ಪ್ರೇಮ, ವಿಷ, ಜಾತಿ ಬಣ್ಣ ಬೇಡ

CTD 10 Sree Thipperudraswamiji
Published on

ಚಿತ್ರದುರ್ಗ: ಕವಾಡಿಗರಹಟ್ಟಿ ಪ್ರಕರಣಕ್ಕೆ ಪ್ರೇಮ, ವಿಷ, ಜಾತಿಯ ಬಣ್ಣ ಬಳಿಯದೆ ನಿಷ್ಪಕ್ಷಪಾತ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆಯಾಗಬೇಕು ಎಂದು ಶ್ರೀ ತಿಪ್ಪೇರುದ್ರ ಸ್ವಾಮೀಜಿ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇವಲ ದಲಿತ ಕಾಲನಿ ನಿವಾಸಿಗಳು ಮಾತ್ರ ಅಸ್ವಸ್ಥರಾಗಿಲ್ಲ, ಲಿಂಗಾಯತ ಸಮುದಾಯದವರೂ ಆ ಸಮಸ್ಯೆ ಅನುಭವಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರೂ ವಿಷ ಬೆರೆಸಿಲ್ಲವೆಂಬ ನಂಬಿಕೆ ಇದ್ದು, ರಾಜಕೀಯ ಸ್ವರೂಪ ಪಡೆಯಬಾರದು ಎಂದು ಮನವಿ ಮಾಡಿದರು.

ಇಡೀ ಹಟ್ಟಿಯ ಜನರೆಲ್ಲರೂ ಸಹಬಾಳ್ವೆಯಿಂದ ಬಾಳಬೇಕು. ಅಲ್ಲಿಯ ನಗರಸಭೆ ಸದಸ್ಯ ಅಥವಾ ಅಧಿಕಾರಿಗಳ ನಿರ್ಲಕ್ಷದಿಂದ ತಪ್ಪಾಗಿದ್ದರೆ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಟ್ಟಿಯಲ್ಲಿ ಮೂಲಸೌಕರ್ಯ, ಶೌಚಗೃಹಗಳಿಲ್ಲದೆ ನಿತ್ಯ ಹಲವರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಮೊದಲು ಮನೆ-ಮನೆಗೂ ಈ ಸೌಲಭ್ಯ ಕಲ್ಪಿಸಬೇಕು. ಶುದ್ಧ ಕುಡಿಯುವ ನೀರು, ಗುಣಮಟ್ಟದ ರಸ್ತೆ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕೆಲ ವರದಿಗಳಿಂದ ಕಾಲರಾ ಎಂಬುದು ದೃಢಪಟ್ಟಿದೆ. ನೀರನ್ನು ಶುದ್ಧಗೊಳಿಸದೆ, ಕಾಯಿಸಿದ ನೀರಿನ ಬದಲು ಓವರ್ ಹೆಡ್ ಟ್ಯಾಂಕ್‌ನಿಂದ ಸರಬರಾಜಾದ ನಲ್ಲಿ ನೀರನ್ನು ನೇರವಾಗಿ ಕುಡಿದಿದ್ದರ ಪರಿಣಾಮ ಹಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿರಬಹುದು. ಘಟನೆಗೆ ಏನೇ ಕಾರಣವಿರಲಿ, ಕೂಲಂಕುಷ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಕಲುಷಿತ ನೀರಿನಿಂದ ಸಂಭವಿಸಿದ ದುರ್ಘಟನೆಗೆ ಜಾತಿಯ ರಾಗ-ದ್ವೇಷ ಬೆರೆತು ಶಾಂತಿ-ನೆಮ್ಮದಿಯ ಸುಂದರ ಸಮಾಜ ಕಲುಷಿತಗೊಳಿಸಬಾರದು ಎಂದು ಕೋರಿದರು.

ಮುಖಂಡರಾದ ರತ್ನಮ್ಮ, ಮಹದೇವಮ್ಮ, ಲತಾ, ವನಜಾಕ್ಷಿ, ಭಾಗ್ಯಮ್ಮ, ಭಾರತಿ, ಚೈತ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net