ಸಿಎಂ ಕೇಜ್ರಿವಾಲ್​ಗೆ ಸದ್ಯ ಜೈಲೇ ಗತಿ! ಮಧ್ಯಂತರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್​

Arvind Kejriwal
Published on

ನವದೆಹಲಿ: ದೆಹಲಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳಿಂದ ಬಂಧನವಾಗಿ, ತಿಹಾರ್​ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಸದ್ಯ ಜೈಲೇ ಗತಿ! ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೊರ್ಟ್​ ಆದೇಶವನ್ನು ಕಾಯ್ದಿರಿಸಿರುವುದರಿಂದ ಕೇಜ್ರಿವಾಲ್​ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ.

ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ನಾಡಿದ್ದು ನಡೆಸಲಾಗುವುದು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮುಂದಿನ ವಾರದಲ್ಲಿ ನಡೆಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್​ ಖನ್ನಾ ಮತ್ತು ದೀಪಂಕರ್​ ದತ್ತ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹೇಳಿದೆ. ಅಲ್ಲದೆ, ಒಂದು ವೇಳೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದರೆ ಯಾವುದೇ ಅಧಿಕೃತ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ಉನ್ನತ ನ್ಯಾಯಾಲಯ ಹೇಳಿದೆ.

ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕೇಜ್ರಿವಾಲ್​ಗೆ ನ್ಯಾಯಾಲಯದ ಈ ಹೇಳಿಕೆಯಿಂದಾಗಿ ಭ್ರಮನಿರಸನವಾಗಿದೆ. ಇನ್ನೊಂದೆಡೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಕೇಜ್ರಿವಾಲ್​ ನ್ಯಾಯಾಂಗ ಬಂಧನದ ಅವಧಿಯನ್ನು ಮೇ 20ರವರೆಗೆ ವಿಸ್ತರಣೆ ಮಾಡಿದೆ. ಹೀಗಾಗಿ ಕೇಜ್ರಿವಾಲ್​ಗೆ ಸದ್ಯ ಬಿಡುಗಡೆ ಭಾಗ್ಯವಿಲ್ಲ. ಇನ್ನಷ್ಟು ದಿನ ತಿಹಾರ್​ ಜೈಲಿನಲ್ಲಿ ದಿನ ದೂಡಬೇಕಾಗಿದೆ.

ಒಂದು ವೇಳೆ ಜಾಮೀನು ದೊರೆತರೆ ಕೇಜ್ರಿವಾಲ್​ ಅವರು ಕಚೇರಿಗೆ ಆಗಮಿಸುತ್ತಾರಾ? ಕಡತಗಳಿಗೆ ಸಹಿ ಹಾಕುತ್ತಾರಾ? ಮತ್ತು ಇತರರಿಗೆ ನಿರ್ದೇಶನ ನೀಡುತ್ತಾರಾ? ಎಂದು ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್​ ಪ್ರಶ್ನೆ ಮಾಡಿತು. ಇದಕ್ಕೆ ಕೇಜ್ರಿವಾಲ್​ ಪರ ವಕೀಲ ಅಭಿಷೇಕ್​ ಮನು ಸಿಂಘ್ವಿ ಪ್ರತಿಕ್ರಿಯೆ ನೀಡಿದರು. ವಿಚಾರಣೆ ಹಂತದಲ್ಲಿರುವ ಅಬಕಾರಿ ಪ್ರಕರಣವನ್ನು ಮಾತ್ರ ವ್ಯವಹರಿಸುವುದಿಲ್ಲ. ಉಳಿದ ಇಲಾಖೆಗಳನ್ನು ಮುನ್ನಡೆಸುತ್ತಾರೆ. ಏಕೆಂದರೆ, ಕೇಜ್ರಿವಾಲ್ ಅವರು​ ಹಾಲಿ ಸಿಎಂ ಎಂದು ವಾದ ಮಂಡಿಸಿದರು.

ನಾವೇನಾದರೂ ಜಾಮೀನಿನ ಮೇಲೆ ಕೇಜ್ರಿವಾಲ್​ ಅವರನ್ನು ಬಿಡುಗಡೆ ಮಾಡಿದರೆ, ಅವರು ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ನಾವು ಬಯಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ಸರ್ಕಾರದ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ನಮಗೆ ಇಷ್ಟವಿಲ್ಲ ಮತ್ತು ನೀವು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ನಿಮ್ಮ ಇಚ್ಛೆ. ನಾವು ಚುನಾವಣೆಯ ಕಾರಣದಿಂದ ಮಧ್ಯಂತರ ಜಾಮೀನು ಪರಿಗಣಿಸುತ್ತಿದ್ದೇವೆ. ಇಲ್ಲದಿದ್ದರೆ ನಾವು ಅದನ್ನು ಪರಿಗಣಿಸುತ್ತಿರಲಿಲ್ಲ ಎಂದು ಕೋರ್ಟ್​ ಹೇಳಿದೆ.

ಆದರೆ, ಕೇಜ್ರಿವಾಲ್​ ಅವರಿಗೆ ಜಾಮೀನು ನೀಡಬಾರದೆಂದು ಇಡಿ ವಿರೋಧಿಸಿದೆ. ಅವರು ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡದೇ ಹೋದರೆ ಸ್ವರ್ಗವೇನೂ ಬಿದ್ದು ಹೋಗುವುದಿಲ್ಲ. ಜಾಮೀನು ನೀಡಿದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಇಡಿ ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net