

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ದೇಶದಲ್ಲಿ ‘ಎಲೆಕ್ಟ್ರಿಫೈಡ್ ಇಂಡಿಯಾ’ ಯುಗ ಆರಂಭವಾಗಿದ್ದು, ಇವಿ ವಾಹನಕ್ಕೆ ಪ್ರೋತ್ಸಾಹ ನೀಡುವ ವಿಷಯದಲ್ಲಿ ರಾಜ್ಯಗಳ ನಡುವೆ ಪೈಪೋಟಿ ಶುರುವಾಗಿದೆ. ಈ ವಿಷಯದಲ್ಲಿ ಯಾವ ರಾಜ್ಯ ಸರ್ಕಾರ ಯಾವ ತೀರ್ಮಾನ ಮಾಡುತ್ತದೆ ನೋಡಿಕೊಂಡು ಇತರೆ ರಾಜ್ಯಗಳು ಇನ್ನಷ್ಟು ಪ್ರೋತ್ಸಾಹದಾಯಕ ಯೋಜನೆ ಪ್ರಕಟಿಸುವ ಧಾವಂತ ತೋರುತ್ತಿವೆ. ಪೆಟ್ರೋಲ್ ದರ ಗಣನೀಯವಾಗಿ ಏರಿಕೆಯಾಗುತ್ತಿದ್ದಂತೆ ಜನರ ಗಮನ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳತ್ತ ತಿರುಗಿದೆ. ಸರ್ಕಾರಗಳು ಕೂಡ ಈ ಕ್ಷೇತ್ರದಲ್ಲಿ ಆಗುವ ಬೆಳವಣಿಗೆಗಳನ್ನು ಗಮನಿಸಿ ಗಮನ ಕೊಡುತ್ತಿವೆ.
ಕರ್ನಾಟಕದ ವಿಚಾರಕ್ಕೆ ಬಂದರೆ ಇವಿ ಕ್ಷೇತ್ರದ ಹೂಡಿಕೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಗಮನ ಕೊಡುತ್ತಿದೆ. ಇನ್ನೊಂದೆಡೆ ಗುಜರಾತ್, ದೆಹಲಿ, ಮಹಾರಾಷ್ಟ್ರ, ರಾಜಸ್ತಾನದಲ್ಲಿ ಇವಿ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ ಸಬ್ಸಿಡಿ ಘೋಷಿಸಿವೆ. ಈ ಪಟ್ಟಿಯಲ್ಲಿ ಕರ್ನಾಟಕ ಇಲ್ಲ ಎಂಬುದು ರಾಜ್ಯದಲ್ಲಿ ಚರ್ಚಾರ್ಹ ವಿಷಯವಾಗಿದೆ.
ಇಷ್ಟು ದಿನ ಬ್ಯಾಟರಿ ಚಾಲಿತ ವಾಹನಗಳ ಮೈಲೇಜ್ ಬಗ್ಗೆ ಗೊಂದಲಗಳಿದ್ದವು, ಈಥರ್ ಎಲೆಕ್ಟ್ರಿಕ್ ವಾಹನ ಸದ್ದು ಮಾಡಿದರೂ ಅನುಮಾನಗಳು ಬಾಕಿ ಉಳಿದಿದ್ದವು. ಆದರೆ, ಆ.15ರಂದು ಬಿಡುಗಡೆಯಾದ ಓಲಾ ಹಾಗೂ ಸಿಂಪಲ್ ಎನರ್ಜಿಯ ಇವಿ ವಾಹನಗಳು ಜನರ ಉತ್ಸಾಹ ಹೆಚ್ಚಿಸಿದೆ. ಕೈಗೆಟುಕಲಾರದಂತಹ ಬೆಲೆ ಏನಲ್ಲ ಎಂಬ ಮಾತುಗಳು ಸಾಮಾನ್ಯರಲ್ಲಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲೂ ಸಹ ಇವಿ ವಾಹನ ಖರೀದಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಳೆದ ತಿಂಗಳಷ್ಟೇ ಪರಿಷ್ಕೃತ ಇವಿ ಪಾಲಿಸಿ ಪ್ರಕಟಿಸಿದ್ದ ಕರ್ನಾಟಕವು, ಇವಿ ವಾಹನಗಳ ಮೇಲಿನ ರಸ್ತೆ ತೆರಿಗೆ ವಿನಾಯಿತಿ ನೀಡುವುದಾಗಿ ಮತ್ತು ಯಾವುದೇ ರೀತಿ ನೋಂದಣಿ ಶುಲ್ಕ ಪಡೆಯಲ್ಲ ಎಂದು ಪ್ರಕಟಿಸಿದೆ. ಇದರ ಹೊರತಾಗಿಯೂ ರಾಜ್ಯ ಸರ್ಕಾರ ಯಾವುದೇ ರೂಪದಲ್ಲಿ ಸಬ್ಸಿಡಿ ಪ್ರಕಟಿಸಬೇಕೆಂಬ ಅಪೇಕ್ಷೆಯಲ್ಲಿ ಜನರಿದ್ದಾರೆ. ಸದ್ಯ ಕೇಂದ್ರದಿಂದ ಮಾತ್ರ 10 ಸಾವಿರ ರೂ. ಸಬ್ಸಿಡಿ ಸಿಗುತ್ತಿದೆ. ಕೇಂದ್ರದ ಸಬ್ಸಿಡಿ ಹೊರತಾಗಿ ಮಹಾರಾಷ್ಟ್ರ (ಗರಿಷ್ಠ 10 ಸಾವಿರ ರೂ.) ಗುಜರಾತ್ (20 ಸಾವಿರ ರೂ.), ದೆಹಲಿ (5 ಸಾವಿರ ರೂ.) ಸಬ್ಸಿಡಿ ಕೊಡುತ್ತಿದೆ.
ರಾಜ್ಯದಲ್ಲಿ ಇವಿ ಕ್ಲಸ್ಟರ್ ಸ್ಥಾಪಿಸಲು ಆಸಕ್ತಿ ತೋರಿಸಿದ್ದು, ಹಾರೋಹಳ್ಳಿಯ 200-250 ಎಕರೆಯಲ್ಲಿ ಹೂಡಿಕೆದಾರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಕೆಐಎಡಿಬಿಯಿಂದ ಭೂ ಸ್ವಾಧೀನ ಪ್ರಕ್ರಿಯೆ ಮುಗಿದು ಮೂಲಸೌಕರ್ಯ ಸಿದ್ಧಪಡಿಸುವ ಕಾರ್ಯ ಕೊನೆ ಹಂತಕ್ಕೆ ಬಂದಿದೆ. ಆಗಸ್ಟ್ ಅಂತ್ಯದೊಳಗೆ ಸಕಲ ಸಜ್ಜಾಗಲಿದೆ. ಹೆಚ್ಚುವರಿಯಾಗಿ ಕ್ಲಸ್ಟರ್ ವಿಸ್ತರಿಸಲು ಸಹ ಯೋಜನೆ ಸಿದ್ಧವಾಗಿದೆ. ಇನ್ನು ಇವಿ ಕ್ಷೇತ್ರದ ಹೂಡಿಕೆದಾರರಿಗೆ ಶೇ.15 ಕ್ಯಾಪಿಟಲ್ ಸಬ್ಸಿಡಿ, ಐದು ವರ್ಷ ಉತ್ಪಾದನಾ ಪ್ರೋತ್ಸಾಹಕ ಸಬ್ಸಿಡಿ, ಶೇ.100 ಸ್ಟಾಂಪ್ ಡ್ಯೂಟಿ ವಿನಾಯಿತಿ, ಶೇ.0.1.ರಷ್ಟು ಮಾತ್ರ ನೋಂದಣಿ ಶುಲ್ಕ, ಇಟಿಪಿ (ಪ್ಲಾಂಟ್) ವೆಚ್ಚದ ಮೇಲೆ ಶೇ.50ರಷ್ಟು ಸಬ್ಸಿಡಿ, ಕೌಶಲ್ಯ ಅಭಿವೃದ್ಧಿ ಸಬ್ಸಿಡಿ- ಶೇ.50ರಷ್ಟು ಸ್ಟೈಫಂಡ್ ಕೊಡುವುದಾಗಿ ಸರ್ಕಾರ ಪ್ರಕಟಿಸಿದೆ. ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟರೆ ವಾಹನ ಮೇಲಿನ ದರ ಕಡಿಮೆ ಆಗಬಹುದು, ಅದರ ಲಾಭ ಗ್ರಾಹಕರಿಗೆ ಆಗಬಹುದು ಎಂಬುದು ಸರ್ಕಾರದ ಲೆಕ್ಕಾಚಾರ. ಆದರೆ, ಈ ಹಂತದಲ್ಲಿ ಗ್ರಾಹಕರಿಗೆ ಲಾಭ ವರ್ಗಾವಣೆ ಆಗುವುದು ಅನುಮಾನ.
