

ಜೊಳ್ಳು ಮಾತೆಂದಡೆ ನಲಿನಲಿದು ನುಡಿವರು/ಕಾಳು ಕೆಲಸವೆಂದರೆ ನಲಿನಲಿದು ಮಾಡುವರು/ ಶ್ರೀಗುರು ಸೇವೆಯಂದಡೆ ನಿತ್ಯ ಲಿಂಗಾರ್ಚನೆ/ಮತ್ತೆ ಪಂಚಾಕ್ಷರಿ ಜಪವೆಂದರೆ ಅಳಲುವರು ಬಳಲುವರು/ ಇಂತಪ್ಪ ದುರುಳರಿಗೆ ದುಃಖವೇ ಪ್ರಾಪ್ತಿಯಲ್ಲದೆ ನಿಜಸುಖವೆಂಬುದಿಲ್ಲ...
ನಮ್ಮ ಶರಣರು ಮಾತು ಜ್ಯೋತಿರ್ಲಿಂಗ ಎಂದಿದ್ದಾರೆ. ಅದಕ್ಕೆ ಅಷ್ಟು ಬೆಲೆ ಇತ್ತು. ಮತ್ತೆ ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬಸವಣ್ಣನವರು ತಿಳಿಸಿದ್ದಾರೆ. ದೇವರೂ ನುಡಿವ ಮಾತಿಗೆ ಹೌದೌದು ಅನ್ನಬೇಕು. ಕಾಲಹರಟೆ, ಅಲ್ಲಸಲ್ಲದ ವಿಚಾರ ಮಾತನಾಡುವುದೆಂದರೆ ಈ ಜನರಿಗೆ ಬಲು ಖುಷಿ. ಮತ್ತೆ ಕೆಟ್ಟ ಕೆಲಸವೆಂದರೆ ನಲಿನಲಿದು ಮಾಡು ವರು. ಒಳ್ಳೆಯ ಕೆಲಸ ಮಾಡುವುದೆಂದರೆ ಆಗದು. ಯಾರಾದರೂ ನೂರು ಕೆಲಸ ಒಳ್ಳೆಯದು ಮಾಡಿ ಒಂದು ತಪ್ಪು ಮಾಡಿದರೆ ಅದೇ ವಿಚಾರ ಪ್ರಚಾರ ಮಾಡುವವರೇ ಹೆಚ್ಚು. ಮತ್ತೆ ಧಾರ್ವಿುಕ ಕೆಲಸದ ಕಡೆ ಮನಸು ಹರಿಯುವುದಿಲ್ಲ. ಶ್ರೀಗುರುಗಳ ಸೇವೆ ಮಾಡುವುದೆಂದರೆ ಆಗುವುದಿಲ್ಲ.
ನಿತ್ಯಲಿಂಗ, ರುದ್ರಾಕ್ಷಿ ಧರಿಸಿಕೊಳ್ಳಿರಿ ಎಂದರೆ ಆಗದು. ಇಂತಹ ಜನರಿಗೆ ಮಂತ್ರ ಜಪ ಮಾಡಿರಿ, ಅದರಿಂದ ಮುಕ್ತಿ ಮಾರ್ಗಕ್ಕೆ ಹಾದಿ ಸಿಗುವುದೆಂದರೂ ಆಗದು. ಇದೆಲ್ಲ ಹೇಳಿದವರಿಗೆ ಅಳಲು, ಬಳಲಿಕೆ, ಬೇಸರ ಬರುವುದು. ಅದಕ್ಕೆ ಕಡಕೋಳ ಮಡಿವಾಳಪ್ಪನವರು ತಮ್ಮ ಪದ್ಯದಲ್ಲಿ ಹೀಗೆ ತಿಳಿಸುತ್ತಾರೆ. ‘ಯಾತರ ಕಟಿಪಿಟಿ ಒಂದಿನ ಹೋಗೋದು ಲಠಿಪಿಟಿ, ಸಂಸಾರ ಮಾಡ್ತಿ ನೀ ಜಟಿಪಿಟಿ ಭಕ್ತಿಮಾಡು ಅದು ತಿಟಿಪಿಟಿ’ ಎಂದಿದ್ದಾರೆ. ಈ ತರದ ಮಾನವರಿಗೆ ಜೀವನದಲ್ಲಿ ಒಳ್ಳೆಯದು ಮಾಡದಿದ್ದರೆ ದುಃಖವೇ ಪ್ರಾಪ್ತಿಯಾಗುವುದು. ನಿಜಸುಖ ಎಂಬುದು ಕನಸಿನ ಮಾತು. ಇಂತಹವರಿಗೆ ದೇವರು ಮತ್ತೆ ತಿರುಗಿಬಾರದ ಭವಂಗಳಲ್ಲಿ ಬರಿಸುವನೆಂದು ಸ್ವತಂತ್ರ ಸಿದ್ಧಲಿಂಗ ಶ್ರೀ ತಿಳಿಸಿದ್ದಾರೆ. ಇದನ್ನರಿತು ಧರ್ಮವಂತರಾಗಿ ಬಾಳಿ.