ಅನ್ನದಾತನಿಗೆ ಸಾಲ ಸಂಕಷ್ಟ; ಹೊಸ ಸಾಲ ಸಿಗುತ್ತಿಲ್ಲ, ಬೆಳೆ ವಿಮೆ ಕೈಸೇರುತ್ತಿಲ್ಲ

front-1
Published on

ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ರೈತರು ಹೊಸ ಸಮಸ್ಯೆಗೆ ಸಿಲುಕಿದ್ದಾರೆ. ಈ ವರ್ಷ ಕೃಷಿ ಚಟುವಟಿಕೆ ಆರಂಭಕ್ಕೆ ಉತ್ತಮ ಮುಂಗಾರು ಸಹಕಾರಿಯಾಗಿದ್ದರೂ, ಬೆಳೆ ವಿಮೆ ಹಾಗೂ ಹೊಸ ಸಾಲ ಸಿಗದೆ ರೈತರು ಲೇವಾದೇವಿದಾರರ ಮೊರೆಹೋಗುವ ಸನ್ನಿವೇಶ ಎದುರಾಗಿದೆ.

ಹಳೆಯ ಸಾಲ ಪಾವತಿಸದೆ ಹೊಸ ಸಾಲ ಸಿಗುವುದಿಲ್ಲ. ಈ ಸಂಕಷ್ಟ ಸಮಯದಲ್ಲಿ ಸಾಲ ಮರುಪಾವತಿಗೆ ರೈತರ ಬಳಿ ಹಣವಿಲ್ಲ. ಹಣ ಇದ್ದರೂ ಪಹಣಿ ಇನ್ನಿತರ ದಾಖಲೆಗಳನ್ನು ಪಡೆಯುವುದು ಕಷ್ಟಕರವಾಗಿದೆ. ರಾಜ್ಯದಲ್ಲಿ 79 ಲಕ್ಷ ರೈತರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇವರಲ್ಲಿ 20 ರಿಂದ 22 ಲಕ್ಷ ರೈತರು ಸಹಕಾರಿ ಬ್ಯಾಂಕ್​ಗಳಿಂದ ಹಾಗೂ 25 ರಿಂದ 28 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಕೃಷಿ ಸಾಲ ಪಡೆಯುತ್ತಾರೆ. ಉಳಿದ ರೈತರು ಲೇವಾದೇವಿದಾರರಿಂದ ಹಣ ಪಡೆಯುತ್ತಾರೆ. ಬ್ಯಾಂಕ್​ಗಳಿಂದ ವಾರ್ಷಿಕ 30 ರಿಂದ 35 ಸಾವಿರ ಕೋಟಿ ರೂ. ಕೃಷಿ ಸಾಲ ನೀಡಲಾಗುತ್ತದೆ ಎಂಬ ಅಂದಾಜಿದೆ.

ವರ್ಷದ ಕಂತು: ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾಲದ ಕಂತುಗಳ ಪಾವತಿಯನ್ನು ಆಗಸ್ಟ್​ವರೆಗೆ ಮುಂದಕ್ಕೆ ಹಾಕಿದೆ. ಆದರೆ ಕೃಷಿ ಸಾಲ ವರ್ಷದ ಕಂತು. ಹೀಗಾಗಿ ಇದನ್ನು ಮುಂದಕ್ಕೆ ಹಾಕಿಲ್ಲ. ಕೃಷಿ ಸಾಲದ ಕಂತು ಮರುಪಾವತಿಸಿದರೆ ಮಾತ್ರ ಹೊಸ ಸಾಲ ಸಿಗುತ್ತದೆ. ಒಂದೆರಡು ಜಿಲ್ಲೆಗಳ ಹೊರತಾಗಿ ಬಹುತೇಕ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ.

ಬರ ಘೋಷಣೆಯಲ್ಲಿ ಅವಕಾಶ: ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿದರೆ ಮಾತ್ರ ಬಡ್ಡಿ ಪಾವತಿಸಿ, ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಅವಕಾಶವಿದೆ. ಆದರೆ ಈಗ ಸರ್ಕಾರ ಈ ಅವಕಾಶ ನೀಡಿಲ್ಲ.

