

ವಿಲಾಸ ಮೇಲಗಿರಿ ಬೆಂಗಳೂರು
ಹಿಂಗಾರು ಮಳೆ ಯಥೇಚ್ಛವಾಗಿ ಆಗಿದ್ದರಿಂದ ಈ ಬಾರಿ ರೈತರು ಮತ್ತು ಸರ್ಕಾರಕ್ಕೆ ಜಾನುವಾರುಗಳ ಮೇವಿನ ಬಗ್ಗೆ ಚಿಂತೆ ಇಲ್ಲ. ಕಳೆದ ವರ್ಷ ಮೇವಿನ ಹಾಹಾಕಾರ ತಲೆದೋರಿತ್ತು. ಆದರೆ, ಈ ವರ್ಷ ಕರಾವಳಿ ಭಾಗದಲ್ಲಿ ಮಾತ್ರ ಒಣ ಮೇವಿಗೆ ತುಸು ಸಮಸ್ಯೆಯಾಗಿದ್ದು, ಉಳಿದಂತೆ ರಾಜ್ಯದಲ್ಲಿ ಎಲ್ಲೂ ಮೇವಿಗೆ ಬರ ಬಂದಿಲ್ಲ. ಹಿಂಗಾರು ಮಳೆ ನಿರೀಕ್ಷೆಗೂ ಮೀರಿ (ಅನೇಕ ಕಡೆ ಅತಿವೃಷ್ಟಿ) ಆಗಿದ್ದರಿಂದ ಪಶು ಸಂಗೋಪನಾ ಇಲಾಖೆ ಈ ಬಾರಿ ಮೇವು ದಾಸ್ತಾನು ಮಾಡಿಲ್ಲ.
ಎಷ್ಟಿದೆ ಮೇವು?: ರೈತರ ಬಳಿ ಸರಾಸರಿ 26 ವಾರಗಳಿಗಾಗುವಷ್ಟು ಮೇವು ದಾಸ್ತಾನಿರುವುದಾಗಿ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಒಟ್ಟು 1.29 ಕೋಟಿ ದನ ಮತ್ತು ಎಮ್ಮೆಗಳಿವೆ. ಪ್ರಸ್ತುತ ರೈತರ ಬಳಿ 147.82 ಲಕ್ಷ ಟನ್ ಮೇವು ದಾಸ್ತಾನಿರುವುದಾಗಿ ಅಂದಾಜಿಸಲಾಗಿದೆ. ಯಾವುದೇ ಜಿಲ್ಲೆಯಲ್ಲಿ ಮೇವಿನ ಕೊರತೆ ಕಂಡುಬಂದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ ಎಂದರೆ ಮುಂದಿನ 10 ವಾರಗಳಿಗೆ ಹಾಗೂ ಹಾವೇರಿ ಜಿಲ್ಲೆಯಲ್ಲಿ ಗರಿಷ್ಠ ಎಂದರೆ ಮುಂದಿನ 61 ವಾರಗಳಿಗೆ ಮೇವು ಲಭ್ಯವಿದ್ದು, ರಾಜ್ಯದಲ್ಲಿರುವ ಮೇವಿನ ದಾಸ್ತಾನು ಸರಾಸರಿ ಮುಂದಿನ 26 ವಾರಗಳಿಗೆ ಸಾಕಾಗುತ್ತದೆ.
ಮೇವಿನ ಬೀಜ: ರೈತರು ಹಸಿರು ಮೇವನ್ನು ಉತ್ಪಾದಿಸಲು ಇಲಾಖೆಯಿಂದ ಉಚಿತವಾಗಿ 44.44 ಲಕ್ಷ ಮೇವಿನ ಬೀಜದ ಮಿನಿಕಿಟ್ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೆ 1 ಲಕ್ಷ ಕಿಟ್ ವಿತರಿಸಲಾಗಿದೆ. ಹಿಂಗಾರು ಮಳೆ ಉತ್ತಮವಾಗಿದ್ದರಿಂದ ಸರ್ಕಾರ ಈ ಬಾರಿ ಮೇವು ಬ್ಯಾಂಕ್ ಅಥವಾ ಗೋ ಶಾಲೆ ತೆರೆಯುವ ಪರಿಸ್ಥಿತಿ ಇಲ್ಲ. ಈ ಬಾರಿ ಬೇರೆ ರಾಜ್ಯಗಳಿಂದ ಮೇವು ಖರೀದಿಸುವ ಪ್ರಮೇಯವೇ ಇಲ್ಲ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು.
ಪಶು ಆಹಾರ ದರ ಏರಿಕೆ?
ಕೆಲ ಖಾಸಗಿ ಕಂಪನಿಗಳು ಕಚ್ಚಾ ಸಾಮಗ್ರಿ ಬೆಲೆ ಹೆಚ್ಚಳದ ನೆಪದಲ್ಲಿ ಶೀಘ್ರದಲ್ಲೇ ಪಶು ಆಹಾರ ದರ ಏರಿಸಲಿವೆ ಎಂದು ಮೂಲಗಳು ತಿಳಿಸಿವೆ.
