ನಂದಿಗ್ರಾಮದಲ್ಲಿ ಮರು ಎಣಿಕೆ ಇಲ್ಲ: ಪಂಚರಾಜ್ಯ ಫೈಟ್​

Deedi
Published on

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ನಡುವಿನ ಜಿದ್ದಾಜಿದ್ದಿನ ಕಣವಾಗಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ಮತಗಳ ಮರು ಎಣಿಕೆ ಮಾಡಲಾಗುವುದಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸೋಮವಾರ ಸ್ಪಷ್ಟನೆ ನೀಡಿದ್ದಾರೆ. ಫಲಿತಾಂಶ ದಿನವಾದ ಭಾನುವಾರ ಚುನಾವಣಾ ಆಯೋಗದ ವೆಬ್​ಸೈಟ್ ಸರಿಯಾಗಿ ಅಪ್​ಡೇಟ್ ಆಗದ ಕಾರಣ ಕೆಲಕಾಲ ಗೊಂದಲ ಉಂಟಾಗಿತ್ತು. ಸುವೇಂದು ಅಧಿಕಾರಿ ಮಮತಾ ವಿರುದ್ಧ 1736 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕೋರ್ಟ್​ಗೆ ಮಮತಾ ಮೊರೆ: ನಂದಿಗ್ರಾಮ ಚುನಾವಣೆ ಫಲಿತಾಂಶ ವಿರುದ್ಧ ಕೋರ್ಟ್​ಗೆ ಹೋಗುವುದಾಗಿ ಮಮತಾ ಬ್ಯಾನರ್ಜಿ ಸೋಮವಾರ ಕೋಲ್ಕತದಲ್ಲಿ ಹೇಳಿದ್ದಾರೆ. ಮೊದಲು ಘೋಷಣೆ ಮಾಡಲಾಗಿದ್ದ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ನಂತರ ತಿರುಚಿದ್ದಾರೆ. ಇದ ರಲ್ಲಿ ಬಿಜೆಪಿ ಕೈವಾಡ ಇದೆ. ಇದರ ವಿರುದ್ಧ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗುವುದು. ಮರುಎಣಿಕೆಯನ್ನೂ ಚುನಾವಣಾ ಆಯೋಗ ತಿರಸ್ಕರಿಸಿದೆ. ಒಂದು ವೇಳೆ ಮರುಎಣಿಕೆಗೆ ಆದೇಶ ನೀಡಿದರೆ, ತಮ್ಮ ಜೀವಕ್ಕೆ ಅಪಾಯ ಇದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಅಕ್ರಮ ನಡೆದಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ಮಮತಾ: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲೇ ಹೊಸ ಸರ್ಕಾರ ರಚನೆಗೆ ಮಮತಾ ಬ್ಯಾನರ್ಜಿ ಹಕ್ಕು ಮಂಡಿಸಿದ್ದಾರೆ. ಸೋಮವಾರ ಸಂಜೆ 7 ಗಂಟೆಗೆ ರಾಜ್ಯಪಾಲ ಜಗದೀಪ್ ಧನಕರ ಭೇಟಿ ಮಾಡಿ, ರಾಜೀನಾಮೆ ಸಲ್ಲಿಸಿದ್ದಾರೆ.

ನಾಳೆ ಮಮತಾ ಪ್ರಮಾಣ ಸ್ವೀಕಾರ: ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಮೇ 5ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಮೇ 6ರಂದು ನೂತನ ಶಾಸಕರು ಪ್ರಮಾಣ ಸ್ವೀಕಾರ ಮಾಡಲಿದ್ದಾರೆ.

