

| ಕೀರ್ತಿನಾರಾಯಣ ಸಿ. ಬೆಂಗಳೂರು
ಉಗ್ರರ ವಿರುದ್ಧದ ಕಾರ್ಯಾಚರಣೆಗೆಂದೇ ರಾಜ್ಯದಲ್ಲಿ 3 ಪ್ರತ್ಯೇಕ ಘಟಕಗಳಿದ್ದರೂ ತನಿಖಾ ಬಲ, ಅಗತ್ಯ ಮೂಲಸೌಕರ್ಯ ಕೊರತೆಯಿಂದಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿವೆ. ಇನ್ನೊಂದೆಡೆ, ರಾಷ್ಟ್ರೀಯ ತನಿಖಾ ದಳ (ಎನ್ಐಎ)ಉಗ್ರ ಚಟುವಟಿಕೆಗೆ ಸಂಬಂಧಿಸಿದ ಕರ್ನಾಟಕದ ಪ್ರಕರಣಗಳಲ್ಲಿ 5 ವರ್ಷದಲ್ಲಿ 31 ಮಂದಿಗೆ ಜೈಲು ಶಿಕ್ಷೆ ಹಾಗೂ 305 ಶಂಕಿತ ಉಗ್ರರ ವಿರುದ್ಧ ಆರೋಪ ದೃಢಪಡಿಸಿ ಚಾರ್ಜ್ಶೀಟ್ ಸಲ್ಲಿಸುವ ಮೂಲಕ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸುವಲ್ಲಿ ಸಫಲವಾಗಿರುವುದು ಕೊಂಚ ಸಮಾಧಾನಕರ ವಿಷಯ.
ಪ್ರತಿಬಾರಿಯೂ ದೆಹಲಿ, ಚೆನ್ನೈ ಎನ್ಐಎ ತಂಡಗಳು ಹಾಗೂ ದೇಶದ ಇತರ ರಾಜ್ಯಗಳ ಉಗ್ರ ನಿಗ್ರಹ ಪಡೆಗಳು ರಾಜ್ಯದಲ್ಲಿ ಉಗ್ರರ ಬೇಟೆಯಾಡಿ, ಸಂಭವನೀಯ ದಾಳಿ ತಡೆದಿವೆ. ಕರ್ನಾಟಕದಲ್ಲಿರುವ ಆಂತರಿಕ ಭದ್ರತಾ ವಿಭಾಗ (ಐಎಸ್ಡಿ), ಗುಪ್ತದಳ (ಐಬಿ) ಹಾಗೂ ಹೊಸದಾಗಿ ಸ್ಥಾಪಿತವಾಗಿರುವ ಸ್ಪೆಷಲ್ ವೆಪನ್ ಆಂಡ್ ಟ್ಯಾಕ್ಟಿಕ್ಸ್ (ಸ್ವಾ್ಯಟ್) ಪಡೆಗಳಿಗೆ ಪೂರ್ಣಪ್ರಮಾಣದ ತನಿಖಾ ಬಲ ಹಾಗೂ ಅಗತ್ಯ ಮೂಲಸೌಕರ್ಯ ಸಿಗುತ್ತಿಲ್ಲ. ಇದರಿಂದಾಗಿ ಮೂರೂ ಘಟಕಗಳು ‘ನಾಮ್ೇವಾಸ್ತೆ’ ಎಂಬಂತೆ ಅಸ್ತಿತ್ವದಲ್ಲಿವೆ. ಇದು ಕಾನೂನು ಬಾಹಿರ ಕೃತ್ಯವೆಸಗುವವರಿಗೆ ವರದಾನವಾಗಿದೆ. 2016ರಿಂದ 2021ರ ಜುಲೈ 29ರವರೆಗೆ ಕರ್ನಾಟಕದಲ್ಲಿನ ಉಗ್ರ ಕೃತ್ಯ ಸಂಬಂಧಿತ 15 ಕೇಸ್ಗಳ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಇದರಲ್ಲಿ ಬಲವಾದ ಸಾಕ್ಷ್ಯಾಧಾರ ಒದಗಿಸುವುದರೊಂದಿಗೆ 31 ಆರೋಪಿಗಳಿಗೆ ಜೈಲು ಶಿಕ್ಷೆ ಕೊಡಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಲ್ಲದೇ ಒಟ್ಟಾರೆ 15 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, 305 ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿರುವುದು ಎನ್ಐಎ ತನಿಖಾ ಸಾಮರ್ಥ್ಯ ತೆರೆದಿಟ್ಟಿದೆ. ಕರ್ನಾಟಕ ಉಗ್ರರ ಸ್ಲೀಪರ್ ಸೆಲ್ ಆಗಿದೆ ಎಂಬುದು ಈವರೆಗೆ ದಾಖಲಾಗಿರುವ ಪ್ರಕರಣಗಳು ಹಾಗೂ ಶಂಕಿತರ ಬಂಧನದಿಂದ ರುಜುವಾತಾಗಿದೆ. ಆದ್ದರಿಂದ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳ ಮೇಲೆ ಕಣ್ಣಿಡಲು ಹಾಗೂ ಹತ್ತಿಕ್ಕಲು ಪ್ರತ್ಯೇಕ ತನಿಖಾ ಘಟಕ ಸ್ಥಾಪಿಸಿ, ಎನ್ಐಎ ಮಾದರಿ ತರಬೇತಿ ಕೊಟ್ಟು ಸನ್ನದ್ಧಗೊಳಿಸ ಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಗೌಪ್ಯತೆ ಭೇದಿಸದ ಗುಪ್ತದಳ: ಸಿಎಂ ಅಧೀನದಲ್ಲಿ ಕೆಲಸ ಮಾಡುವ ಗುಪ್ತದಳ ‘ರಹಸ್ಯ’ ಮಾಹಿತಿ ಭೇದಿಸುವಲ್ಲಿ ವಿಫಲವಾಗಿದೆ. ಮಾಧ್ಯಮಗಳಲ್ಲಿ ಬರುವ ಬ್ರೇಕಿಂಗ್ ನ್ಯೂಸ್ ಹಾಗೂ ಪತ್ರಕರ್ತರು ನೀಡುವ ಮಾಹಿತಿಯನ್ನೇ ರಹಸ್ಯ ಮಾಹಿತಿ ಎಂದು ವರದಿ ಒಪ್ಪಿಸಲಷ್ಟೇ ಗುಪ್ತದಳದ ಅಧಿಕಾರಿಗಳು ಸೀಮಿತವಾಗಿದ್ದಾರೆ. 2020ರ ಪೊಲೀಸ್ ಸಂಶೋಧನೆ ಹಾಗೂ ಅಭಿವೃದ್ಧಿ ಬ್ಯೂರೋ (ಬಿಪಿಆರ್ ಆಂಡ್ ಡಿ) ಮಾಹಿತಿ ಪ್ರಕಾರ ರಾಜ್ಯ ಗುಪ್ತದಳಕ್ಕೆ 1286 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 777 ಹುದ್ದೆಗಳಷ್ಟೇ ಭರ್ತಿಯಾಗಿದ್ದು, ಇನ್ನೂ 509 ಹುದ್ದೆಗಳು ಖಾಲಿ ಉಳಿದಿವೆ. ಖಾಲಿ ಹುದ್ದೆಗಳ ಭರ್ತಿ ಮಾಡುವ ಜತೆಗೆ ಅಗತ್ಯ ಸೌಲಭ್ಯ ಕೊಟ್ಟು ಬಲಪಡಿಸಬೇಕಿದೆ.
