

ಶಿವಮೊಗ್ಗ: ಸರ್ಕಾರದ ಯಾವುದೇ ಕಚೇರಿಗೆ ಹೋದರೂ ಲಂಚವೇ ಪ್ರಾಮುಖವಾಗುತ್ತಿದೆ. ಹಣವಿಲ್ಲದೆ ಯಾವ ಕೆಲಸಗಳೂ ಆಗುವುದಿಲ್ಲ ಎಂಬ ಪರಿಸ್ಥಿತಿ ಸಾರ್ವಜನಿಕ ಆಡಳಿತದಲ್ಲಿದೆ. ಅದಕ್ಕೆ ಕಡಿವಾಣ ಹಾಕಬೇಕಾದರೆ ಮುಖ್ಯವಾಗಿ ಸಾರ್ವಜನಿಕರು ಲೋಕಾಯುಕ್ತ ಜತೆ ಕೈಜೋಡಿಸಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.
ನಗರದ ಎಟಿಎನ್‌ಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿಬಿಆರ್ ಕಾನೂನು ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಪಾತ್ರ ಕುರಿತು ಉಪನ್ಯಾಸ ನೀಡಿದ ಅವರು, ಸಾರ್ವಜನಿಕ ಆಡಳಿತದಲ್ಲಿ ಉಂಟಾಗುತ್ತಿರುವ ತೊಡಕುಗಳನ್ನು ನಿವಾರಿಸಲು ಲೋಕಾಯುಕ್ತ ಕಾಯ್ದೆ ಉತ್ತಮ ಕಾನೂನು ಎಂದು ತಿಳಿಸಿದರು.
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಮೂಲ ಸೌಕರ್ಯ ಒದಗಿಸುವುದು ಆಡಳಿತದ ಕರ್ತವ್ಯ. ಆದರೆ ಭ್ರಷ್ಟಾಚಾರ, ದುರಾಡಳಿತದಿಂದ ಮನುಷ್ಯನಿಗೆ ಬದುಕಲು ಬೇಕಾದ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾದಾಗ ಲೋಕಾಯುಕ್ತ ವ್ಯವಸ್ಥೆ ಸಾಮಾನ್ಯ ಜನರ ಪರವಾಗಿ ನಿಲ್ಲುತ್ತದೆ ಎಂದರು.
ಸಮಯೋಚಿತವಾಗಿ ಕಾನೂನು ಬಳಕೆ ಮಾಡಿಕೊಳ್ಳಬೇಕು. ಕರ್ತವ್ಯ ಮತ್ತು ಹಕ್ಕು ಒಂದು ನಾಣ್ಯದ ಎರಡು ಮುಖಗಳು. ಸತ್ತ ನಂತರವೂ ವ್ಯಕ್ತಿ ಮೃತದೇಹವನ್ನು ಕಾನೂನು ಕಾಪಾಡುತ್ತದೆ. ಅಷ್ಟರ ಮಟ್ಟಿಗೆ ಕಾನೂನು ಮಾನವ ಹಕ್ಕುಗಳನ್ನು ಎತ್ತಿಹಿಡಿಯುತ್ತಿದೆ. ಮೌಢ್ಯ ಹೆಚ್ಚು ಪ್ರಬಲವಾದಾಗ ಕಾನೂನು ಮಧ್ಯಪ್ರವೇಶಿಸುತ್ತದೆ. ಅದಕ್ಕೆ ಲಿಂಗ ತಾರತಮ್ಯ ಹೋಗಲಾಡಿಸಿ ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಹೇಳುವ ಕಾಯ್ದೆಗಳು, ತೀರ್ಪುಗಳು ಉದಾಹರಣೆ. ಒಬ್ಬರ ಹಕ್ಕುಗಳನ್ನು ಇನ್ನೊಬ್ಬರು ಕಾಪಾಡುವುದು ಕೂಡ ಮೂಲ ಕರ್ತವ್ಯವೇ ಆಗಿದೆ ಎಂದು ಹೇಳಿದರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಆಧುನಿಕತೆ ಬೆಳೆದಂತೆಲ್ಲ ಭ್ರಷ್ಟಾಚಾರವು ತನ್ನ ಪ್ರಾಬಲ್ಯ ಬೆಳೆಸಿದೆ. ಲೋಕಾಯುಕ್ತ ವ್ಯವಸ್ಥೆ ನೊಂದವರ ದನಿಯಾಗಲಿ ಎಂದು ಆಶಿಸಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ನಿರ್ದೇಶಕರಾದ ಎಂ.ಆರ್.ಸೀತಾಲಕ್ಷ್ಮೀ, ಅನಂತದತ್ತ, ಟಿ.ಆರ್.ಅಶ್ವತ್ಥನಾರಾಯಣ ಶ್ರೇಷ್ಠಿ, ಶಿವಕುಮಾರ್, ಕುಲಸಚಿವ ಪ್ರೊ. ಎನ್.ಕೆ.ಹರಿಯಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಪ್ರಾಚಾರ್ಯೆ ಡಾ. ಎ.ಅನಲಾ ಉಪಸ್ಥಿತರಿದ್ದರು.