

ಶಿವಮೊಗ್ಗ: ಅಡಕೆ ಎಲೆಚುಕ್ಕೆ ರೋಗಕ್ಕೆ ಪರಿಹಾರ ಕಂಡುಕೊಳ್ಳಲು ಮ್ಯಾಮ್ಕೋಸ್‌ನಿಂದಲೇ ಪ್ರತ್ಯೇಕವಾಗಿ ಸಂಶೋಧನೆ ಆರಂಭಿಸುವುದು ಕಷ್ಟ ಸಾಧ್ಯ. ಆದರೂ ರೋಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತೋಟಗಾರಿಕೆ ವಿವಿ ಹಾಗೂ ಅಡಕೆ ಸಂಶೋಧನಾ ಕೇಂದ್ರಗಳ ಮೂಲಕ ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದು ಮ್ಯಾಮ್ಕೋಸ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದರು.
ಬುಧವಾರ ಮ್ಯಾಮ್ಕೋಸ್(ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ)ನ 83ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶೋಧನೆಗೆ ಪ್ರತ್ಯೇಕ ಪ್ರಯೋಗಾಲಯ ಸ್ಥಾಪಿಸಬೇಕು. ಅದಕ್ಕೆ ತಂತ್ರಜ್ಞರು ಹಾಗೂ ವಿಜ್ಞಾನಿಗಳ ನೇಮಕವಾಗಬೇಕು. ಕಡಿಮೆ ಅವಧಿಯಲ್ಲಿ ಇಷ್ಟೊಂದು ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದರು.
ಕಳೆದ ವಾರ್ಷಿಕ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು. ಬಳಿಕ ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿಯ ವಿಜ್ಞಾನಿಗಳು, ಐಸಿಎಆರ್‌ನ ವಿಜ್ಞಾನಿಗಳೊಂದಿಗೂ ಈ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ತೀರ್ಥಹಳ್ಳಿ ಅಡಕೆ ಸಂಶೋಧನಾ ಕೇಂದ್ರದಲ್ಲೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ ಎಂದರು.
ಸಂಘದ ಸದಸ್ಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದು ಬೆಳೆ ಸಾಲದ ಮಿತಿಯನ್ನು ಎರಡು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಕೃಷಿ ಬಳಕೆ ಸಾಲದ ನಿಯಮಾವಳಿ ಅನುಮೋದನೆಗೊಂಡ ಬಳಿಕ 10 ಲಕ್ಷ ರೂ.ವರೆಗೆ ಕೃಷಿ ಬಳಕೆ ಸಾಲ ನೀಡಲಾಗುತ್ತದೆ ಎಂದು ಡಾ. ಆರ್.ಸೆಲ್ವಮಣಿ ಹೇಳಿದರು.
ಸಂಘದ ಚಟುವಟಿಕೆ ವಿವರಿಸುವ ಮ್ಯಾಮ್ಕೋಸ್ ಆ್ಯಪ್ ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಸದಸ್ಯರಿಗೆ ಹೆಚ್ಚು ಅನುಕೂಲವಾಗಲಿದೆ. ಸಂಘದ ಚಟುವಟಿಕೆಗೆ ಅನುಕೂಲವಾಗುವಂತೆ ಶೃಂಗೇರಿಯಲ್ಲಿ 1.37 ಕೋಟಿ ರೂ. ವೆಚ್ಚದ ನಿವೇಶನ ಖರೀದಿಸಲಾಗಿದೆ. ಶಿವಮೊಗ್ಗದ ಶ್ರೀರಾಂಪುರದಲ್ಲಿ ಸೂಡಾದ 1.10 ಎಕರೆ ಜಾಗವನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಂಘದ ಚಟುವಟಿಕೆಗಳ ವಿವರಣೆ ನೀಡಿದರು.
ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ, ನಿರ್ದೇಶಕರಾದ ಬಿ.ಸಿ.ನರೇಂದ್ರ, ಪರಾಶರ, ಎಸ್.ಎಂ.ತಿಮ್ಮಪ್ಪ, ವಿರೂಪಾಕ್ಷಪ್ಪ, ಎಚ್.ಆರ್.ಸುಬ್ರಹ್ಮಣ್ಯ, ಬಡಿಯಣ್ಣ, ಸುಬ್ರಹ್ಮಣ್ಯ ಎಸ್.ಯಡಗೆರೆ, ರತ್ನಾಕರ್, ಜಯಶ್ರೀ, ವಿಜಯಲಕ್ಷ್ಮೀ ರಾಮಪ್ಪ, ಸಿ.ಬಿ.ಈಶ್ವರ್, ಕೆ.ವಿ.ಕೃಷ್ಣಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಇತರರಿದ್ದರು.