ವಿಶ್ವದ ಅತಿದೊಡ್ಡ ಇವಿ ದ್ವಿಚಕ್ರ ವಾಹನ ಉತ್ಪಾದನಾ ಘಟಕ ಕರ್ನಾಟಕದ ಬದಲು ತಮಿಳುನಾಡಿಗೆ ಶಿಫ್ಟ್ ಆಯಿತು. ಇದು ದುರ್ದೈವದ ಸಂಗತಿ ಎಂಬುದು ಕಾಂಗ್ರೆಸ್ ಅಭಿಪ್ರಾಯವಾಗಿದೆ. ಇವಿ ಪಾಲಿಸಿ ಮೊದಲು ತಂದಿದ್ದು ನಮ್ಮ ರಾಜ್ಯ, ಇಂದು ನಮ್ಮನ್ನು ಇತರೆ ರಾಜ್ಯಗಳು ಅನುಕರಣೆ ಮಾಡಿ ಈ ಕ್ಷೇತ್ರದ ಬೆಳವಣಿಗೆ ಲಾಭ ಮಾಡಿಕೊಳ್ಳುತ್ತಿದ್ದೇವೆ, ನಾವು ಹಿಂದೆ ಬಿದ್ದಿದ್ದೇವೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆ ಕೂಡ ಹೂಡಿಕೆದಾರರ ಮೇಲೆ ಪರಿಣಾಮ ಬೀರಲಿದೆ. ರಾಜಕೀಯ ಸ್ಥಿರತೆ ಇದ್ದಾಗ ತಮಗೆ ಪೂರಕ ಪಾಲಿಸಿ ಆಗಲಿದೆ ಎಂಬ ನಂಬಿಕೆಯಲ್ಲಿ ಹೂಡಿಕೆದಾರರು ಇರುತ್ತಾರೆ ಎಂದು ಪ್ರಿಯಾಂಕ್ ತಿಳಿಸಿದ್ದಾರೆ.
ಇವಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಲಾಭ ತಮ್ಮ ರಾಜ್ಯಕ್ಕೆ ಆಗಬೇಕೆಂಬ ನಿಟ್ಟಿನಲ್ಲಿ ತಮಿಳುನಾಡು, ಗುಜರಾತ್, ಆಂಧ್ರ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳು ಕರ್ನಾಟಕದೊಂದಿಗೆ ಪೈಪೋಟಿಗಿಳಿದಿವೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಕರ್ನಾಟಕ ಯಾವ ರೀತಿ ಪ್ರೋತ್ಸಾಹ ನೀಡುತ್ತದೆಯೋ ಅದಕ್ಕಿಂತ ಹೆಚ್ಚಿನ ಕೊಡುಗೆ ಪ್ರಕಟಿಸಿ ಕಂಪನಿಗಳನ್ನು ಸೆಳೆದುಕೊಳ್ಳುತ್ತಿವೆ. ಸಂಶೋಧನೆ ಮತ್ತು ಅಭಿವೃದಿ ಬೆಂಗಳೂರು ಕೇಂದ್ರಿತವಾದರೂ ಉತ್ಪಾದನಾ ಘಟಕಗಳು ನೆರೆ ರಾಜ್ಯದ ಪಾಲಾಗುತ್ತಿರುವುದು ಸರ್ಕಾರವನ್ನು ಚಿಂತೆಗೀಡು ಮಾಡಿದೆ.
ಇವಿ ವಾಹನ ಬಳಕೆಗೆ ಜನರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ವಿಶೇಷ ಸಬ್ಸಿಡಿ ಪ್ರಕಟಿಸಬೇಕು. ಜನರಿಗೆ ಉತ್ತೇಜನ ನೀಡಿದಾಗ ಪರಿಸರ ಸಂರಕ್ಷಣೆಯೂ ಸಾಧ್ಯವಾಗುತ್ತದೆ, ಜನರ ಮೇಲಿನ ಇಂಧನ ದರ ಏರಿಕೆ ಹೊರೆಯನ್ನೂ ಕೊಂಚ ಇಳಿಸಿದಂತಾಗುತ್ತದೆ. ಸಿಎಂ ಈ ಬಗ್ಗೆ ಗಮನ ಹರಿಸಲಿ.
| ಪ್ರಿಯಾಂಕ್ ಖರ್ಗೆ ಮಾಜಿ ಸಚಿವ, ಚಿತ್ತಾಪುರ ಶಾಸಕ