ಶಾಸಕಿಯಾದ ದಿನಗೂಲಿ ಮಹಿಳೆ: ಪಶ್ಚಿಮ ಬಂಗಾಳದ ಸಲ್ಟೊರಾ ಕ್ಷೇತ್ರದಲ್ಲಿ ದಿನಗೂಲಿ ಮಹಿಳೆ ಜಯಗಳಿಸಿ, ಅಚ್ಚರಿ ಮೂಡಿಸಿದ್ದಾರೆ. 30 ವರ್ಷದ ಚಂದನಾ ಬೌರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈಕೆಯ ಪತಿಯೂ ದಿನಗೂಲಿ ಕಾರ್ವಿುಕ. ಚಂದನಾ ಅವರು ಪ್ರತಿಸ್ಪರ್ಧಿ ಟಿಎಂಸಿಯ ಸಂತೋಷ್ ಕುಮಾರ್ ಅವರನ್ನು 4 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಪ್ರಕಾರ, ಸಂತೋಷ್ ಕುಮಾರ್ ಆಸ್ತಿ ಕೋಟಿ ರೂಪಾಯಿಗೂ ಅಧಿಕವಾಗಿದೆ. ಆದರೆ, ಚಂದನಾ ಬಳಿ ಇರುವುದು -ಠಿ; 31,985 ಹಾಗೂ ಅವರ ಪತಿ ಬಳಿ -ಠಿ; 30,311 ನಗದು ಮಾತ್ರ. ಮೂರು ಆಡು ಹಾಗೂ ಮೂರು ಹಸುಗಳು ಇವರ ಆಸ್ತಿ. ‘ಆನ್​ಲೈನ್ ಮೂಲಕ ಮೊದಲು ಅರ್ಜಿ ಸಲ್ಲಿಸುವಾಗ ಗೆಲ್ಲುವ ನಂಬಿಕೆ ಇರಲಿಲ್ಲ. ಸ್ಥಳೀಯರು ಪ್ರೋತ್ಸಾಹಿಸಿ ಧೈರ್ಯ ತುಂಬಿದರು’ ಎಂದು ಚಂದನಾ ಹೇಳಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಗೆ ಟಿಎಂಸಿಯ ಸ್ವಪನ್ ಬರೂಯಿ ಶಾಸಕರಾಗಿದ್ದರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಚಂದನಾ ಗೆಲುವು ಸಾಧಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ನಾಲಿಗೆ ಕತ್ತರಿಸಿಕೊಂಡು ಹರಕೆ ತೀರಿಸಿದ ಮಹಿಳೆ!: ಹತ್ತು ವರ್ಷದ ಬಳಿಕ ಡಿಎಂಕೆ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ನಾಲಿಗೆ ಕತ್ತರಿಸಿಕೊಂಡು ಹರಕೆ ತೀರಿಸಿದ್ದಾಳೆ. 32 ವರ್ಷದ ವಿನಿತಾ ಡಿಎಂಕೆ ಬೆಂಬಲಿಗರು. ಚುನಾವಣೆಯಲ್ಲಿ ಪಕ್ಷ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ ತನ್ನ ನಾಲಿಗೆ ಕತ್ತರಿಸಿ, ದೇವರಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದಳು. ಅದರಂತೆ ಸೋಮವಾರ ಚೆನ್ನೈನ ಮುತ್ತಾಲಮ್ಮ ದೇವಾಲಯಕ್ಕೆ ತೆರಳಿ ನಾಲಿಗೆ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಲು ಮುಂದಾಗಿದ್ದಾರೆ. ಆದರೆ ಕೋವಿಡ್ ನಿರ್ಬಂಧ ಇರುವ ಕಾರಣ, ಇದು ಸಾಧ್ಯವಾಗಿಲ್ಲ. ಕತ್ತರಿಸಿದ ನಾಲಿಗೆಯನ್ನು ದೇವಾಲಯದ ಮುಖ್ಯ ಗೇಟ್​ನಲ್ಲೇ ಇರಿಸಿದ್ದಾಳೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರಳವಾಗಿ ಸ್ಟಾಲಿನ್ ಪ್ರಮಾಣ: ತಮಿಳುನಾಡಿನಲ್ಲಿ ಡಿಎಂಕೆ ಭರ್ಜರಿ ಜಯ ಸಾಧಿಸಿದ್ದು, ಪಕ್ಷದ ಅಧ್ಯಕ್ಷ ಸ್ಟಾಲಿನ್ ಮೇ 7ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ ಈ ಕುರಿತು ಪಕ್ಷ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ತಂದೆ ಕರುಣಾನಿಧಿ ಸಮಾಧಿಗೆ ತೆರಳಿ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಸ್ಟಾಲಿನ್, ಕರೊನಾ ಹಿನ್ನೆಲೆಯಲ್ಲಿ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.