ನಿರ್ಬಂಧ ತೆರವಿನಿಂದ ನಿರಾಳ
ಪಶು ಆಹಾರ ಉತ್ಪಾದನೆ ಮತ್ತು ಸಾಗಣೆ, ಕಚ್ಚಾ ಸಾಮಗ್ರಿ ಮತ್ತು ಜಾನುವಾರುಗಳ ಸಂವರ್ಧನೆಗೆ ಅವಶ್ಯವಿರುವ ದ್ರವಸಾರಜನಕ ಸಾಗಣೆ, ಪಶು ಸಂಗೋಪನೆಗೆ ಸಂಬಂಧಿತ ಎಲ್ಲ ಚಟುವಟಿಕೆಗಳಿಗೆ ಮೊದಲ ಹಂತದ ಲಾಕ್ಡೌನ್ ಅವಧಿಯಲ್ಲಿ ಇದ್ದ ನಿರ್ಬಂಧಗಳನ್ನು ತೆರವುಗೊಳಿಸಿರುವುದರಿಂದ ರೈತರು, ಹೈನು ಉತ್ಪಾದಕರು ನಿರಾಳರಾಗಿದ್ದಾರೆ. ‘ಪಶು ಆಹಾರ ಉತ್ಪಾದನೆಗೇನೂ ಕೊರತೆ ಇಲ್ಲ. ಆದರೆ, ಸಾಗಣೆ ಸಮಸ್ಯೆಯಿಂದ ಕೆಲವೆಡೆ ಪಶು ಆಹಾರಕ್ಕೆ ವ್ಯತ್ಯಯ ಆಗಿರುವ ಸಾಧ್ಯತೆಗಳಿವೆ. ಈಗ ಮತ್ತೆ ಸರಕು ಸಾಗಣೆ ವಾಹನಗಳ ಓಡಾಟ ಶುರುವಾಗಿದ್ದು ಪಶು ಆಹಾರ ಸಮಸ್ಯೆಯಾಗದು’ ಎಂದು ಹುಮನಾಬಾದ್ ಪಶುಆಹಾರ ಉತ್ಪಾದಕ ಶಿವಕುಮಾರ ಹಿರೇಮಠ ಹೇಳಿದರು.
ಮೇ 5ರಿಂದ ಜಲಚೇತನ
ಶಿವಮೊಗ್ಗ: ಗ್ರಾಮೀಣ ಭಾಗದಲ್ಲಿ ಅಂತರ್ಜಲ ವೃದ್ಧಿಗೆ 9 ಜಿಲ್ಲೆಗಳಲ್ಲಿ ಜಲಚೇತನ ಯೋಜನೆ ಮೇ 5ರಿಂದ ಜಾರಿಗೊಳ್ಳಲಿದ್ದು, ನರೇಗಾ ಯೋಜನೆ ಕಾರ್ವಿುಕರನ್ನೇ ಜಲಚೇತನ ಕೆಲಸಗಳಿಗೆ ಬಳಸಿ ಕೊಳ್ಳಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ನರೇಗಾ ಯೋಜನೆಯಲ್ಲಿ ರಾಜ್ಯದ 6,021 ಗ್ರಾಪಂಗಳಲ್ಲಿ ಏಕಕಾಲಕ್ಕೆ ಕಾಮಗಾರಿ ಆರಂಭವಾಗಲಿದೆ. ಈಗಾಗಲೇ ಕೇಂದ್ರದಿಂದ 1,860 ಕೋಟಿ ರೂ. ಬಿಡುಗಡೆ ಆಗಿದೆ. ಪುರುಷ- ಮಹಿಳೆಗೆ 275 ರೂ. ಕೂಲಿ ದರ ನಿಗದಿಪಡಿಸಿದ್ದು, ಕೆಲಸ ಮಾಡಿದ 15 ದಿನಗಳಲ್ಲಿ ಕಾರ್ವಿುಕರ ಖಾತೆಗೆ ಹಣ ಸಂದಾಯವಾಗಲಿದೆ ಎಂದರು.
962.29 ಕೋಟಿ ರೂ. ಪಾವತಿ
ವಿಜಯಪುರ: ಪ್ರಸಕ್ತ ಸಾಲಿನಲ್ಲಿ ರಾಜ್ಯದ 48.27 ಲಕ್ಷ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಾಗಿದ್ದು, ಮೊದಲ ಕಂತಿನಲ್ಲಿ ಇವರ ಖಾತೆಗಳಿಗೆ 965.59 ಕೋಟಿ ರೂ. ಪಾವತಿಸಲಾಗಿದೆ. 5.7 ಲಕ್ಷ ರೈತರನ್ನು ನೋಂದಾಯಿಸಿಕೊಳ್ಳುವ ಮೂಲಕ ಬೆಳಗಾವಿ ಜಿಲ್ಲೆ (101.58 ಕೋಟಿ ರೂ.) ಮೊದಲ ಸ್ಥಾನದಲ್ಲಿ ಇದೆ. ತುಮಕೂರಲ್ಲಿ 2.73 ಲಕ್ಷ ರೈತರು (54.75 ಕೋಟಿ ರೂ.), ಮಂಡ್ಯ 2.42 ಲಕ್ಷ (48.44), ಕಲಬುರಗಿ 2.34 ಲಕ್ಷ (46.92), ಹಾಸನ 2.34 ಲಕ್ಷ (46.89), ವಿಜಯಪುರದಲ್ಲಿ 2.29 ಲಕ್ಷ ರೈತರು (45.97) ಪಡೆದಿದ್ದಾರೆ.