

ಬೆಂಗಳೂರು: ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಚುನಾವಣಾ ಕರ್ತವ್ಯಗಳಿಗೆ ಆದ್ಯತೆ ಮೇರೆಗೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಮುಖ್ಯ ಕಾರ್ಯದರ್ಶಿ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಎಚ್‌ಆರ್‌ಎಂಎಸ್‌ನಲ್ಲಿ ಲಭ್ಯವಿರುವ ಮಾಹಿತಿಯಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರಸ ಅಧಿಕಾರಿ/ನೌಕರರನ್ನು ನೇಮಿಸುವಂತೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಕರನ್ನು ಚುನಾವಣಾ ಸಂಬಂಧಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳಿಗೆ ಹಾಗೂ ಬೂತ್ ಮಟ್ಟದ ಅಧಿಕಾರಿಗಳಾಗಿ ನಿಯೋಜನೆ ಮಾಡಲಾಗುತ್ತಿದೆ.
ಇದರಿಂದಾಗಿ ಶಾಲೆಗಳಲ್ಲಿ ಸರಿಯಾದ ಸಮಯಕ್ಕೆ ಬೋಧನಾ ಕಾರ್ಯವನ್ನು ಮುಗಿಸದೆ ಮಕ್ಕಳ ಪ್ರಗತಿ ಕುಂಠಿತವಾಗುತ್ತಿದೆ, ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿರುವುದಾಗಿ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಲ್ಲಿಯೂ ಸಾಮಾನ್ಯವಾಗಿ ರಜಾ ದಿನಗಳು, ಬೋಧಕೇತರ ದಿನಗಳು ಹಾಗೂ ಬೋಧಕೇತರ ಅವಧಿಯಲ್ಲಿ ಶಾಲಾ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳುವಂತೆ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಯಾವುದೇ ಸಂದರ್ಭದಲ್ಲಿಯೂ ಚುನಾವಣಾ ಕರ್ತವ್ಯಗಳಿಗೆ ನಿಯೋಜಿಸುವಂತೆ ಸೂಚನೆ ನೀಡಲಾಗಿದೆ.