

ಗುವಾಹಟಿ: ಇಡೀ ಪ್ರಪಂಚದಲ್ಲೇ ಕರೊನಾವೈರಸ್ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ. ಇದನ್ನು ತಡೆಗಟ್ಟಲು ಪ್ರಮುಖವಾಗಿ ಬಳಸುತ್ತಿರುವ ಅಸ್ತ್ರ ಮಾಸ್ಕ್. ಎಲ್ಲ ಕಡೆ ಸರ್ಕಾರಗಳು ಜನರಿಗೆ ದಯವಿಟ್ಟು ಮಾಸ್ಕ್ ಹಾಕಿ ಅಂತಾ ಹೇಳುವುದಲ್ಲದೇ, ಮಾಸ್ಕ್ ಹಾಕದಿದ್ದರೇ ದಂಡ, ಜೈಲುವಾಸದ ಶಿಕ್ಷೆ ನೀಡುತ್ತಿವೆ.
ಆದರೆ, ಅಸ್ಸಾಂನಲ್ಲಿ ಮಾತ್ರ ಸ್ವತಃ ಆರೋಗ್ಯ ಸಚಿವರೇ ಜನರಿಗೆ ಮಾಸ್ಕ್ ಹಾಕಬೇಡಿ ಎಂದು ವಿವಾದಕ್ಕೊಳಗಾಗಿದ್ದಾರೆ. ಅಸ್ಸಾಂ ಆರೋಗ್ಯ ಸಚಿವ ಹಿಮಾಂಶು ಬಿಸ್ವಾ ಶರ್ಮಾ ಅವರೇ ಈ ವಿವಾದಾತ್ಮಕ ಹೇಳಿಕೆ ನೀಡಿದವರು.
ಭಾನುವಾರ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ಅಸ್ಸಾಂನಲ್ಲಿ ಜನ ಮಾಸ್ಕ್ ಧರಿಸುವುದು ಅವಶ್ಯಕತೆ ಇಲ್ಲ. ಏಕೆಂದರೆ ಅಸ್ಸಾಂನಲ್ಲಿ ಕರೊನಾವೈರಸ್ ಹಾವಳಿ ಇಲ್ಲ ಎಂದು ಹೇಳಿದ್ದಾರೆ. ಶರ್ಮಾ ಅವರ ಈ ಹೇಳಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ಪಸರಿಸುತ್ತಿರುವುದರಿಂದ ಸರ್ಕಾರಗಳು ಚಿಂತಾಕ್ರಾಂತವಾಗಿವೆ. ಅಲ್ಲಲ್ಲಿ ಲಾಕ್ಡೌನ್ಗಳು ಜಾರಿಯಾಗುತ್ತಿವೆ. ವೈರಸ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳು ತೆಗೆದುಕೊಳ್ಳುತ್ತಿವೆ. ಇಂತಹ ಸಮಯದಲ್ಲೇ ಅಸ್ಸಾಂ ಆರೋಗ್ಯ ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಸ್ಸಾಂನಲ್ಲಿ ಇದುವರೆಗೆ 2.19 ಲಕ್ಷ ಜನಕ್ಕೆ ಸೋಂಕು ತಗುಲಿತ್ತು. ಇಂದು ಹೊಸದಾಗಿ 68 ಜನಕ್ಕೆ ಕೋವಿಡ್ ಸೋಂಕು ತಗುಲಿದೆ. 1,107 ಜನ ಅಸ್ಸಾಂನಲ್ಲಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.