

ಬೆಂಗಳೂರು: ಕರೊನಾ ನಿಯಂತ್ರಿಸುವ ಜತೆಗೆ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದು, ಈ ವಿಚಾರದಲ್ಲಿ ಸಂಪುಟ ಸದಸ್ಯರು ಇನ್ನಷ್ಟು ‘ಆಕ್ರಮಣಕಾರಿ’ಯಾಗುವಂತೆ ತಾಕೀತು ಮಾಡಿದ್ದಾರೆ. ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸೋಂಕು ಹೆಚ್ಚಿರುವ ಪ್ರದೇಶದಲ್ಲಿ ಸ್ವತಃ ‘ಸೂಕ್ಷ್ಮ ಮೇಲ್ವಿಚಾರಣೆ’ ನಡೆಸಲು ನಿರ್ಧರಿಸಿದ್ದಾರೆ.
ಬೆಂಗಳೂರಿನ ಎಂಟು ವಲಯಗಳ ಉಸ್ತುವಾರಿ ಸಚಿವರು, ಗೃಹ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಜತೆ ಸೋಮವಾರ 2 ತಾಸು ಸಭೆ ನಡೆಸಿದ ಸಿಎಂ, ಪ್ರತಿಯೊಬ್ಬರಿಂದ ಮಾಹಿತಿ ಪಡೆದುಕೊಂಡರು. ಬುಧ ವಾರದಿಂದ ಲಾಕ್ಡೌನ್ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
3648 ಹೊಸ ಪ್ರಕರಣಗಳು: ರಾಜ್ಯದಲ್ಲಿ ಕರೊನಾ ಅಬ್ಬರ ಮುಂದುವರಿದಿದ್ದು, ಸೋಮವಾರ 3648 ಹೊಸ ಪ್ರಕರಣ ಬೆಳಕಿಗೆ ಬಂದಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 67,420ಕ್ಕೆ ಏರಿಕೆಯಾಗಿದೆ. 42,216 ಸಕ್ರಿಯ ಪ್ರಕರಣಗಳಿವೆ. ಈ ಮಧ್ಯೆ, ಭಾನುವಾರ ದೇಶದಲ್ಲಿ 40 ಸಾವಿರಕ್ಕೂ ಅಧಿಕ ಪ್ರಕರಣ ದೃಢಪಟ್ಟಿವೆ.