ನಿದ್ದೆಗೆ ಜಾರಿದ ಆಸ್ಪತ್ರೆ ವಾಸ್ತವ್ಯ; ಆರೋಗ್ಯ ಇಲಾಖೆಯ ರಿಯಾಲಿಟಿ ಚೆಕ್​ಗೆ ಬೀಳುತ್ತಾ ಬ್ರೇಕ್?

HOSPITAL
Published on

ಗ್ರಾಮ ವಾಸ್ತವ್ಯದ ಮಾದರಿಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಆರಂಭಿಸಿದ್ದ ಆಸ್ಪತ್ರೆ ವಾಸ್ತವ್ಯ ಕಾರ್ಯಕ್ರಮ ಜನರ ಗಮನ ಸೆಳೆದಿತ್ತು. ಆದರೆ, ಈ ವಿನೂತನ ಕಾರ್ಯಕ್ರಮ ನಿದ್ದೆಗೆ ಜಾರಿದಂತೆ ಕಾಣುತ್ತಿದ್ದು, ಆರಂಭ ಶೂರತ್ವಕ್ಕೆ ಸೀಮಿತವಾಯಿತಾ ಎಂಬ ಮಾತು ಕೇಳಿಬರುತ್ತಿದೆ.

ಸಚಿವ ಶ್ರೀರಾಮುಲು ಎರಡನೇ ಬಾರಿ ಆರೋಗ್ಯ ಸಚಿವರಾಗಿದ್ದಾರೆ. ಸೆ.5ರಂದು ವಿಧಾನಸೌಧದಲ್ಲಿ ಕಾರ್ಯಾರಂಭ ಮಾಡುವ ಮುನ್ನವೇ ಅವರು ವಿಜಯಪುರ, ಬಳ್ಳಾರಿ ಜಿಲ್ಲಾಸ್ಪತ್ರೆ ಸೇರಿ ವಿವಿಧೆಡೆ ಭೇಟಿ ನೀಡಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಗುಣಮಟ್ಟದ ಸೇವೆ ಸಿಗಬೇಕು. ಇದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದೊಂದಿಗೆ ಆಸ್ಪತ್ರೆ ವಾಸ್ತವ್ಯ ಮಾಡುವುದಾಗಿ ಸೆ.10ರಂದು ಪ್ರಕಟಿಸಿದ್ದರು.

ಸೆ.24ರಂದು ಚಾಮರಾಜನಗರ ಜಿಲ್ಲಾಸ್ಪತ್ರೆ ಮೂಲಕ ಸಚಿವ ಆಸ್ಪತ್ರೆ ವಾಸ್ತವ್ಯ ಆರಂಭಿಸಿದ ಶ್ರೀರಾಮುಲು, ಸೆ.26ರಂದು ಮಡಿಕೇರಿ, ಸೆ.27ರಂದು ಉಡುಪಿಯ ಅಜ್ಜರಕಾಡುವಿನ ಸರ್ಕಾರಿ ಆಸ್ಪತ್ರೆಯಲ್ಲಿ ಠಿಕಾಣಿ ಹೂಡಿದ್ದರು. ಅ.14ರಂದು ರಾಯಚೂರಿನ ರಿಮ್್ಸ ಆಸ್ಪತ್ರೆಯಲ್ಲಿ ದಿಢೀರ್ ವಾಸ್ತವ್ಯ ನಡೆಸಿದರು. ಅ.18ರಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಿಗದಿಯಾಗಿದ್ದ ವಾಸ್ತವ್ಯ ದಿಢೀರ್ ರದ್ದಾಗಿತ್ತು. ಆ ಬಳಿಕ ಅವರು ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದರಾದರೂ, ವಾಸ್ತವ್ಯ ಮಾಡಿಲ್ಲ. ತಿಂಗಳಿಗೆ ಒಂದು ಬಾರಿಯಾದರೂ ವಾಸ್ತವ್ಯದ ಮೂಲಕ ಸರ್ಕಾರಿ ಆಸ್ಪತ್ರೆಗಳ ರಿಯಾಲಿಟಿ ಚೆಕ್ ನಡೆಸುವುದಾಗಿ ಹೇಳಿದ್ದ ಅವರು, ಎರಡೂವರೆ ತಿಂಗಳಿಂದ ಆಸ್ಪತ್ರೆ ವಾಸ್ತವ್ಯದಿಂದ ದೂರ ಉಳಿದಿದ್ದಾರೆ.

ಅಸಮಾಧಾನ ಮತ್ತು ಉಪ ಚುನಾವಣೆ: ಶ್ರೀರಾಮುಲು ಡಿಸಿಎಂ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಖಾತೆ ನಿರೀಕ್ಷೆಯಲ್ಲಿದ್ದರು. ಈ ಪೈಕಿ ಯಾವುದೂ ಈಡೇರಿಲ್ಲ. ಒಂದು ತಿಂಗಳು ಉಪ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾಗಿದ್ದ ಅವರು, ಸರ್ಕಾರ ಪೂರ್ಣ ಬಹುಮತ ಪಡೆಯುತ್ತಿದ್ದಂತೆ ಡಿಸಿಎಂ ಸ್ಥಾನದತ್ತ ಚಿತ್ತ ಹರಿಸಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ಹಾಗೂ ಉಪ ಚುನಾವಣೆಯಲ್ಲಿ ಅವರಿಗೆ ಗೆಲುವು ದೊರೆತಿದ್ದರಿಂದ ಶ್ರೀರಾಮುಲುಗೆ ಡಿಸಿಎಂ ಸ್ಥಾನ ಕೈತಪ್ಪುವ ಆತಂಕ ಎದುರಾಗಿದೆ.

ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲು ನೀಡಬೇಕೆಂಬ ವಿಚಾರವೂ ಮುಂಚೂಣಿಗೆ ಬಂದಿದೆ. ಸೆ.9ರಂದು ಮುಖ್ಯಮಂತ್ರಿ ಭೇಟಿ ಮಾಡಿ ಮೀಸಲು ಬೇಡಿಕೆ ಸಲ್ಲಿಸಲಾಗಿತ್ತು. ಬೇಡಿಕೆ ಈಡೇರದಿದ್ದರೆ ವಾಲ್ಮೀಕಿ ಸಮುದಾಯದ ಶಾಸಕರು, ಸಂಸದರ ರಾಜೀನಾಮೆ ಕೊಡುತ್ತಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಅಂದುಕೊಂಡಂತೆ ಯಾವುದೇ ನಡೆಯದಿರುವುದು ಶ್ರೀರಾಮುಲು ಬೇಸರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಉಪ ಚುನಾವಣೆ ಕಾರಣಕ್ಕೆ ಆಸ್ಪತ್ರೆ ವಾಸ್ತವ್ಯ ಸಾಧ್ಯವಾಗಿಲ್ಲ. ಒಂದು ತಿಂಗಳಲ್ಲಿ ಆಸ್ಪತ್ರೆ ವಾಸ್ತವ್ಯ ಮುಂದುವರಿಸುವೆ. ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಂತೆ ಬದಲಾಗಬೇಕೆಂಬುದು ನನ್ನ ಕನಸಾಗಿದೆ. | ಬಿ.ಶ್ರೀರಾಮುಲು ಆರೋಗ್ಯ ಸಚಿವ

| ಅಶೋಕ ನೀಮಕರ್ ಬಳ್ಳಾರಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net