಗಿ ಗುರುತಿಸಿ ಸದಾ ಸುಸ್ಥಿತಿಯಲ್ಲಿಡಲು ‘ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ ಯೋಜನೆ’ ರೂಪಿಸಿತ್ತು. ಸೂಕ್ತ ಹಣಕಾಸು ಲಭ್ಯತೆ ಇಲ್ಲದೆ ಯೋಜನೆ ಟೇಕಾಫ್ ಆಗಲೇ ಇಲ್ಲ.

ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಸಾಕಷ್ಟು ಮುತುವರ್ಜಿ ವಹಿಸಿ ಈ ಯೋಜನೆ ರೂಪಿಸಿದ್ದರು. ರಾಜಕೀಯ ಬೆಳವಣಿಗೆಯಲ್ಲಿ ಸರ್ಕಾರ ಬದಲಾಯಿತು. ಆರ್ಥಿಕ ಕುಸಿತದ ಪರಿಣಾಮವೂ ಬೀರಲಾರಂಭಿಸಿತು. ಯೋಜನೆ ಬಗ್ಗೆ ಹೊಸ ಸರ್ಕಾರ ಹೆಚ್ಚು ಗಮನ ಹರಿಸಲಿಲ್ಲ.

ರಾಜ್ಯದಲ್ಲಿ ಒಟ್ಟಾರೆ 54 ಸಾವಿರ ಕಿ.ಮೀ. ಗ್ರಾಮೀಣ ಆಸ್ಪಾಲ್ಟ್ ರಸ್ತೆ ಇದೆ. ಇದರಲ್ಲಿ 24 ಸಾವಿರ ಕಿ.ಮೀ. ರಸ್ತೆಯನ್ನು ಆದ್ಯತಾ ರಸ್ತೆಯನ್ನಾಗಿ ಗುರುತಿಸಿ ಸದಾ ಸುಸ್ಥಿತಿಯಲ್ಲಿಡಲು ಉದ್ದೇಶಿಸಲಾಗಿತ್ತು. ಗುರುತಿಸಿರುವುದರ ಪೈಕಿ 4246 ಕಿ.ಮೀ. ರಸ್ತೆ ಉತ್ತಮ ಸ್ಥಿತಿಯಲ್ಲಿದೆ. ಉಳಿದ 20 ಸಾವಿರ ಕಿ.ಮೀ. ರಸ್ತೆಗೆ 7,182 ಕೋಟಿ ರೂ. ಅನ್ನು ಹಂತಹಂತವಾಗಿ ಬಿಡುಗಡೆ ಮಾಡಿ 5 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಂಡು ಸಂಪುಟದ ಒಪ್ಪಿಗೆ ಪಡೆಯಲಾಗಿತ್ತು. ರಾಜ್ಯ ಸರ್ಕಾರ ಯೋಜನೆ ರೂಪಿಸುವಾಗ ಕೇಂದ್ರದಿಂದ ಯಾವುದೇ ಸ್ಪಷ್ಟತೆ ಸಿಕ್ಕಿರಲಿಲ್ಲ. ಇದೀಗ 7 ಸಾವಿರ ಕಿ.ಮೀ. ಗ್ರಾಮೀಣ ರಸ್ತೆಗೆ ಕೇಂದ್ರದ ಪಿಎಂಜಿಎಸ್​ವೈನ ಮೂರನೇ ಹಂತದ ನೆರವು ಸಿಗುವ ಖಚಿತತೆ ಸಿಕ್ಕಿದೆ. ಉಳಿದ 13 ಸಾವಿರ ಕಿ.ಮೀ. ರಸ್ತೆಗೆ ರಾಜ್ಯ ಸರ್ಕಾರ ಹಣ ಹೊಂದಿಸಿಕೊಳ್ಳಬೇಕಾಗಿದೆ.

ಕೊರತೆ ನೀಗಿಸುವ ಲೆಕ್ಕಾಚಾರ: ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ತುರ್ತು ದುರಸ್ತಿಯಾಗಬೇಕಾದ ರಸ್ತೆಗಳ ಪಟ್ಟಿ ಕಳಿಸಿದರೆ ಅದರ ಆಧಾರದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಲು ಉದ್ದೇಶಿಸಿತ್ತು. ಸರ್ಕಾರಕ್ಕೆ ಆದಾಯ, ಅನುದಾನ ಕೊರತೆಯಾಗುತ್ತಿದ್ದಂತೆ ಯಾವ ಯೋಜನೆ ಮುಂದೂಡಬಹುದೆಂಬ ಲೆಕ್ಕಾಚಾರ ಶುರುವಾಯಿತು. ‘ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ ಯೋಜನೆ’ ಕೈಬಿಟ್ಟು ಆದ್ಯತೆ ಮೇಲೆ ಕೆಲವಷ್ಟೇ ರಸ್ತೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.

ರಾಜಕೀಯ ಜಗಳ, ಗೊಂದಲದಲ್ಲಿ ಸರ್ಕಾರ ಮುಳುಗಿದ್ದು, ರಾಜ್ಯದ ಅಭಿವೃದ್ಧಿ ಕಡೆಗಣಿಸ ಲಾಗಿದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. | ಕೃಷ್ಣ ಬೈರೇಗೌಡ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net