ಠೇವಣಿ ಕಳೆದುಕೊಂಡ ಕೈ: ಬಂಗಾಳದಲ್ಲಿ ತೃತೀಯ ರಂಗ ಸಂಪೂರ್ಣವಾಗಿ ನೆಲ ಕಚ್ಚಿದೆ. ಕಾಂಗ್ರೆಸ್ ಹಾಗೂ ಎಡಪಕ್ಷ ಶೂನ್ಯ ಸಂಪಾದನೆ ಮಾಡಿವೆ. ಪ್ರಮುಖವಾಗಿ ರಾಹುಲ್ ಗಾಂಧಿ ಪ್ರಚಾರ ನಡೆಸಿರುವ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಮಾಟಿಗಾರಾ-ನಕ್ಸಲ್​ಬಾರಿ ಹಾಗೂ ಗೋಲ್​ಪೋಖರ್​ನಲ್ಲಿ ರಾಹುಲ್ ರ್ಯಾಲಿಗಳನ್ನು ನಡೆಸಿದ್ದರು. ಮಾಟಿಗಾರಾ-ನಕ್ಸಲ್​ಬಾರಿ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ತೃತೀಯ ರಂಗದ ಅಭ್ಯರ್ಥಿಗಳು 292 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಇವರಲ್ಲಿ 42 ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಉಳಿದ ಎಲ್ಲರೂ ಇಡುಗಂಟು ಕಳೆದುಕೊಂಡಿದ್ದಾರೆ.

ವರದಿ ಕೇಳಿದ ಕೇಂದ್ರ ಸರ್ಕಾರ: ಚುನಾವಣೆ ಬಳಿಕ ನಡೆದ ಹಿಂಸಾಚಾರ ಸಂಬಂಧ ವರದಿ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿಯ ಕಚೇರಿ, ಬೆಂಬಲಿಗರ ಮನೆ ಮೇಲೆ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಹಲವರಿಗೆ ಗಾಯಗಳಾಗಿವೆ.

ಹಿಂಸಾಚಾರ, ರಾಜ್ಯಪಾಲರ ಕಳವಳ: ಚುನಾವಣೆ ಮಕ್ತಾಯವಾಗುತ್ತಿದ್ದಂತೆ ಬಂಗಾಳದ ಹಲವು ಪ್ರದೇಶಗಳಲ್ಲಿ ಹಿಂಸಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿಪಕ್ಷದ ಕಚೇರಿ, ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಹಲವೆಡೆ ಜೀವಹಾನಿ ಉಂಟಾದ ವರದಿ ಬಂದಿದೆ ಎಂದು ಬಂಗಾಳ ರಾಜ್ಯಪಾಲ ಜಗದೀಪ ಧನಕರ್ ಕಳವಳ ವ್ಯಕ್ತಪಡಿಸಿದ್ದಾರೆ.

ಅಸ್ಸಾಂ ಸಿಎಂ ಸಸ್ಪೆನ್ಸ್: ಬಿಜೆಪಿ ಅಸ್ಸಾಂನಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಆದರೆ ಸಿಎಂ ಯಾರಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಸಿಎಂ ಸರ್ಬಾನಂದ ಸೋನೊವಾಲ್ ಹಾಗೂ ಸಚಿವ ಹಿಮಂತ ಬಿಸ್ವಾಸ್ ನಡುವೆ ಪ್ರಬಲ ಪೈಪೋಟಿ ಇದೆ. ಕಳೆದ ಅವಧಿಯಲ್ಲಿ ಸೋನೊವಾಲ್ ಉತ್ತಮ ಆಡಳಿತ ನೀಡಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಇಲ್ಲ. ಪಕ್ಷದಲ್ಲೂ ಅವರ ವಿರುದ್ಧ ಅತೃಪ್ತಿ ಇಲ್ಲ. ಅವರ ಆಡಳಿತದ ಪರಿಣಾಮ ಪಕ್ಷ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದಿದೆ ಎಂಬುದು ಅವರ ಬೆಂಬಲಿಗರ ವಾದ. ಮತ್ತೊಂದೆಡೆ ಆರೋಗ್ಯ ಸಚಿವ ಹಿಮಂತ ಬಿಸ್ವಾಸ್ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದಾರೆ.