ದಾಖಲೆ ಪಡೆಯುವುದು ಕಷ್ಟ: ಹಣ ಇದ್ದವರು ಕಂತು ಪಾವತಿಸಿ ಸಾಲ ತೆಗೆದುಕೊಳ್ಳೋಣ ಎಂದರೆ ಪಹಣಿ, ಇಸಿಗಳನ್ನು ಪಡೆಯಲು ಸಾಧ್ಯವಾಗು ತ್ತಿಲ್ಲ. ಕಂದಾಯ ಇಲಾಖೆ ಸಿಬ್ಬಂದಿ ಕರೊನಾ ಕೆಲಸದಲ್ಲಿ ನಿರತರಾಗಿದ್ದಾರೆ. ಯಾವ ಕಾಗದಪತ್ರಗಳೂ ಸಿಗದಂತಹ ಸ್ಥಿತಿಯಿದೆ.

ಸಾಲಮನ್ನಾಕ್ಕೆ ಕಾದ ರೈತರು: ಯಡಿಯೂರಪ್ಪ ಸರ್ಕಾರ ಸಾಲಮನ್ನಾ ಮಾಡುತ್ತದೆ ಎಂದು ರೈತರು ಕಾದಿದ್ದರು. ಸಿಎಂಗೆ ಒಲವಿದ್ದರೂ ಈಗ ಹಣಕಾಸು ಪರಿಸ್ಥಿತಿ ಸರಿಯಿಲ್ಲ. ಪ್ರವಾಹ ಹಾಗೂ ಕರೊನಾ ಕೈಕಟ್ಟಿವೆ.

ಬೆಳೆ ವಿಮೆ ಸಮಸ್ಯೆ: ಸಮೀಕ್ಷೆ ಸರಿಯಾಗಿ ನಡೆಯದ ಕಾರಣದಿಂದಾಗಿ, ಬೆಳೆ ವಿಮೆ ಕಂತು ಪಾವತಿ ಮಾಡಿರುವ ರೈತರಿಗೂ ವಿಮೆ ಹಣ ಸರಿಯಾಗಿ ಬರುತ್ತಿಲ್ಲ. ಸುಮಾರು 600 ಕೋಟಿ ರೂ. ಬಾಕಿ ಇದೆ. ಸರ್ಕಾರ ಈಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.

ಸಹಕಾರ ವಲಯದ ಗುರಿ ಮತ್ತು ಸಾಧನೆ: ಸಹಕಾರ ವಲಯದಿಂದ 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 14,500 ಕೋಟಿ ರೂ. ಸಾಲ ನೀಡುವ ಗುರಿ ಇದೆ. ಇದುವರೆಗೆ 7,83,045 ರೈತರಿಗೆ 5356.15 ಕೋಟಿ ರೂ. ಸಾಲ ಪಾವತಿಸಲಾಗಿದೆ.

ಸಮಸ್ಯೆಗಳೇನು?:

