ಮಹಾತ್ಮಾ ಗಾಂಧೀಜಿಯವರ ಮೌಲ್ಯಗಳನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ: CM ಸಿದ್ದರಾಮಯ್ಯ

dk (33) (1)
Published on

ಬೆಂಗಳೂರು: ಮತಾಂಧ ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಗುಂಡಿಟ್ಟು ಕೊಂದು, ಅವರು ಇಹಲೋಕ ತ್ಯಜಿಸಿರಬಹುದು. ಆದರೆ, ಮಹಾತ್ಮಾ ಗಾಂಧೀಜಿಯವರ ಮೌಲ್ಯಗಳನ್ನು ಕೊಲ್ಲಲು ಗೋಡ್ಸೆಯಾಗಲಿ ಅಥವಾ ಇನ್ಯಾರಿಂದಾಗಲಿ ಕೊಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ(CM) ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಹುತಾತ್ಮರ ದಿನಾಚರಣೆ ಅಂಗವಾಗಿ ವಿಧಾನಸೌಧದ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದಿಗೂ ಅವರ ವಿಚಾರಧಾರೆಗಳು , ಮೌಲ್ಯಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಪ್ರಸ್ತುತವಾಗಿವೆ ಎಂದರು.

ಗಾಂಧೀಜಿಯವರು ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ್ದರು. ಅವರ ಹೋರಾಟಡ ಬದುಕು, ಅಹಿಂಸೆ, ಸತ್ಯಾಗ್ರಹ, ಇವು ನಮಗೆ ಪ್ರೇರಣೆ. ಜಗತ್ತಿನಲ್ಲಿ ಸತ್ಯ, ಅಹಿಂಸೆ, ಸತ್ಯಾಗೃಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ಗಾಂಧಿ ಭಾರತ ಕಟ್ಟಲು ಪ್ರಾಮಾಣಿಕ ಪ್ರಯತ್ನ ಅಗತ್ಯ

ಮಹಾತ್ಮಾ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ, ಈ ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಹೇಗಿರಬೇಕೆಂದು ಪರಿಹಾರಗಳನ್ನು ನೀಡಿದ್ದರು. ಭಾರತ ದೇಶ ಗ್ರಾಮಗಳ ದೇಶ. ಗ್ರಾಮಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದ್ದರು. ಅದಕ್ಕಾಗಿಯೇ ಗ್ರಾಮ ಸ್ವರಾಜ್ಯ ಎಂಬಾ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದರು.

ಗ್ರಾಮಗಳು ಸ್ವಾವಲಂಬಿಗಳಾಗಬೇಕು.ಆಗ ಮಾತ್ರ ಜನ, ದೇಶ ಸ್ವಾವಲಂಬಿಗಳಾಗಿ ಸಾಧ್ಯ. ಭಾರತದಲ್ಲಿ ಗುಡಿ ಕೈಗಾರಿಕೆಗಳು, ಅತಿ ಸಣ್ಣ ಕೈಗಾರಿಕೆಗಳು ಆರ್ಥಿಕತೆಯ ತಳಹದಿ. ಅದಕ್ಕೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದ್ದರು. ಗಾಂಧಿ ಭಾರತ ಕಟ್ಟುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು. ಅವರ ಮೌಲ್ಯಗಳನ್ನು ರೂಢಿಸಿಕೊಂಡು ಅದರಂತೆ ನಡೆಯುವ ಪ್ರಯತ್ನ ಮಾಡಬೇಕು ಎಂದು ಸಿಎಂ ತಿಳಿಸಿದರು.

ಕಾಲ್ತುಳಿತಕ್ಕೆ ಸಿಕ್ಕು ಮೃತಪಟ್ಟವರ ದೇಹಗಳನ್ನು ತರಲು ಏರ್ ಆಂಬ್ಯುಲೆನ್ಸ್

ಪ್ರಯಾಗ್ ರಾಜ್​ನಲ್ಲಿ ನಡೆದಿರುವ ಕಾಲ್ತುಳಿತದಲ್ಲಿ ಕರ್ನಾಟಕದ ನಾಲ್ವರು ಮೃತಪಟ್ಟಿದ್ದು, ಮೃತ ದೇಹಗಳನ್ನು ರಾಜ್ಯಕ್ಕೆ ತರಲು ಏರ್ ಆಂಬ್ಯುಲೆನ್ಸ್ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ವ್ಯವಸ್ಥೆ ಮಾಡಿದ್ದು, ಇನ್ನೂ ಎಂಟು ಜನ ನಾಪತ್ತೆಯಾಗಿರುವ ಬಗ್ಗೆ ಮಾಹಿತಿಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮೃತ ಪಟ್ಟವರ ಕುಟುಂಬಕ್ಕೆ ಪರಿಹಾರವನ್ನು ಘೋಷಣೆ ಮಾಡಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net