

ಬೆಂಗಳೂರು: ಚುನಾವಣೆ ನಡೆದು ಒಂದು ವರ್ಷದವರೆಗೆ ಕಾರ್ಯಕಾರಿ ಸಮಿತಿ ಸದಸ್ಯರ ವಿರುದ್ಧ ಅವಿಶ್ವಾಸ ಮಂಡನೆ ಬೇಡ ಎಂದು ರಾಜ್ಯ ಒಕ್ಕಲಿಗರ ಸಂಘಕ್ಕೆ ಹೈಕೋರ್ಟ್ ಸಲಹೆ ನೀಡಿದ್ದು, ಇದಕ್ಕಾಗಿ ಸಂಘದ ಉಪ ನಿಯಮಗಳಿಗೆ ಅಗತ್ಯ ತಿದ್ದುಪಡಿ ತರುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾದರೆ ಆ ಪ್ರಕ್ರಿಯೆಯನ್ನು ಹೊಸದಾಗಿ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಅವಿಶ್ವಾಸ ಮಂಡನೆ ವಿಚಾರವಾಗಿ ಹಾಲಿ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಹಾಗೂ ಕೆಂಚಪ್ಪಗೌಡ ಎರಡೂ ಬಣಗಳು ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸಿವಿಲ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೆ.ವಿ.ರೇಣುಕಾಪ್ರಸಾದ್ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಮೂರು ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯಪೀಠ ಮಂಗಳವಾರ ಈ ಆದೇಶ ಹೊರಡಿಸಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಎಲ್ಲ ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಿದೆ. ಅರ್ಜಿದಾರರು ಅಥವಾ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಸ್ವತಂತ್ರರು. ಆದರೆ, ಅವರು ಮಂಡಿಸುವ ಮುನ್ನ ಮೊದಲು ಸಂಘದ ಕಾರ್ಯದರ್ಶಿಗೆ ನೋಟಿಸ್ ನೀಡಬೇಕು. ಅವಿಶ್ವಾಸ ನಿರ್ಣಯದ ಪ್ರಸ್ತಾವವನ್ನು ಸರ್ವ ಸದಸ್ಯರ ಸಭೆಯ ಮುಂದಿಟ್ಟು ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಸಭೆಯಲ್ಲಿ ಚರ್ಚೆ ಹಾಗೂ ಮತದಾನದ ಹಕ್ಕು ಸಂಘದ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ ಎಂದು ನ್ಯಾಯಪೀಠ ಆದೇಶಿಸಿದೆ.
ಇದೇ ವೇಳೆ ಪದೇಪದೆ ಕಾರ್ಯಕಾರಿ ಸಮಿತಿ ಸದಸ್ಯರ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗುವುದನ್ನು ತಪ್ಪಿಸಲು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಂತರ ಒಂದು ವರ್ಷಗಳ ಕಾಲ ಅವಿಶ್ವಾಸ ನಿರ್ಣಯ ಮಂಡನೆ ಮಾಡದಂತೆ ಸಂಘದ ನಿಯಮಗಳಿಗೆ ತಿದ್ದುಪಡಿ ತರುವುದು ಸೂಕ್ತ ಎಂದೂ ಅರ್ಜಿದಾರರಿಗೆ ನ್ಯಾಯಾಲಯ ಸಲಹೆ ಕೊಟ್ಟಿದೆ.
ನಿಯಮಬಾಹಿರ ಸಭೆ ವಿರುದ್ಧ ಅರ್ಜಿ
2024ರ ಜು.4ರಂದು ಸಿ.ಎನ್.ಬಾಲಕೃಷ್ಣ ನೇತೃತ್ವದ ತಂಡ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದರು. ಆದರೆ, ಕೆಲವು ಸದಸ್ಯರು 2024ರ ಜು.18ಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ನೀಡಿದ್ದರು. ಆಯ್ಕೆಯಾದ ಹತ್ತೇ ದಿನಕ್ಕೆ ನೋಟಿಸ್ ನೀಡಿದ್ದರಿಂದ ಕಾರ್ಯಕಾರಿ ಸಮಿತಿ ಆ ನೋಟಿಸ್ ಅನ್ನು ತಿರಸ್ಕರಿಸಿತ್ತು.
ನಂತರ ಜು.30ಕ್ಕೆ ಸಭೆ ನಡೆಸಿದ ಕೆಲವು ಸದಸ್ಯರು ಆ.9ಕ್ಕೆ ತಾವೇ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆಗೆ ನೋಟಿಸ್ ನೀಡಿದ್ದರು. ಆಗ ಸಂಘದ ಹಾಲಿ ಪದಾಧಿಕಾರಿಗಳು ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ಸಿವಿಲ್ ನ್ಯಾಯಾಲಯ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಭಯ ತಂಡಗಳಿಗೆ ನಿರ್ದೇಶನ ನೀಡಿತ್ತು. ಆ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.
ಸಂಸ್ಥೆಯ ಹಿತಾಸಕ್ತಿಯ ದೃಷ್ಟಿಯಿಂದ ಹೈಕೋರ್ಟ್ ಈ ಆದೇಶ ನೀಡಿದೆ. ಚುನಾವಣೆಯಾಗಿ 1 ವರ್ಷದವರೆಗೆ ಅವಿಶ್ವಾಸ ನಿರ್ಣಯ ಮಂಡಿಸುವುದು ಬೇಡ ಎಂಬ ನ್ಯಾಯಾಲಯದ ಸಲಹೆ ಸರಿಯಾಗಿದೆ. ಕಾರ್ಯಕಾರಿ ಸಮಿತಿ ಆಯ್ಕೆಯಾಗಿ ಬರೀ 3 ತಿಂಗಳಾಗಿದೆ. ಅವಿಶ್ವಾಸ ನಿರ್ಣಯ ಮಂಡಿಸುವುದಾದಲ್ಲಿ ಕೋರ್ಟ್ ಆದೇಶದಂತೆ ನಿಯಮ ಪಾಲಿಸಬೇಕು.
ಸಿ.ಎನ್.ಬಾಲಕೃಷ್ಣ_ಅಧ್ಯಕ್ಷರು, ಒಕ್ಕಲಿಗರ ಸಂಘ