ಪೆಂಡಾಲ್, ಊಟ ಹಾಕೋದಲ್ಲ, ಬೆಳಗಾವಿ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿ, ಅಂಬೇಡ್ಕರ್ ರಾಜೀನಾಮೆ ಚರ್ಚಿಸಲಿ: ಬಿ.ಎಲ್ .ಸಂತೋಷ್ ಸವಾಲ್

Atal puraskara
Published on

ಬೆಂಗಳೂರು: ಇಡೀ ದೇಶದ ಚುನಾವಣೆಗಳನ್ನು ಕರ್ನಾಟಕದಿಂದ ನಡೆಸುತ್ತಿರುವ ಕಾಂಗ್ರೆಸ್‌ಗೆ ಪೆಂಡಾಲ್ ಮತ್ತು ಜನರಿಗೆ ಊಟ ಹಾಕಿಸುವುದು ಸವಾಲಲ್ಲ. ಗಾಂಧೀಜಿ ಮತ್ತು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿರುವ ಕಾಂಗ್ರೆಸ್, ಬೆಳಗಾವಿ ಅಧಿವೇಶನದಲ್ಲಿ ‘ತನ್ನ ಆಡಳಿತದ ಅವಧಿಯಲ್ಲಿ ಯಾವ ಉದ್ದೇಶದಿಂದ ಸಂವಿಧಾನ ತಿದ್ದುಪಡಿ ಮಾಡಿದೆವು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ನೆಹರು ಅವಧಿಯಲ್ಲಿ ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು’ ಎಂಬುದನ್ನು ಚರ್ಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸವಾಲ್ ಎಸೆದಿದ್ದಾರೆ.

ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆಯು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ಸುಶಾಸನ ದಿನ ಮತ್ತು ಅಟಲ್ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು.

ಬೆಳಗಾವಿಯಲ್ಲಿ ಕಾಂಗ್ರೆಸ್‌ನವರು ‘ಗಾಂಧಿ ಭಾರತ’ ಎಂಬ ಪ್ರಹಸನ ನಡೆಸುತ್ತಿದ್ದಾರೆ. ಸಂವಿಧಾನ ಮತ್ತು ಅಂಬೇಡ್ಕರ್ ಎರಡೂ ವಿಷಯಗಳು ಬಹಳ ಚರ್ಚಿವಾಗುತ್ತಿವೆ. ಇದರಿಂದ ಹಲವು ಸಂಗತಿಗಳು ಹೊರಗೆ ಬರುತ್ತಿರುವುದು ಖುಷಿಯ ವಿಚಾರ.

ಸಂವಿಧಾನಕ್ಕೆ ಇಲ್ಲಿಯವರೆಗೂ 106 ತಿದ್ದುಪಡಿಗಳನ್ನು ಮಾಡಲಾಗಿದೆ. 75 ತಿದ್ದುಪಡಿಗಳನ್ನು ಕಾಂಗ್ರೆಸ್ ಮಾಡಿದೆ. ಯಾವ ಕಾರಣಕ್ಕೆ ತಿದ್ದುಪಡಿ ಮಾಡಿದ್ದೇವೆಂದು ಸ್ಮರಣೆ ಮಾಡಬೇಕು. ಹಾಗೆಯೇ ಡಾ. ಬಿ.ಆರ್. ಅಂಬೇಡ್ಕರ್ ಯಾವ ಉದ್ದೇಶಕ್ಕೆ ರಾಜೀನಾಮೆ ನೀಡಿದರು ಎಂಬುದನ್ನು ತಿಳಿಸಬೇಕು. ಆಮೇಲೆ ಸಂವಿಧಾನದ ಪುಸ್ತಕ ತೋರಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಹೇಳಬೇಕು.

ಬಿಜೆಪಿಯವರು ಸಂವಿಧಾನ ತಿದ್ದುಪಡಿ ಮಾಡುತ್ತಾರೆ, ಮೀಸಲಾತಿ ರದ್ದುಮಾಡುತ್ತಾರೆಂದು ಹೇಳಿಕೊಂಡೇ ಚುನಾವಣೆ ನಡೆಸಿದರು. ಆದರೆ, ಎಸ್ಸಿ,ಎಸ್ಟಿ ಆಯೋಗ ತರಲು ವಾಜಪೇಯಿ ಹಾಗೂ ಒಬಿಸಿ ಆಯೋಗ ಬರಲು ಮೋದಿ ಬರಬೇಕಾಯಿತು ಎಂದರು.

ಕಾಂಗ್ರೆಸ್ ಅವಧಿಯಲ್ಲಿ 75 ಬಾರಿ, 14 ಬಾರಿ ವಾಜಪೇಯಿ ಅಧಿಕಾರದಲ್ಲಿ, 8 ಬಾರಿ ವಿ.ಪಿ. ಸಿಂಗ್ ಮತ್ತು 9 ಬಾರಿ ನರೇಂದ್ರ ಮೋದಿ ಅವರ ಕಾಲಾವಧಿಯಲ್ಲಿ ಸಂವಿಧಾನ ತಿದ್ದುಪಡಿಯಾಗಿದೆ. ಆದರೆ, ಅಟಲ್ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಬ್ಯಾಕ್‌ಲಾಗ್ ಹುದ್ದೆ, ಅಂಬೇಡ್ಕರ್ ಅವರ ಆಶಯವಾದ ಸರ್ವ ಶಿಕ್ಷಣ ಅಭಿಯಾನ, ಆರ್‌ಟಿಇ ಸುಧಾರಣೆ ತಂದರು.

ದೇಶದ ಬೆಳವಣಿಗೆ ದೃಷ್ಟಿಯಿಂದ ಬಿಜೆಪಿ ಮಾಡಿರುವ ತಿದ್ದುಪಡಿ ಮತ್ತು ಕಾಂಗ್ರೆಸ್ ಮಾಡಿರುವ ತಿದ್ದುಪಡಿ ಬಗ್ಗೆ ಯೋಚನೆ ಮಾಡಿ. ‘ಕ್ರಾಸ್‌ರೋಡ್’ ಎಂಬ ಮುಂಬೈ ಪತ್ರಿಕೆ ಮತ್ತು ‘ಪಾಂಚಜನ್ಯ’ ಎಂಬ ದೆಹಲಿಯ ಪತ್ರಿಕೆಗಳು ಸರ್ಕಾರದ ವಿರುದ್ಧ ಬರೆಯುತ್ತಿವೆ ಎಂಬ ಕಾರಣಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಮೊದಲ ತಿದ್ದುಪಡಿ ತಂದರು. ಕಾಂಗ್ರೆಸ್ ಮಾಡಿರುವ ಮೊದಲ ತಿದ್ದುಪಡಿಯೇ ಪತ್ರಿಕೆಗಳ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವ ಬಿಲ್ ಮಂಡನೆ ಮಾಡಿದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net