ಕೇರಳದಲ್ಲಿ ಬಿಜೆಪಿಗೆ ಜಾಗ ಇಲ್ಲ. ಕೋಮುವಾದ ಹಾಗೂ ಸಮಾಜವನ್ನು ಒಡೆಯುವ ಕಾರ್ಯವನ್ನು ರಾಜ್ಯ ಸಹಿಸುವುದಿಲ್ಲ. ಕಳೆದ ಬಾರಿ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಅಡ್ಡಮತದಾನ ಕಾರಣ ಈ ಗೆಲುವು ಸಾಧ್ಯವಾಗಿತ್ತು. ಬಿಜೆಪಿ ಈ ಬಾರಿ ಖಾತೆ ತೆರೆಯುವುದಿಲ್ಲ ಎಂದು ಮೊದಲೇ ನಿರೀಕ್ಷೆ ಮಾಡಿದ್ದೆವು. ನಮ್ಮ ಜನಪರ ಆಡಳಿತಕ್ಕೆ ಜನರು ಮನ್ನಣೆ ನೀಡಿದ್ದಾರೆ.

| ಪಿಣರಾಯಿ ವಿಜಯನ್ ಕೇರಳ ಸಿಎಂ

ದಿನಕರನ್​ಗೆ ಶಾಕ್: ಎಐಎಡಿಎಂಕೆಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿ, ಹುಮ್ಮಸ್ಸಿನಿಂದ ಸ್ಪರ್ಧೆ ಮಾಡಿದ್ದ ಟಿಟಿವಿ ದಿನಕರನ್​ಗೆ ಫಲಿತಾಂಶ ಶಾಕ್ ನೀಡಿದೆ. ಅವರ ಪಕ್ಷದ ಒಬ್ಬ ಅಭ್ಯರ್ಥಿಯೂ ಗೆಲುವು ಸಾಧಿಸಿಲ್ಲ. ಕೊವಿಲ್ಪಳ್ಳಿ ಕ್ಷೇತ್ರದಲ್ಲಿ ಸ್ವತಃ ದಿನಕರನ್ ಸೋಲು ಕಂಡಿದ್ದಾರೆ.

  • ಕಾಂಡಂ ಚಿತ್ರ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದ ಟಿಎಂಸಿ ನಾಯಕಿ ಸನೋಯಿ ಘೋಷ್​ಗೆ ಅಸನ್ಸೋಲ್ ಕ್ಷೇತ್ರದಲ್ಲಿ ಸೋಲು
  • ದನದ ಮಾಂಸ ರಾಷ್ಟ್ರೀಯ ಆಹಾರ ಎಂದು ಹೇಳಿಕೆ ನೀಡಿದ್ದ ಅಸ್ಸಾಂನ ಬಿಜೆಪಿ ಅಭ್ಯರ್ಥಿ ಬನೇಂದ್ರಗೆ ಗೌರಿಪುರ ಕ್ಷೇತ್ರದಲ್ಲಿ ಸೋಲು
  • ದನದ ಮಾಂಸದ ಉತ್ಸವ ಆಯೋಜನೆ ಮಾಡಿದ್ದ ಕೇರಳ ಕಾಂಗ್ರೆಸ್ ನಾಯಕಿ ಬಿಂದು ಕೃಷ್ಣಗೆ ಕೊಲ್ಲಂ ಕ್ಷೇತ್ರದಲ್ಲಿ ಸೋಲು
  • ಶ್ರೀಅಯ್ಯಪ್ಪಸಾಮಿಯನ್ನು ಅಣಕ ಮಾಡಿದ್ದ ಸಿಪಿಐಎಂನ ಎಂ. ಸ್ವರಾಜ್​ಗೆ ತ್ರಿಪುಣಿತರಾದಲ್ಲಿ ಸೋಲು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net