

| ಅವಿನಾಶ ಮೂಡಂಬಿಕಾನ ಬೆಂಗಳೂರು
ಭ್ರಷ್ಟ ಅಧಿಕಾರಿಗಳ ಸಂಪತ್ತಿನ ಮೇಲೆ ವೀರಾವೇಶದಿಂದ ದಾಳಿ ನಡೆಸಿ ಸಿಂಹಸ್ವಪ್ನವಾಗಿ ಕಾಡುವ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಆನಂತರ ಮಾತ್ರ ಹಲ್ಲಿಲ್ಲದ ಹಾವಾಗುತ್ತದೆ! ಲೋಕಾಯುಕ್ತಕ್ಕೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಈ ತನಿಖಾ ಸಂಸ್ಥೆ ಅಘೋಷಿತ ಆಸ್ತಿ (ಡಿಸ್ಪ್ರಪೋರ್ಷನೇಟ್ ಅಸೆಟ್ಸ್) ಪ್ರಕರಣಗಳಲ್ಲಿ ರಾಜ್ಯದಲ್ಲಿ 80ಕ್ಕೂ ಹೆಚ್ಚು ಕಾರ್ಯಾಚರಣೆ ಕೈಗೊಂಡಿದೆಯಾದರೂ, ಈವರೆಗೆ ಒಬ್ಬರಿಗೂ ಶಿಕ್ಷೆ ಆಗಿಲ್ಲ ಎನ್ನುವುದು ಓಪನ್ ಸೀಕ್ರೆಟ್! 2016ರ ಮಾ.14ರಂದು ಅಸ್ತಿತ್ವಕ್ಕೆ ಬಂದ ಎಸಿಬಿ ರಾಜ್ಯಾದ್ಯಂತ ಅಘೋಷಿತ ಆಸ್ತಿ ಕೇಸ್ಗಳಿಗೆ ಸಂಬಂಧಿಸಿದಂತೆ 989ಕ್ಕೂ ಹೆಚ್ಚಿನ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಮೇಲೆ ದಾಳಿ ನಡೆಸಿದೆ. ಇದರಲ್ಲಿ 510ಕ್ಕೂ ಹೆಚ್ಚಿನ ಪ್ರಕರಣಗಳು ತನಿಖಾ ಹಂತದಲ್ಲಿವೆ. ದಾಳಿಗೊಳಗಾದ ಸಂದರ್ಭ ದಲ್ಲಷ್ಟೇ ಸುದ್ದಿಯಾಗುವ ಅಧಿಕಾರಿಗಳು ನಂತರ ಕೆಲವೇ ದಿನಗಳಲ್ಲಿ ಏನೂ ಆಗಿಲ್ಲ ಎನ್ನುವಂತೆ ಮತ್ತೆ ಅದೇ ಕಚೇರಿ, ಅದೇ ಹುದ್ದೆಗೆ ಹಾಜರಾಗುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ದೊಡ್ಡವರು ಸೇಫ್: 45 ಪ್ರಮುಖ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರ ಉನ್ನತ ಹುದ್ದೆಯ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಲು ನಿರಾಕರಿಸಿದೆ. ಹೀಗಾಗಿ ಸಣ್ಣ-ಪುಟ್ಟ ಪ್ರಕರಣ ಹೊರತುಪಡಿಸಿ ದೊಡ್ಡ ಭ್ರಷ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಎಸಿಬಿ ವಿಫಲವಾಗಿದೆ. ಸರ್ಕಾರ ಎಸಿಬಿಗೆ ಬಲ ನೀಡುವ ಬದಲು ಇನ್ನಷ್ಟು ಕುಗ್ಗಿಸಲು ಹೊರಟಿದೆ. ಬಿಡಿಎ, ಲೋಕೋಪಯೋಗಿ, ಕೆಐಎಡಿಬಿ, ಕೃಷಿ, ಬಿಬಿಎಂಪಿ ಸೇರಿ ಇನ್ನಿತರ ಹಲವು ಇಲಾಖೆಗಳ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ಜಂಟಿ ನಿರ್ದೇಶಕರು, ಇಂಜಿನಿಯರ್ಗಳು ಕೋಟಿ - ಕೋಟಿ ಭ್ರಷ್ಟಾಚಾರ ಆರೋಪದ ಮೇಲೆ ಎಸಿಬಿ ಬಲೆಗೆ ಬಿದ್ದು ವರ್ಷಗಳೇ ಉರುಳಿದ್ದರೂ ಇನ್ನೂ ಚಾರ್ಜ್ಶೀಟ್ ಸಲ್ಲಿಕೆಯಾಗಿಲ್ಲ.
80 ಕೆಜಿ ಚಿನ್ನ ಜಪ್ತಿ: ಎಸಿಬಿ ದಾಳಿಯಲ್ಲಿ ಈವರೆಗೆ ಅಂದಾಜು 80 ಕೆಜಿಗೂ ಅಧಿಕ ಚಿನ್ನಾಭರಣ, 50 ಕೋಟಿ ರೂ. ಗೂ ಅಧಿಕ ನಗದು, ನೂರಾರು ಕೋಟಿ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಲಾಗಿದೆ. ಈ ಪೈಕಿ ಸೂಕ್ತ ದಾಖಲೆ ಕೊಟ್ಟವರಿಗೆ ಅವರ ಆಸ್ತಿ ಹಿಂತಿರುಗಿಸಲಾಗುತ್ತದೆ. ಶೇ.78 ಪ್ರಕರಣ ತನಿಖಾ ಹಂತದಲ್ಲಿದ್ದು, ಇದು ಇತ್ಯರ್ಥಗೊಂಡ ಬಳಿಕವೇ ದಾಳಿಗೊಳಗಾದವರ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ.
ದಾಳಿಗೊಳಗಾದವರ ಆಸ್ತಿಗೆ ಸಂಬಂಧಿಸಿದ ಪ್ರತಿ ದಾಖಲೆಗಳನ್ನೂ ಕಲೆ ಹಾಕಿ ತನಿಖೆ ನಡೆಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ದೊಡ್ಡ ಭ್ರಷ್ಟಾಚಾರ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದು ವಿಳಂಬವಾಗುತ್ತದೆ. ಎಸಿಬಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. | ಸೀಮಂತ್ ಕುಮಾರ್ ಸಿಂಗ್ ಎಸಿಬಿ, ಎಡಿಜಿಪಿ
1638: ದಾಖಲಾಗಿರುವ ಕೇಸ್ಗಳು
368: ಆರೋಪಿ ಅಧಿಕಾರಿಗಳ ವಿಚಾರಣೆಗೆ ಸಿಕ್ಕಿಲ್ಲ ಸಕ್ಷಮ ಪ್ರಾಧಿಕಾರದ ಅನುಮತಿ
615: ಅಧಿಕಾರಿಗಳ ವಿರುದ್ಧ ದೋಷಾ ರೋಪ ಪಟ್ಟಿ
04: ಜನರಿಗಷ್ಟೇ ಶಿಕ್ಷೆ (ಎಲ್ಲ ಕೇಸ್ ಸೇರಿ)