ಐಎಸ್ಡಿಗೆ ತನಿಖೆಯ ಸ್ವಾತಂತ್ರ್ಯ ಇಲ್ಲ: ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವ ಉದ್ದೇಶದಿಂದ 2008ರ ಡಿ.12ರಂದು ಆಂತರಿಕ ಭದ್ರತಾ ವಿಭಾಗ (ಐಎಸ್ಡಿ) ರಾಜ್ಯದಲ್ಲಿ ಸ್ಥಾಪನೆಯಾಗಿದೆ. ಆದರೆ, ಸದ್ಯ ಗೌಪ್ಯ ಮಾಹಿತಿ ಸಂಗ್ರಹಿಸಲಷ್ಟೇ ಸೀಮಿತವಾಗಿದೆ. ಸ್ವತಂತ್ರವಾಗಿ ಎಫ್ಐಆರ್ ದಾಖಲಿಸುವ ಮತ್ತು ತನಿಖೆ ನಡೆಸುವ ಅಧಿಕಾರ ಇಲ್ಲ. ಸ್ವತಂತ್ರ ತನಿಖೆಗೆ ಅನುಮತಿ ಕೊಡುವಂತೆ ಸರ್ಕಾರಕ್ಕೆ ಈ ಹಿಂದಿನ ಹಲವು ಅಧಿಕಾರಿಗಳು ಮನವಿ ಮಾಡಿದ್ದರೂ ಸಮ್ಮತಿ ಸಿಕ್ಕಿಲ್ಲ.
ಮುಂಬೈ ಎಟಿಎಸ್ ಬೆಸ್ಟ್: ಮಹಾರಾಷ್ಟ್ರ, ಗುಜರಾತ್, ಆಂಧ್ರ, ರಾಜಸ್ಥಾನ, ಜಾರ್ಖಂಡ್ ಇನ್ನಿತರ ರಾಜ್ಯ ಗಳಲ್ಲಿರುವಂತೆ ಸಂಪೂರ್ಣ ಸಾಮರ್ಥ್ಯದ ಪ್ರತ್ಯೇಕ ಭಯೋತ್ಪಾದಕ ನಿಗ್ರಹ ದಳ ಕರ್ನಾಟಕಕ್ಕೂ ಬೇಕಿದೆ. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ ಮಹಾರಾಷ್ಟ್ರ ಎಟಿಎಸ್ ಬಲಾಢ್ಯವಾಗಿದೆ. ದೇಶದಲ್ಲಿ ಸಕ್ರಿಯವಾಗಿರುವ ಎಲ್ಲ ಉಗ್ರ ಸಂಘಟನೆಗಳು, ಅದರ ಸದಸ್ಯರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ. ಬಾಂಬ್ ಸ್ಫೋಟ ಪ್ರಕರಣಗಳು, ಬಂಧಿತ ಉಗ್ರರು ಮತ್ತು ತನಿಖಾ ಪ್ರಗತಿಯನ್ನು ದಾಖಲು ಮಾಡಿದ್ದಾರೆ.
ಬೆಂಗಳೂರಿಗಾಗಿ ಸ್ವಾ್ಯಟ್ ಟೀಂ: ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆ ಹತ್ತಿಕ್ಕಲು ಬೆಂಗಳೂರು ಭದ್ರತೆ ಮತ್ತು ಸುರಕ್ಷತೆಗೆ ಸೀಮಿತವಾಗಿ ಸ್ವಾ್ಯಟ್ ಪಡೆ ರಚಿಸಲಾಗಿದೆ. ಮೊದಲ ಹಂತದಲ್ಲಿ ಸಿಎಆರ್ ಘಟಕಗಳಿಂದ 8 ಆರ್ಎಸ್ಐ ಮತ್ತು 120 ಸಿಬ್ಬಂದಿ ಆಯ್ಕೆ ಮಾಡಿ ನಾಲ್ಕು ತಂಡಗಳಾಗಿ ರಚಿಸಿ, ಆಧುನಿಕ ಸಲಕರಣೆಗಳ ಬಳಕೆಯ ತರಬೇತಿ ನೀಡಿ ಸನ್ನದ್ಧಗೊಳಿಸಲಾಗಿದೆ ಎಂದು ಹೇಳಿಕೊಳ್ಳಲಾಗಿದೆ. ಆದರೆ, ಈ ತಂಡವು ಸೂಕ್ಷ್ಮ ಪ್ರದೇಶಗಳಲ್ಲಿ ಮಾಕ್ ಡ್ರಿಲ್ ಮಾಡಲಷ್ಟೇ ಸೀಮಿತವಾಗಲಿದ್ದು, ಬೇರ್ಯಾವುದೇ ರೀತಿಯ ತನಿಖಾ ಬಲವಿಲ್ಲ.