ಹೈಕೋರ್ಟ್​ಗೆ ಅರ್ನಬ್ ಅರ್ಜಿ: ಬಂಧನ ಕಾನೂನುಬಾಹಿರ ಎಂದ ನ್ಯಾಯಾಲಯ

Arnab 1
Published on

ಮುಂಬೈ: ಎರಡು ವರ್ಷ ಹಳೆಯ ಆತ್ಮಹತ್ಯಾ ಪ್ರಚೋದನೆ ಪ್ರಕರಣ ಆರೋಪದಡಿಯಲ್ಲಿ ಬಂಧಿತವಾಗಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈನ ಆಲಿಬಾಗ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಈ ವಿಚಾರವಾಗಿ ಅರ್ನಬ್ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.

ಬುಧವಾರ ಬೆಳಗ್ಗೆ ಅರ್ನಬ್ ಅವರನ್ನು ಬಂಧಿಸಲಾಗಿದ್ದು, ರಾತ್ರಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿರುವ ನ್ಯಾಯಾಲಯ, ಅವರನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಆದರೆ ಅವರನ್ನು ಬಂಧಿಸಿರುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿರುವುದಾಗಿ ನ್ಯಾಯಾಲಯ ಹೇಳಿದೆ. ‘2018ರಲ್ಲಿ ಅರ್ನಬ್ ಅವರಿಂದ ಮೋಸವಾಗಿದೆಯೆಂದು ಅನ್ವಯ್ ನಾಯಕ್ ಆತ್ಮಹತ್ಯೆ ಮಾಡಿಕೊಂಡರು. ಆದರೆ ಅವರ ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಅನ್ವಯ್ ನಾಯಕ್ ಆತ್ಮಹತ್ಯೆ, ಅವರ ತಾಯಿ ಆತ್ಮಹತ್ಯೆ ಮತ್ತು ಆರೋಪಿಗಳ ಮಧ್ಯೆ ಸಂಬಂಧವನ್ನು ಪತ್ತೆ ಹಚ್ಚಲು ಪೊಲೀಸರು ವಿಫಲವಾಗಿದ್ದಾರೆ. ಈ ಪ್ರಕರಣದ ಸಾರಾಂಶ ವರದಿಯನ್ನು 2019ರಲ್ಲಿ ಮ್ಯಾಜಿಸ್ಟ್ರೇಟ್​ಗೆ

ಸಲ್ಲಿಸಿ, ಪ್ರಕರಣ ಮುಚ್ಚಲು ಕೋರಲಾಗಿತ್ತು. ಅದರಂತೆ ನ್ಯಾಯಾಲಯ ಮಾಡಿದೆ. ಆದರೆ 2020ರ ಮೇನಲ್ಲಿ ಪ್ರಕರಣದ ತನಿಖೆ ಪುನರಾರಂಭ ಮಾಡಲು ಪೊಲೀಸ್ ಇಲಾಖೆ ನ್ಯಾಯಾಲಯದಲ್ಲಿ ಅನುಮತಿ ಪಡೆದಿಲ್ಲ. ಅಕ್ಟೋಬರ್ 15ರಂದು ಮರು ತನಿಖೆಯ ಕುರಿತಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಮೇಲ್ನೋಟಕ್ಕೆ ಅರ್ನಬ್ ಬಂಧನ ಕಾನೂನು ಬಾಹಿರವಾಗಿ ಕಾಣುತ್ತಿದೆ’ ಎಂದು ನ್ಯಾಯಾಲಯ ಹೇಳಿದೆ.

ಜಾಮೀನಿಗೆ ಮನವಿ

ಬಂಧನ ಕುರಿತಾಗಿ ಅರ್ನಬ್ ಗೋಸ್ವಾಮಿ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ‘ನನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ. ನನ್ನ ಮೇಲಿರುವ ಎಫ್​ಐಆರ್​ಗಳನ್ನು ರದ್ದು ಪಡಿಸಬೇಕು’ ಎಂದು ಅರ್ಜಿ ಸಲ್ಲಿಸಿದ್ದಾರೆ. ಅದರ ಜತೆಯಲ್ಲಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ. ಅನ್ವಯ್ ಕುಟುಂಬಸ್ಥರ ವಾದವನ್ನು ಕೇಳಿದ ನಂತರ ಜಾಮೀನಿನ ಬಗ್ಗೆ ನಿರ್ಧಾರ ಮಾಡುವುದಾಗಿ ನ್ಯಾಯಾಲಯ ಹೇಳಿದೆ. ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಶಾಲೆಯಲ್ಲಿ ರಾತ್ರಿ ಕಳೆದ ಸಂಪಾದಕ

ಅರ್ನಬ್​ಅವರನ್ನು ಬುಧವಾರ ತಡರಾತ್ರಿ ಆಲಿಬಾಗ್​ನ ಸರ್ಕಾರಿ ಶಾಲೆಗೆ ಕರೆದೊಯ್ದು ಕ್ವಾರಂಟೈನ್ ಮಾಡಲಾಗಿದೆ. ಜೈಲಿನಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಹಾರಾಷ್ಟ್ರ ಜೈಲು ಅಧಿಕಾರಿಗಳು ರಾಜ್ಯಾದ್ಯಂತ 30 ತಾತ್ಕಾಲಿಕ ಜೈಲುಗಳನ್ನು ನಿರ್ವಿುಸಿದ್ದಾರೆ. ಸರ್ಕಾರಿ ಶಾಲೆಗಳು, ಹೊಟೆಲ್ ಸೇರಿ ಅನೇಕ ಕಟ್ಟಡಗಳನ್ನು ಜೈಲುಗಳನ್ನಾಗಿ ಪರಿವರ್ತಿಸಲಾಗಿದೆ. ಅಂತದ್ದೇ ಒಂದು ತಾತ್ಕಾಲಿಕ ಜೈಲಿನಲ್ಲಿ ಅರ್ನಾಬ್​ರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net