

ಅಮೆರಿಕವು ಆರ್ಥಿಕ ಶ್ರೀಮಂತಿಕೆಯಲ್ಲಿ, ಆಧುನಿಕ ತಂತ್ರಜ್ಞಾನದ ವಿಷಯದಲ್ಲಿ ಭಾರತಕ್ಕಿಂತ ಮುಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ವೇಗ ಮತ್ತು ನಿಖರತೆಯ ವಿಷಯದಲ್ಲಿ ಅಮೆರಿಕಕ್ಕಿಂತ ಭಾರತ ಮುಂದಿದೆ ಎಂದು ಅಮೆರಿಕದ ದಕ್ಷತಾ ಇಲಾಖೆಯ ಮುಖ್ಯಸ್ಥ ಹುದ್ದೆಗೆ ನಿಯೋಜಿತರಾಗಿರುವ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆದು ಮೂರು ವಾರಗಳಾಗುತ್ತ ಬಂದರೂ ಕ್ಯಾಲಿಫೋರ್ನಿಯಾ ರಾಜ್ಯದ ಫಲಿತಾಂಶ ಪ್ರಕಟವಾಗಿಲ್ಲ.
ಇನ್ನೂ ಮೂರು ಲಕ್ಷ ಮತಗಳ ಎಣಿಕೆ ಬಾಕಿ ಇದೆ. ಅದು ಅಮೆರಿಕದಲ್ಲೇ ಅತಿ ಹೆಚ್ಚು ಜನಸಂಖ್ಯೆ (3.9 ಕೋಟಿ) ಇರುವ ರಾಜ್ಯ. 1.6 ಕೋಟಿ ಜನ ಮತ ಚಲಾಯಿಸಿದ್ದಾರೆ. ಮತಗಟ್ಟೆಗೆ ಬರುವ ಬದಲು ಅಂಚೆ ಮೂಲಕ ಮತ ಚಲಾಯಿಸಿದವರೇ ಹೆಚ್ಚು. ಹೀಗಾಗಿ ಅಲ್ಲಿ ಎಣಿಕೆ ವಿಳಂಬವಾಗಿದೆ. ಆದರೆ ಭಾರತದಲ್ಲಿ ಸುಮಾರು 64 ಕೋಟಿ ಮತಗಳ ಎಣಿಕೆ ಒಂದೇ ದಿನದಲ್ಲಿ ಪೂರ್ಣಗೊಳ್ಳುತ್ತದೆ. ಕೆಲವೊಮ್ಮೆ ವಿವಾದಗಳಿಂದಾಗಿ ಒಂದೋ ಎರಡೋ ಕ್ಷೇತ್ರಗಳ ಫಲಿತಾಂಶ ಕೆಲವು ಗಂಟೆಗಳ ಕಾಲ ವಿಳಂಬವಾಗಬಹುದಷ್ಟೇ. ಅದಕ್ಕಿಂತ ಹೆಚ್ಚಿನ ವಿಳಂಬವನ್ನು ಭಾರತದಲ್ಲಿ ನಿರೀಕ್ಷಿಸುವಂತಿಲ್ಲ.
