ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಗೆ ಸಚಿವರ ಬರ

Congress
Published on

ಬೆಳಗಾವಿ: ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ಗುರುವಾರ ನಡೆದ ಚರ್ಚೆಯಲ್ಲಿ ಸಚಿವರ ಅನುಪಸ್ಥಿತಿ ಎದ್ದು ಕಾಣಿಸಿತು. ಇದು ಪ್ರತಿಪಕ್ಷ ಬಿಜೆಪಿ ಸದಸ್ಯರ ಸಭಾತ್ಯಾಗಕ್ಕೂ ಕಾರಣವಾಯಿತು.

ಭೋಜನ ವಿರಾಮದ ನಂತರ ಚರ್ಚೆ ಆರಂಭವಾದಾಗ ಸಚಿವ ಪ್ರಿಯಾಂಕ್ ಖರ್ಗೆ ಹೊರತಾಗಿ ಯಾವೊಬ್ಬ ಸಚಿವರೂ ಇರಲಿಲ್ಲ. ಅಧಿಕಾರಿಗಳ ಗ್ಯಾಲರಿಯೂ ಖಾಲಿಯಾಗಿತ್ತು. ಆಡಳಿತ ಪಕ್ಷದ ಶಾಸಕರ ಕೊರತೆಯೂ ಇತ್ತು.

ಸಚಿವರು, ಅಧಿಕಾರಿಗಳು ಬರಬಹುದೆಂಬ ನಿರೀಕ್ಷೆಯಲ್ಲಿ ಮಾತು ಆರಂಭಿಸಿ 15 ನಿಮಿಷ ಕಳೆದರೂ ಸಚಿವರ ಸುಳಿವು ಇಲ್ಲದ ಕಾರಣ ಸಿದ್ದು ಸವದಿ ಸಿಟ್ಟಾದರು. ನಾವೇನು ಗೋಡೆಗೆ ಭಾಷಣ ಮಾಡಬೇಕೇ? ಉತ್ತರ ಕರ್ನಾಟಕದ ಬಗ್ಗೆ ಇಷ್ಟೊಂದು ತಾತ್ಸಾರ ಏಕೆ ಎಂದರು. ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ದನಿಗೂಡಿಸಿದರು. 10 ನಿಮಿಷ ಕಲಾಪ ಮುಂದೂಡಿ ಎಂದು ಪಟ್ಟು ಹಿಡಿದರು. ಅಂತಿಮವಾಗಿ ಸಭಾತ್ಯಾಗಕ್ಕೆ ಮುಂದಾದರು.

ನೀವು ಮಾತನಾಡಿ, ಅಧಿಕಾರಿಗಳು ನೋಟ್ ಮಾಡಿಕೊಳ್ಳುತ್ತಾರೆ. ನೀವು ಕೊಡುವ ಸಲಹೆಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಸಚಿವ ಪ್ರಿಯಾಂಕ್ ಹೇಳಿದರಾದರೂ ಸಚಿವರೆಲ್ಲಾ ಎಲ್ಲಿ ಹೋಗಿದ್ದಾರೆ? ಸದನಕ್ಕೇಕೆ ಬಂದಿಲ್ಲ? ನೀವು ಇದನ್ನು ಸಮರ್ಥಿಸುತ್ತಿರುವಿರಾ ಎಂದು ಪ್ರಶ್ನಿಸಿದರು. ಈ ಮೂಲಕ ಪ್ರಿಯಾಂಕ್ ಸುಮ್ಮನಾದರು.

ಸಚಿವರು ಬಾರದಿದ್ದರೆ ನಾವೂ ಸದನಕ್ಕೆ ಬರುವುದಿಲ್ಲ ಎಂದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಅಚ್ಚರಿ ಎಂದರೆ ಸ್ಪೀಕರ್ ಖಾದರ್, ಸಚಿವರನ್ನು ಕಲಾಪಕ್ಕೆ ಕರೆಸುವ ಬದಲು ಪ್ರತಿಪಕ್ಷದ ಮೇಲೆಯೇ ಮುಗಿಬಿದ್ದರು. ನೀವು ರಾಜಕೀಯ ಮಾಡುತ್ತಿದ್ದೀರಿ ಎಂದು ಸಿಟ್ಟಾದರು.

ನಿಮ್ಮ ಸದಸ್ಯರು ಮಾತನಾಡುವಾಗಲೇ ಸಭಾತ್ಯಾಗ ಮಾಡುವುದು ಎಂದರೇನು? ಇದು ರಾಜಕೀಯ ಪ್ರೇರಿತ ಅಲ್ಲದೆ ಮತ್ತೇನು? ಹೊರಗೆ ಹೋದವರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಇಲ್ಲಿ ಇರುವವರು ಮಾತನಾಡಿ ಎಂದು ಕಲಾಪ ಮುಂದುವರಿಸಿದರು.

ಆದರೆ, ಈ ನಡುವೆ ಉತ್ತರ ಕರ್ನಾಟಕದ ಚರ್ಚೆ ವಿರೋಧಿಸಿ ಸಭಾತ್ಯಾಗ ಮಾಡಿದ ಬಿಜೆಪಿ ನಡೆ ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಹೇಳುತ್ತಿದ್ದಂತೆ, ಜೆಡಿಎಸ್​ನ ಶರಣಗೌಡ ಕಂದಕೂರು ಎದ್ದುನಿಂತು, ಮಂತ್ರಿಗಳಿಲ್ಲ ಎಂದು ಸಭಾತ್ಯಾಗ ಮಾಡಿದ್ದಾರೆಯೇ ಹೊರತು, ಉತ್ತರ ಕರ್ನಾಟಕದ ಚರ್ಚೆ ವಿರೋಧಿಸಿ ಅಲ್ಲ ಎಂದರು.

ಕೆಲ ಸಮಯದ ಬಳಿಕ ಬಿಜೆಪಿ ಸದಸ್ಯರು ಪ್ರತಿಪಕ್ಷ ನಾಯಕ ಆರ್.ಅಶೋಕ್ ಜತೆಗೆ ಪುನಃ ಕಲಾಪಕ್ಕೆ ಆಗಮಿಸಿ ಚರ್ಚೆಯಲ್ಲಿ ಪಾಲ್ಗೊಂಡರು. ಆರೇಳು ಸಚಿವರೂ ಅಷ್ಟರಲ್ಲಿ ಹಾಜರಾದರು.

ಉತ್ತರ ಕರ್ನಾಟಕವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದೆ. ಆದರೂ ಅವರು ಬಾದಾಮಿ ಕ್ಷೇತ್ರದ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಭೀಕರ ಬರದ ನಡುವೆ ರಾಜ್ಯ ಸರ್ಕಾರದ ನಡವಳಿಕೆ ವಿರುದ್ಧ ಹೋರಾಟ ಮಾಡಲೇ ಬೇಕಾಗಿದೆ ಸ್ಥಿತಿ ಇದೆ. ರೈತರಿಗೆ ಪರಿಹಾರ ನೀಡದ ದುಷ್ಟ ಸರ್ಕಾರ ವಿರುದ್ಧ ರೈತರ ಜತೆ ಹೋರಾಟಕ್ಕೆ ಧುಮುಕುತ್ತೇವೆ. ರೈತರ ವಿಚಾರದಲ್ಲಿ ನಾವು ಯಾವತ್ತೂ ಬೆಂಬಲ ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ.

| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net