ಚಾಣಕ್ಯ ವಿ.ವಿ.ಗೆ ಜಾಗ ಕೊಟ್ಟಾಗ  ಕಣ್ಣಮುಚ್ಚಿ ಕುಳಿತಿದ್ದರಾ? ; ಎಂ. ಬಿ. ಪಾಟೀಲ ಪ್ರಶ್ನೆ

MB PATIL
Published on

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿ.ಎ. ನಿವೇಶನ ಕೊಟ್ಟಿದ್ದರಲ್ಲಿ ತಪ್ಪೇನಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿವೇಶನವನ್ನು ಕಾನೂನು ಪ್ರಕಾರವೇ ನಿಗದಿತ ಬೆಲೆಗೆ ಕೊಡಲಾಗಿದೆ. ಅವರು ಅಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ಬಿಜೆಪಿ ನಾಯಕ ಲಹರ್ ಸಿಂಗ್ ಆರೋಪಿಸಿರುವಂತೆ ಯಾವ ನಿಯಮವೂ ಉಲ್ಲಂಘನೆ ಆಗಿಲ್ಲ ಎಂದು ಹೇಳಿದರು.

ರಾಹುಲ್ ಖರ್ಗೆ ಅವರು ಐಐಟಿ ಪದವೀಧರರಾಗಿದ್ದಾರೆ. ಅವರ ಕುಟುಂಬವು ನಾನಾ ಬಗೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಕೆಐಎಡಿಬಿ ನಿಯಮಗಳ ಪ್ರಕಾರ ಸಿ.ಎ ನಿವೇಶನಗಳಲ್ಲಿ ಆರ್‌ಡಿ ಕೇಂದ್ರಗಳು, ಉತ್ಕೃಷ್ಟತಾ ಕೇಂದ್ರಗಳು, ತಾಂತ್ರಿಕ ಸಂಸ್ಥೆಗಳು, ಕೌಶಲಾಭಿವೃದ್ಧಿ, ಸರ್ಕಾರಿ ಕಚೇರಿಗಳು, ಬ್ಯಾಂಕು, ಆಸ್ಪತ್ರೆ, ಹೋಟೆಲ್, ಪೆಟ್ರೋಲ್ ಬಂಕ್, ಕ್ಯಾಂಟೀನ್, ವಸತಿ ಸೌಲಭ್ಯ ಇತ್ಯಾದಿಗಳ ಅಭಿವೃದ್ಧಿಗೆ ಅವಕಾಶವಿದೆ. ಆಸಕ್ತರು ಯಾರು ಬೇಕಾದರೂ ಇದಕ್ಕೆ ಪ್ರಯತ್ನಿಸಬಹುದು. ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಶಿಫಾರಸಿನ ನಂತರವಷ್ಟೇ ಇವುಗಳ ಹಂಚಿಕೆಯಾಗುತ್ತದೆ. ಏರೋಸ್ಪೇಸ್ ಪಾರ್ಕಿನಲ್ಲಿ ರಾಹುಲ್ ಅವರಿಗೆ ಕೈಗಾರಿಕಾ ನಿವೇಶನವನ್ನೇನೂ ಕೊಟ್ಟಿಲ್ಲ. ಬದಲಿಗೆ, ಸಿ.ಎ.ನಿವೇಶನವನ್ನು ಆರ್ ಆಂಡ್ ಡಿ ಕೇಂದ್ರ ಸ್ಥಾಪನೆಗಾಗಿ ನಿಗದಿತ ಬೆಲೆಗೇ ಕೊಡಲಾಗಿದೆ. ಇದರಲ್ಲಿ ಅವರಿಗೆ ಯಾವ ರಿಯಾಯಿತಿಯನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಚಾಣಕ್ಯ ವಿ.ವಿ.ಗೆ ಕೊಟ್ಟಾಗ ಏನು ಮಾಡುತ್ತಿದ್ದರು?

ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೈಗಾರಿಕಾ ಪ್ರದೇಶದಲ್ಲೇ 116 ಎಕರೆಯನ್ನು ಬರೀ 50 ಕೋಟಿ ರೂ.ಗೆ ಕೊಡಲಾಗಿದೆ. ಅದರಿಂದ 137 ಕೋಟಿ ರೂ. ಬೊಕ್ಕಸಕ್ಕೆ ನಷ್ಟವಾಗಿದೆ. ಆಗ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಕಣ್ಣುಮುಚ್ಚಿ ಕುಳಿತಿದ್ದರಾ? ಆ ಬಗ್ಗೆಯೂ ಚಕಾರ ಎತ್ತಬಹುದಲ್ಲವೇ ಎಂದು ಪ್ರಶ್ನಿಸಿದರು.

ಸಿಎ ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ:

ಹಿಂದೆಲ್ಲ ಕೆಐಎಡಿಬಿ ಮಂಡಳಿಯೇ ಸಿ.ಎ. ನಿವೇಶನಗಳನ್ನು ಹಂಚುತ್ತಿತ್ತು. ಆದರೆ, ನಾನು ಸಚಿವನಾದ ಮೇಲೆ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಅನುಮೋದನೆ ನೀಡುವ ಹಾಗೆ ಪಾರದರ್ಶಕ ವ್ಯವಸ್ಥೆ ಜಾರಿ ಮಾಡಲಾಗಿದೆ. ಅಲ್ಲದೆ ಮೊದಲ ಬಾರಿಗೆ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟರಿಗೆ ಶೇ 24.10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಲಹರ್ ಸಿಂಗ್ ಈ ಸತ್ಯವನ್ನು ಅರಿತು ಮಾತನಾಡುವುದು ಒಳ್ಳೆಯದು ಎಂದು ಎಂ.ಬಿ.ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net