ಇದಕ್ಕೆ ಪ್ರಮುಖ ಕಾರಣ- ವಿದ್ಯುನ್ಮಾನ ಮತಯಂತ್ರಗಳು (ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ಸ್- ಇವಿಎಂ). ಇವುಗಳನ್ನು ಬಳಸಿಕೊಂಡು ಭಾರತದಲ್ಲಿ ವೇಗವಾಗಿ ಮತ್ತು ನಿಖರವಾಗಿ ಚುನಾವಣಾ ಫಲಿತಾಂಶವನ್ನು ನೀಡುವುದು ಸಾಧ್ಯವಾಗಿದೆ. ಬ್ರಿಟನ್ ಸೇರಿದಂತೆ ಜಗತ್ತಿನ ಇಪ್ಪತ್ತಕ್ಕೂ ಹೆಚ್ಚು ದೇಶಗಳು ತಮ್ಮ ಸಾರ್ವತ್ರಿಕ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸುತ್ತಿವೆ. ಭಾರತದಲ್ಲಿ ಪ್ರತಿಯೊಂದು ಚುನಾವಣೆಯ ನಂತರವೂ ಇವಿಎಂಗಳತ್ತ ಸಂಶಯದ ಬೆರಳನ್ನು ತೋರುವ ಸಂಪ್ರದಾಯ ಹಲವಾರು ವರ್ಷಗಳಿಂದ ನಡೆಯುತ್ತ ಬಂದಿದೆ. ಈ ವಿಷಯ ಹಲವು ಬಾರಿ ವಿವಿಧ ರಾಜ್ಯಗಳ ನ್ಯಾಯಾಲಯಗಳ ಮೆಟ್ಟಿಲನ್ನು ಏರಿದ್ದೂ ಇದೆ.
ಕರ್ನಾಟಕ ಹೈಕೋರ್ಟಂತೂ 2004ರಲ್ಲಿ ಇವಿಎಂಗಳನ್ನು ‘ಭಾರತ ದೇಶದ ಹೆಮ್ಮೆ (ಪ್ರೖೆಡ್ ಆಫ್ ಇಂಡಿಯಾ)’ ಎಂದು ಹೊಗಳಿತ್ತು. ಸುಪ್ರೀಂ ಕೋರ್ಟ್ ಅಂಗಳಕ್ಕೂ ಈ ವಿವಾದ ಹೋಗಿದ್ದಿದೆ. ಪ್ರತಿ ಬಾರಿಯೂ ಇವಿಎಂಗಳ ಪರವಾಗಿಯೇ ತೀರ್ಪು ಹೊರಬಿದ್ದಿದೆ. ಆದರೂ ದೇಶದಲ್ಲಿ ಕೆಲವು ವಿರೋಧ ಪಕ್ಷಗಳ ನಾಯಕರಿಗೆ ಸಮಾಧಾನವಿಲ್ಲ. ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಹೀನಾಯವಾಗಿ ಸೋತ ಶಿವಸೇನಾ (ಉದ್ಧವ್ ಬಣ) ಇವಿಎಂಗಳತ್ತಲೇ ಬೊಟ್ಟು ಮಾಡಿತು.
ಆ ಪಕ್ಷದ ನಾಯಕ ಸಂಜಯ್ ರಾವುತ್ ‘ಇವಿಎಂಗಳಲ್ಲಿ ಅಕ್ರಮಗಳು ನಡೆದಿದ್ದು, ಮಹಾರಾಷ್ಟ್ರದಲ್ಲಿ ಮತಪತ್ರ ಬಳಸಿ ಹೊಸದಾಗಿ ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ! ಇದೇ ರೀತಿಯ ಹೇಳಿಕೆಯನ್ನು ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ನೀಡಿದ್ದಾರೆ. ಸೋತ ಕಡೆ ಇವಿಎಂಗಳ ಸಮಸ್ಯೆ ಇದೆ ಎನ್ನುವುದಾದರೆ, ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳು ಗೆದ್ದಿರುವ ಕಡೆ ಏಕೆ ಇವಿಎಂಗಳ ಸಮಸ್ಯೆ ಇಲ್ಲ? ಈ ಪ್ರಶ್ನೆಗೆ ಇವರೆಲ್ಲ ಉತ್ತರ ನೀಡಬೇಕಾಗಿದೆ. ದೋಷಗಳಿದ್ದರೆ ಅವುಗಳನ್ನು ನಿವಾರಿಸಿಕೊಂಡು ಮುನ್ನಡೆಯಬೇಕೇ ವಿನಃ ಈಗಿನ ಚುನಾವಣಾ ಪದ್ಧತಿಯನ್ನೇ ಬದಲಿಸಬೇಕೆಂದು ಬಯಸುವುದು ಪ್ರತಿಗಾಮಿ ಧೋರಣೆಯಾಗುತ್ತದೆ.