ವಿದ್ಯುತ್ ಉತ್ಪಾದನೆ ಕುಸಿದರೂ ಸಂಕಷ್ಟವಿಲ್ಲ

ವಿಜಯವಾಣಿ (7)
Published on

ಬೆಂಗಳೂರು: ರಾಜ್ಯದ ಸ್ಥಾಪಿತ ಸಾಮರ್ಥ್ಯ ವಿದ್ಯುತ್ ಉತ್ಪಾದನೆಯಲ್ಲಿ ಹಠಾತ್ ಕುಸಿತವಾಗಿದ್ದು, ಗರಿಷ್ಠ ಬೇಡಿಕೆ ಪ್ರಮಾಣವೂ ಇಳಿಮುಖವಾಗಿದ್ದರಿಂದ ‘ವಿದ್ಯುತ್ ಅಭಾವ’ದ ಸಂಕಷ್ಟದಿಂದ ಸರ್ಕಾರ ಪಾರಾಗಿದೆ. ಮಾರ್ಚ್ ಕೊನೆ, ಏಪ್ರಿಲ್ ಆರಂಭಿಕ ವಾರದಲ್ಲಿ ದೈನಂದಿನ ಗರಿಷ್ಠ ಅವಧಿಯ (ಪೀಕ್ ಅವರ್ ಲೋಡ್)  ಬೇಡಿಕೆಯು 18 ಸಾವಿರ ಮೆಗಾ ವಾಟ್ ದಾಟಿತ್ತು. ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರೂ ಇಂಧನ ಇಲಾಖೆ ಸ್ವಲ್ಪಮಟ್ಟಿಗೆ ದಿಗಿಲುಗೊಂಡಿತ್ತು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಬೇಸಿಗೆಯಲ್ಲಿ ಬೇಡಿಕೆ 19 ಸಾವಿರ ಮೆಗಾ ವಾಟ್ ದಾಟಲಿದೆ ಎಂದು ಅಂದಾಜಿಸಿ, ವಿವಿಧ ಮೂಲಗಳಿಂದ ವಿದ್ಯುತ್ ಹೊಂದಿಸಿತ್ತು. ಜತೆಗೆ ತಾಂತ್ರಿಕ ನೆಪದಲ್ಲಿ ಅನಧಿಕೃತ ಲೋಡ್​ಶೆಡ್ಡಿಂಗ್ ಮೂಲಕ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿತ್ತು. ಆದರೆ ವಿದ್ಯುತ್ ಗರಿಷ್ಠ ಬೇಡಿಕೆ 15 ಸಾವಿರ ಮೆ.ವಾ.ಗೆ ಕುಸಿದಿದೆ.

ಕೃಷಿ ಕ್ಷೇತ್ರದ ಬಳಕೆ ಕಡಿಮೆ ಯಾಗಿರುವುದು ಮೇಲ್ನೋಟದ ಕಾರಣ. ಆದರೆ ಉದ್ಯಮ ವಲಯವು ಸ್ವಯಂ ಇಲ್ಲವೇ ಖಾಸಗಿ ವಿದ್ಯುತ್ ವ್ಯವಸ್ಥೆಗೆ ಹೆಚ್ಚೆಚ್ಚು ಮೊರೆ ಹೋಗುತ್ತಿರುವುದು ಮತ್ತೊಂದು ಪ್ರಮುಖ ಕಾರಣವೆಂದು ಮೂಲಗಳು ತಿಳಿಸಿವೆ. ಕ್ರಾಸ್ ಸಬ್ಸಿಡಿ, ನಿಗದಿತ ಶುಲ್ಕ ಹೆಚ್ಚಿಸಿದ್ದೂ ಸಾಲದೆಂಬಂತೆ ಎಸ್ಕಾಂಗಳ ನಿವೃತ್ತ ಸಿಬ್ಬಂದಿ ಮಾಸಿಕ ಪಿಂಚಣಿ ಮತ್ತು ಭತ್ಯೆ ವೆಚ್ಚದ ಭಾರವನ್ನು ಹೊರಿಸಲಾಗಿದೆ. ವಿದ್ಯುತ್ ದರ ಏರಿಕೆಯ ಹೊರೆಯು ಪರ್ಯಾಯ ಅರಸುವಂತೆ ಮಾಡಿದೆ ಎಂದು ವಾಣಿಜ್ಯೋದ್ಯಮ ವಲಯ ಹೇಳುತ್ತಿದೆ.