  • ಸಾಲದ ಮೇಲಿನ ಬಡ್ಡಿ ಪಾವತಿಸಿ ನವೀಕರಣಕ್ಕೆ ಅವಕಾಶ ಇದೆ.ಈಗ ಬಡ್ಡಿ ಪಾವತಿಸಿದರೆ ಶೇ. 4ರ ಬಡ್ಡಿ ದರದಲ್ಲಿ ಹೊಸ ಸಾಲ ಸಿಗುತ್ತದೆ. ಇಲ್ಲದಿದ್ದರೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ನವೀಕರಣ ಮಾಡಿಕೊಳ್ಳಲು ಸಾಧ್ಯವಿಲ್ಲದ ಲಕ್ಷಾಂತರ ರೈತರಿದ್ದಾರೆ.
  • ಹಿಂದಿನ ಕುಮಾರಸ್ವಾಮಿ ಸರ್ಕಾರ ಘೋಷಣೆ ಮಾಡಿದ ಸಾಲಮನ್ನಾ ಯೋಜನೆಯಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ರೈತರ ದಾಖಲೆ ಹೊಂದಾಣಿಕೆಯಾಗಲಿಲ್ಲ. ಇದರಿಂದ ಸರ್ಕಾರದಿಂದ ಸಾಲಮನ್ನಾದ ಮೊತ್ತ ಬ್ಯಾಂಕ್​ಗಳಿಗೆ ಬರಲಿಲ್ಲ.
  • ಸಾಲಮನ್ನಾದ ಅವಧಿ 2017ರ ಡಿ.31ಕ್ಕೆ ಮುಕ್ತಾಯವಾಗಿತ್ತು. 2018ರ ಜ.1ರಿಂದ ಉಳಿದ ಸಾಲಕ್ಕೆ ಬಡ್ಡಿ ಯಾರು ಪಾವತಿ ಮಾಡಬೇಕೆಂಬ ಪ್ರಶ್ನೆ ಇದೆ. ಅಂತಹ ಲಕ್ಷಾಂತರ ರೈತರಿಗೆ ಹೊಸ ಸಾಲ ಸಿಗುತ್ತಿಲ್ಲ. ಬಡ್ಡಿ ಪಾವತಿಸುವ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಹೇಳುತ್ತಿಲ್ಲ. ಬ್ಯಾಂಕ್​ನವರಿಗೂ ಸ್ಪಷ್ಟ ಸೂಚನೆ ನೀಡಿಲ್ಲ. ಸರ್ಕಾರ ಬಡ್ಡಿ ಮನ್ನಾ ಮಾಡಬಹುದು ಎಂದು ರೈತರು ಕಾಯುತ್ತಿದ್ದಾರೆ.

ಸಾಲ ಸಿಗದಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅಂಕಿ-ಅಂಶ ಪಡೆಯುತ್ತೇನೆ. ಆದರೆ ಬೆಳೆ ವಿಮೆ ಸಮಸ್ಯೆ ಬಗೆಹರಿಸಿದ್ದೇವೆ. 15 ರಿಂದ 20 ದಿನಗಳಲ್ಲಿ ವಿಮೆ ಹಣ ರೈತರಿಗೆ ಸಿಗಲಿದೆ. | ಬಿ.ಸಿ.ಪಾಟೀಲ್ ಕೃಷಿ ಸಚಿವ ಯಾವ ಬ್ಯಾಂಕ್​ಗಳೂ ರೈತರಿಗೆ ಹೊಸ ಸಾಲ ನೀಡುತ್ತಿಲ್ಲ. ಇಂತಹ ಸಂಕಷ್ಟ ಸಂದರ್ಭದಲ್ಲಿ ಸರ್ಕಾರ ಹಳೆಯ ಸಾಲದ ನವೀಕರಣ ಜತೆಗೆ ಹೊಸದಾಗಿ ಸಾಲ ಸಿಗುವಂತೆ ಮಾಡಬೇಕು. ಆರ್​ಬಿಐನಿಂದ ಬ್ಯಾಂಕ್​ಗಳಿಗೆ ಮಾರ್ಗದರ್ಶನ ಕೊಡಿಸುವ ಕೆಲಸವಾಗಬೇಕು. | ಮಾರುತಿ ಮಾನ್ಪಡೆ ರೈತ ಮುಖಂಡರು ಹಳೆಯ ಸಾಲ ಕಟ್ಟಲು ಆಗುತ್ತಿಲ್ಲ, ಹೊಸ ಸಾಲ ಸಿಗುತ್ತಿಲ್ಲ. ಬೆಳೆ ವಿಮೆ ಇಲ್ಲ. ಹಳೆಯ ಸಾಲ ಇದ್ದರೂ ರೈತರಿಗೆ ಕನಿಷ್ಠ 50 ಸಾವಿರದಿಂದ 1 ಲಕ್ಷ ರೂ. ತನಕ ಹೊಸ ಸಾಲ ಕೊಡಿಸಿದರಷ್ಟೇ ಅನುಕೂಲವಾಗಲಿದೆ. | ಕುರುಬೂರು ಶಾಂತಕುಮಾರ್ ಅಧ್ಯಕ್ಷ, ಕಬ್ಬು ಬೆಳೆಗಾರರ ಸಂಘ https://www.vijayavani.net/congress-mla-says-sachin-pilot-offered-rs-35-crore-for-cross-voting-in-rajasabha-election/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net