

ಬೆಂಗಳೂರು: ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳು ಮಳೆಯಿಂದಾಗಿ ಪರೀಕ್ಷೆ ವಂಚಿತ ಆಗದಂತೆ ಎಚ್ಚರ ವಹಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಒ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಉಪ ನಿರ್ದೇಶಕರ ಜತೆ ವಿಡಿಯೋ ಸಂವಾದ ನಡೆಸಿ ಪರೀಕ್ಷೆಗೆ ಕೈಗೊಂಡ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು.
ಮಳೆಗಾಲದಲ್ಲಿ ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕದ ದೂರದ ಸಂಪರ್ಕರಹಿತ ಪ್ರದೇಶಗಳು, ನೆರೆರಾಜ್ಯದ ಗಡಿಭಾಗದ ವಿದ್ಯಾರ್ಥಿಗಳು ಹಾಗೂ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವ ಜನವಸತಿ ಪ್ರದೇಶದ ಮಕ್ಕಳಿಗೆ ಪರೀಕ್ಷಾ ಸಮಯಕ್ಕೆ ಸರಿಯಾಗಿ ಬಂದು ಹೋಗಲು ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಬೇಕು ಎಂದರು.
ಪ್ರತ್ಯೇಕ ಕೊಠಡಿ ವ್ಯವಸ್ಥೆ: ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣದಿಂದ ಬರುವ ಮಕ್ಕಳಿಗೆ ಆಯಾ ರಾಜ್ಯದ ಜಿಲ್ಲಾಡಳಿತದ ಜತೆ ರ್ಚಚಿಸಿ ಅಗತ್ಯ ವ್ಯವಸ್ಥೆ ಮಾಡಬೇಕು. ಅವರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿ, ಪರೀಕ್ಷಾ ಕೇಂದ್ರಕ್ಕೆ ಹೋಗಿಬರಲು ವಾಹನ ವ್ಯವಸ್ಥೆ ಮಾಡಬೇಕು. ಕಂಟೇನ್ಮೆಂಟ್ ಪ್ರದೇಶದಿಂದ ಬರುವ ಮಕ್ಕಳಿಗೆ ಹಾಗೂ ಶೀತ, ನೆಗಡಿ, ಜ್ವರದಂಥ ಲಕ್ಷಣ ಕಂಡು ಬಂದ ಮಕ್ಕಳಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.
ವಿಶೇಷ ಬಸ್ ವ್ಯವಸ್ಥೆ: ಗೋವಾದಲ್ಲಿ ತೆರೆದ 2 ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯಿಂದ ಪ್ರತಿದಿನ 367 ವಿದ್ಯಾರ್ಥಿಗಳು ಕೇವಲ 5 ಕಿ.ಮೀ. ಅಂತರದ ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗುವುದರಿಂದ ಅವರಿಗೆ ಗಡಿಯಿಂದ ಪರೀಕ್ಷಾ ಕೇಂದ್ರಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಅದರ ಖರ್ಚಿಗೆ ಇನ್ನೆರಡು ದಿನದೊಳಗೆ ಹಣ ಪಾವತಿಸಲು ಅಧಿಕಾರಿಗಳಿಗೆ ಆದೇಶಿಸಿದರು.
ಅಣಕು ಪರೀಕ್ಷಾ ಕೇಂದ್ರ: ಸುರಕ್ಷಾ ಕ್ರಮಗಳ ಪ್ರದರ್ಶನಕ್ಕಾಗಿ ಜೂ. 24ರ ಬೆಳಗ್ಗೆ 11ರಿಂದ 2 ಗಂಟೆ ವರೆಗೆ ಪರೀಕ್ಷಾ ಕೇಂದ್ರಗಳಲ್ಲಿ ಅಣುಕು ಪ್ರದರ್ಶನ ನಡೆಸಲಾಗುವುದು. ಆಸಕ್ತ ಪಾಲಕರು, ಮಕ್ಕಳು ಭಾಗವಹಿಸಬಹುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಬೆಳಗ್ಗೆ 7.30ರಿಂದಲೇ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡಬೇಕು. ಈಗಾಗಲೇ ಮಕ್ಕಳಿಗೆ ಮಾಸ್ಕ್ ಪೂರೈಸಿದ್ದು, ಮಕ್ಕಳು ಮರೆತು ಬಂದರೆ ಅವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮತ್ತೊಂದು ಮಾಸ್ಕ್ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದರು.
ಪರೀಕ್ಷಾ ಕೇಂದ್ರ ಪಾಸ್ ವಲಯ: ಕೋವಿಡ್ ಪಾಸಿಟಿವ್, ಕ್ವಾರಂಟೈನ್ನಲ್ಲಿರುವವರ ಮತ್ತು ಸಂಬಂಧಿಕರ ಸಂಪರ್ಕವಿರುವ ಮಕ್ಕಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಕಂಟೇನ್ಮೆಂಟ್ ವಲಯ ಘೊಷಿತವಾದಲ್ಲಿ ತಕ್ಷಣ ಪರೀಕ್ಷಾ ಕೇಂದ್ರವನ್ನು ಕಾಯ್ದಿರಿಸಿದ ಪರೀಕ್ಷಾ ಕೇಂದ್ರಕ್ಕೆ ಬದಲಿಸಲು ಕ್ರಮ ವಹಿಸಬೇಕು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಇರಲಿದೆ. ಅದನ್ನು ಪಾಸ್ ವಲಯ ಆಗಿರುವುದರಿಂದ ಗುರುತು ಪತ್ರ ಇರುವ ಪರೀಕ್ಷಾ ಸಿಬ್ಬಂದಿ, ಹಾಲ್ ಟಿಕೆಟ್ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಎಂದು ಸಚಿವರು ತಿಳಿಸಿದ್ದಾರೆ.