

ಹೈದರಾಬಾದ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ 44 ವರ್ಷದ ಎಚ್ಐವಿ ರೋಗಿಯೊಬ್ಬ ಶನಿವಾರ ರಾತ್ರಿ ಮೃತಪಟ್ಟಿದ್ದು, ಆತನ ಶವ ಸಾಗಿಸಲು ವಾಹನಗಳೇ ಸಿಗಲಿಲ್ಲ. ಲಾಕ್ಡೌನ್ ಕಾರಣದಿಂದ ವಾಹನಗಳು ಸಿಗದ ಕಾರಣ ಕೊನೆಗೆ ಪೊಲೀಸರು ಪೌರಕಾರ್ಮಿಕರ ನೆರವಿನೊಂದಿಗೆ ಸೈಕಲ್ ಮೇಲೆ ಶವವನ್ನು ಸಾಗಿಸಿ ಆಸ್ಪತ್ರೆಗೆ ತಲುಪಿಸಿದ ಘಟನೆ ಭಾನುವಾರ ನಡೆದಿದೆ.
ವ್ಯಕ್ತಿಗೆ ಕಳೆದ ಕೆಲವು ವರ್ಷಗಳಿಂದ ಎಚ್ಐವಿ ಇದ್ದು, ಬಡವರಿಗಾಗಿ ಇರುವ ನಿರಾಶ್ರಿತರ ತಾಣದಲ್ಲಿದ್ದರು. ಶನಿವಾರ ರಾತ್ರಿ ಅಲ್ಲಿ ಮೃತಪಟ್ಟಿದ್ದಾರೆ. ಶವದಿಂದ ಕೆಟ್ಟ ವಾಸನೆ ಬರತೊಡಗಿದಾಗ ಪೊಲೀಸರಿಗೆ ಮಾಹಿತಿ ಹೋಗಿದೆ. ಪೋಸ್ಟ್ಮಾರ್ಟಂಗಾಗಿ ಆಸ್ಪತ್ರೆಗೆ ಸಾಗಿಸುವುದಕ್ಕೆ ಯಾರೂ ನೆರವಾಗಲಿಲ್ಲ. ವಾಹನವೂ ಸಿಗಲಿಲ್ಲ.
ಹೀಗಾಗಿ ಕೊನೆಗೆ ಪೌರಕಾರ್ಮಿಕ ನೆರವು ಕೋರಲಾಗಿದೆ. ಆ್ಯಂಬುಲೆನ್ಸ್ನವರೂ ಸಿಗದ ಕಾರಣ, ಬೆಡ್ಶೀಟ್ನಲ್ಲಿ ವ್ಯಕ್ತಿಯ ಶವವನ್ನು ಸುತ್ತಿ ಸೈಕಲ್ ಮೇಲೆ ಇಟ್ಟು ಆಸ್ಪತ್ರೆಗೆ ಪೌರಕಾರ್ಮಿಕರೇ ಸಾಗಿಸಿಕೊಟ್ಟಿದ್ದಾರೆ. ವ್ಯಕ್ತಿ ನಿರ್ಮಲ್ ಜಿಲ್ಲೆಯವರಾಗಿದ್ದು, ಅವರ ಕುಟುಂಬದವರಿಗೆ ಸಾವಿನ ಸುದ್ದಿ ತಲುಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)