ಗಣನೀಯ ಇಳಿಕೆ: ಬೇಸಿಗೆ ಕಾಲದಲ್ಲಿ ಸರ್ಕಾರದ ಪಾಲಿಗೆ ಶಾಖೋತ್ಪನ್ನ ಮೂಲವು ‘ಆಪತ್ಬಾಂಧವ’. ಜತೆಗೆ ಕಲ್ಲಿದ್ದಲು ದಾಸ್ತಾನು, ಪೂರೈಕೆಗೆ ಅನುಗುಣವಾಗಿ ಉತ್ಪಾದನೆಯಲ್ಲಿ ಸ್ಥಿರತೆ, ನಿರಂತರತೆ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಆರ್​ಟಿಪಿಎಸ್​ನಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತವಾಗಿ 880 ಮೆ.ವಾ. ಖೋತಾ ಆಗಿದೆ. ಬಿಟಿಪಿಎಸ್, ವೈಟಿಪಿಎಸ್​ನಲ್ಲಿ ಸ್ಥಾಪಿತ ಸಾಮರ್ಥ್ಯಕ್ಕಿಂತ ತಲಾ 500 ಮೆ.ವಾ. ಕಡಿಮೆ ವಿದ್ಯುತ್ ಉತ್ಪಾದಿಸುತ್ತಿದ್ದು, ಕಲ್ಲಿದ್ದಲು ದಾಸ್ತಾನು ಕಡಿಮೆಯಿರುವುದು ಕಾರಣವೆಂದು ಮೂಲಗಳು ತಿಳಿಸಿವೆ. ಆರ್​ಟಿಪಿಎಸ್ ನಾಲ್ಕನೇ ಘಟಕ ರಿಪೇರಿಗೆ ನಾಲ್ಕು ತಿಂಗಳು ಹಿಡಿಯಿತು. ಇನ್ನೇನು ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಬೇಕೆನ್ನುವಷ್ಟರಲ್ಲಿ ವಿದ್ಯುಜ್ಜನಕ ಪರಿವರ್ತಕ (250 ಎಂವಿಎ)ದಲ್ಲಿ ಆಕಸ್ಮಿಕ ಬೆಂಕಿ ತಗುಲಿ 2, 3ನೇ ಘಟಕಗಳ ಕೇಬಲ್​ಗಳು ಸುಟ್ಟು ಹೋಗಿವೆ. ತಾಂತ್ರಿಕ ತಂಡ ಪರಿಶೀಲಿಸಿ ಒಂದೆರಡು ದಿನಗಳಲ್ಲಿ ಪ್ರಾಥಮಿಕ ವರದಿ ಸಲ್ಲಿಸಲಿದೆ. ನಂತರ ನೈಜ ಕಾರಣ ತಿಳಿಯಲು ತಾಂತ್ರಿಕ ತಜ್ಞರ ತಂಡವನ್ನು ಕಳುಹಿಸಲಾಗುತ್ತದೆ ಎಂದು ಇಂಧನ ಇಲಾಖೆ ಮೂಲಗಳು ಹೇಳಿವೆ.

ಜಲ ವಿದ್ಯುದಾಗರಗಳಲ್ಲಿ ಹೆಚ್ಚು ನೀರು ಸಂಗ್ರಹ ಒತ್ತಡ ತಗ್ಗಿಸಿದೆ. ಪಂಜಾಬ್, ಉತ್ತರಪ್ರದೇಶದಿಂದ ವಿನಿಮಯ, ಖರೀದಿಯಡಿ ಒಟ್ಟು 1,600 ಮೆಗಾ ವಾಟ್ ಲಭಿಸುತ್ತಿದೆ. ಎನ್​ಟಿಪಿಸಿಯ ಕೂಡಗಿಯಿಂದ 410 ಮತ್ತು ಯುಪಿಸಿಎಲ್​ನಿಂದ ಹೆಚ್ಚುವರಿ 400 ಮೆ.ವಾ., ಕೇಂದ್ರೀಯ ವಿದ್ಯುತ್ ಜಾಲದಿಂದ ರಾಜ್ಯದ ಪಾಲು ದೊರೆಯುತ್ತಿದೆ. ಜಲ ಜತೆಗೆ ಸೌರ ಮೂಲದ ಮೇಲೂ ಅವಲಂಬನೆ ಹೆಚ್ಚಿದೆ ಎಂದು ಇಂಧನ ಇಲಾಖೆ ಮೂಲಗಳು ವಿವರಿಸಿವೆ.

ದುಬಾರಿ ದರ

ಸ್ಪರ್ಧಾತ್ಮಕ ದರ (ಮೆರಿಟ್ ಆನ್ ಡಿಸ್ಪಾಚ್)ದಲ್ಲಿ ಎಸ್ಕಾಂಗಳು ವಿದ್ಯುತ್ ಪಡೆಯುವ ಅವಕಾಶವಿದೆ. ಪ್ರತಿ ಪಾಕ್ಷಿಕಕ್ಕೆ ಈ ದರ ನಿಗದಿಯಾಗುತ್ತಿದ್ದು, ಏ.16ರಿಂದ 30ರವರೆಗೆ ವಿವಿಧ ಮೂಲಗಳ ದರದ ಪ್ರಕಾರ ಯುಪಿಸಿಎಲ್​ನ ವಿದ್ಯುತ್ ಪ್ರತಿ ಯೂನಿಟ್​ಗೆ 5.16 ರೂ., ನಿಗದಿತ ಶುಲ್ಕ 1.26 ರೂ.ಗಳಿದ್ದು, ಅತ್ಯಂತ ದುಬಾರಿಯಾಗಿದೆ. ಎನ್​ಟಿಪಿಸಿ ತಾಲ್ಚೇರ್​ನ ವಿದ್ಯುತ್ ಪ್ರತಿ ಯೂನಿಟ್​ಗೆ 1.86 ರೂ. ಹಾಗೂ ನಿಗದಿತ ಶುಲ್ಕ 0.82 ರೂ. ಅತ್ಯಂತ ಕಡಿಮೆ ದರಯಿದಾಗಿದೆ. ಉಳಿದ 20 ಮೂಲಗಳಿಂದ ಲಭಿಸುವ ವಿದ್ಯುತ್ ದರವು ಪ್ರತಿ ಯೂನಿಟ್​ಗೆ 3 ರೂ.ನಿಂದ 4.88 ರೂ., ನಿಗದಿತ ಶುಲ್ಕ 89 ಪೈಸೆಯಿಂದ ಎರಡು ರೂ.ಗಳವರೆಗೆ ನಿಗದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net