ಶಿವಮೊಗ್ಗ: ಸರ್ಕಾರಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಉಳಿಸುವ ಸಲುವಾಗಿ ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
2024-25ರಲ್ಲಿ ರಾಜ್ಯದಲ್ಲಿ ಖಾಸಗಿ ಶಾಲೆಗಳ ಪರವಾನಗಿ ವ್ಯಾಪಾರೀಕರಣ ನಡೆದಿದೆ. ರಾಜ್ಯದಲ್ಲಿ 450ಕ್ಕೂ ಹೆಚ್ಚು ಹೊಸ ಶಾಲೆಗಳಿಗೆ ಪರವಾನಗಿ ಕೊಟ್ಟಿದ್ದು, ಅದರಲ್ಲಿ ವಿಜಯಪುರ ಜಿಲ್ಲೆಯೊಂದರಲ್ಲೇ 125 ಶಾಲೆಗಳಿಗೆ ನೀಡಲಾಗಿದೆ. ನಿಯಮ ಮೀರಿ ಸ್ಥಳ ಪರಿಶೀಲನೆ ಮಾಡದೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಪಂಗಳಲ್ಲಿ ನರೇಗಾ ಯೋಜನೆ ಹಣ ದುರ್ಬಳಕೆ ಆಗುತ್ತಿದೆ. ಪಂಚಾಯತ್ ಸದಸ್ಯರು, ಪಿಡಿಒಗಳು, ಇಂಜಿನಿಯರ್‌ಗಳು, ಮೇಲಧಿಕಾರಿಗಳು ಶಾಮೀಲಾಗಿ ಹಣ ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಔಷಧ ಮಳಿಗೆಗಳಲ್ಲಿ ಸಂಬಂಧಿಸಿದ ವಿದ್ಯಾಭ್ಯಾಸದ ಪ್ರಮಾಣಪತ್ರ ಇಲ್ಲದವರೂ ಅನಧಿಕೃತ ಮಾತ್ರೆಗಳನ್ನು ಸಾರ್ವಜನಿಕರಿಗೆ ಕೊಡುತ್ತಿದ್ದು, ಅದಕ್ಕೆ ಬ್ರೇಕ್ ಹಾಕಬೇಕು. ಇತ್ತೀಚಿನ ದಿನಗಳಲ್ಲಿ ದಿನಸಿ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಬಡವರಿಗೆ ಜನಸಾಮಾನ್ಯರಿಗೆ ಹೊರೆ ಮಾಡುವಂತಹ ಹುನ್ನಾರವನ್ನು ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಎಚ್.ಎಸ್.ಕಿರಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಪ್ರಚಾರ ಸಮಿತಿ ಅಧ್ಯಕ್ಷ ಮಾಲತೇಶ್, ಉಪಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಕೇಶವ ವಿ. ನಾಗರಾಜ್, ಖಜಾಂಚಿ ಗಣೇಶ್, ನಗರಾಧ್ಯಕ್ಷ ಜೀವನ್ ಇತರರಿದ್ದರು.