ಡಿಕೆಶಿಗೆ ಬ್ಲ್ಯಾಕ್ ಮೇಲ್ ಮಾಡುವಷ್ಟು ಧಮ್ ಯಾರಿಗೂ ಇಲ್ಲ

dks vs ct ravi
Published on

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಬ್ಲ್ಯಾಕ್ ಮೇಲ್ ಮಾಡುವಷ್ಟು ಧಮ್ ಯಾರಿಗೂ ಇಲ್ಲ !. ಡಿ.ಕೆ.ಶಿವಕುಮಾರ್ ಬೇರೆಯವರನ್ನು ಬ್ಲ್ಯಾಕ್‌ಮೇಲ್ ಮಾಡಬಹುದೇ ಹೊರತು, ಅವರನ್ನು ಹೆದರಿಸಲು ಆಗಲ್ಲವೆಂದು ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ಕಾಲೆಳೆದಿದ್ದಾರೆ.

ತನಿಖೆ ಹೆಸರಿನಲ್ಲಿ ಹಳೇ ಕಾಮಗಾರಿ ಬಿಲ್ ಪಾವತಿ ತಡೆ ಹಿಡಿದಿದ್ದಕ್ಕೆ ರಾಜ್ಯಪಾಲರಿಗೆ ಗುತ್ತಿಗೆದಾರರು ದೂರು ಸಲ್ಲಿಸಿದ್ದರ ಬಗ್ಗೆ ಸುದ್ದಿಗಾರರಿಗೆ ಸಿ.ಟಿ.ರವಿ ಮಂಗಳವಾರ ಪ್ರತಿಕ್ರಿಯಿಸಿ, ಹಳೇ ಬಿಲ್‌ಗಳಿಗೆ ಪರ್ಸೆಂಟೇಜ್ ಕೇಳುವ ಜತೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಮಾಹಿತಿ ನನಗೂ ಇದೆ.

ಬಿಲ್‌ಗಳು ದೋಷಪೂರಿತವಾಗಿದ್ದರೆ ಏನು ಕ್ರಮ ತೆಗೆದುಕೊಂಡಿದ್ದಾರೆ ಎಂಬುದನ್ನೂ ಹೇಳಬೇಕು. ಬ್ಲ್ಯಾಕ್ ಮೇಲ್ ಮಾಡುವುದಕ್ಕಾಗಿ ಎಸ್‌ಐಟಿ ತನಿಖೆಗೆ ಸೂಚಿಸಿದ್ದಾರೆ. ಐದು ವರ್ಷದ ಹಿಂದಿನ ಕಾಮಗಾರಿಗೂ ಪರ್ಸೆಂಟೇಜ್ ಕೇಳುತ್ತಿದ್ದಾರೆ ಎಂದು ಗೊತ್ತಾಗಿದೆ. ಡಿಸಿಎಂ ಧಮ್ಕಿ ಹಾಕುತ್ತಿದ್ದಾರೆ ಹೊರತು ವ್ಯವಸ್ಥೆ ರೂಪಿಸಿಲ್ಲ ಎಂದು ಹರಿಹಾಯ್ದರು.

ಬಿಜೆಪಿ ಭ್ರಷ್ಟ ಎಂದವರು ಮೊದಲ ದಿನದಿಂದಲೇ ಅಸಲಿ ರೂಪ ತೋರಿಸಿದ್ದಾರೆ. ಬಿಜೆಪಿಯತ್ತ ಬೆರಳು ಮಾಡುವುದು ಬಿಟ್ಟು, ಸರಿಯಾದ ವ್ಯವಸ್ಥೆ ಮಾಡಲಿ. ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿದ್ದಾರೆ. ಅವರ ಬಳಿ ಜಲ ಸಂಪನ್ಮೂಲ ಎಂಬ ಮತ್ತೊಂದು ಖಾತೆಯೂ ಇದೆ ಎಂಬುದನ್ನು ನೆನಪಿಸಬೇಕಾಗಿದೆ. ಒಂದಿಷ್ಟು ನೀರಾವರಿ, ರೈತರ ಪರವಾದ ಕಳಕಳಿಯನ್ನು ಹೊರ ಹಾಕಲಿ.

‘ಬ್ರ್ಯಾಂಡ್ ಬೆಂಗಳೂರು’ ಅಭಿವೃದ್ಧಿ, ಜನರ ಬಗೆಗಿನ ನೈಜ ಕಾಳಜಿಗೋ ಅಥವಾ ತನ್ನ ರಿಯಲ್ ಎಸ್ಟೇಟ್ ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳಲೋ ?. ನೈಸ್ ರಸ್ತೆ ಯೋಜನೆಯೂ ಬ್ರ್ಯಾಂಡ್ ಬೆಂಗಳೂರು ವ್ಯಾಪ್ತಿ ಬರುತ್ತದೋ ಅಥವಾ ಇಲ್ಲವೋ ?. ಇದೀಗ ಸುರಂಗ ಮಾರ್ಗದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಅನುಮಾನ ವ್ಯಕ್ತಪಡಿಸಿದರು.

ತನಿಖೆಗೆ ಮುನ್ನ ಕ್ಲೀನ್‌ಚಿಟ್ !

ಕೃಷಿ ಸಚಿವ ಚೆಲುವರಾಯಸ್ವಾಮಿ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಕೃಷಿ ಅಧಿಕಾರಿಗಳ ಬರೆದ ಪತ್ರ ನಕಲಿ ಎನ್ನುತ್ತಿದ್ದಾರೆ. ಮತ್ತೊಂದೆಡೆ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಒಪ್ಪಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ತನಿಖೆಗೆ ಮುನ್ನವೇ ನಕಲಿ ಎಂಬ ಕ್ಲೀನ್‌ಚಿಟ್ ನೀಡಿದ್ದಾರೆ ಎಂದ ಮೇಲೆ ಸತ್ಯಾಂಶ ಮುಚ್ಚಿ ಹಾಕಲು ತನಿಖೆ ಎಂದರ್ಥವಾಗುತ್ತದೆ.

ಉಡುಪಿ ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ ಎಂಬ ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವೆ. ಘಟನೆ ನಡೆದೇ ಇಲ್ಲವೆಂದು ಹೇಳಿದವರು ಸಿಐಡಿಗೆ ಕೊಟ್ಟಿರುವುದು ಅನುಮಾನ ಮೂಡಿಸುತ್ತದೆ. ಇದು, ಮಕ್ಕಳಾಟವೆಂದು ಗೃಹ ಸಚಿವರು ಹೇಳಿದ್ದಾರೆ. ಹಾಗಿದ್ದ ಮೇಲೆ ಮಕ್ಕಳಾಟವನ್ನು ಸಿಐಡಿ ಏಕೆ ಕೊಟ್ಟಿರಿ ? ಎಂದು ಸಿ.ಟಿ.ರವಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net