

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಭಾರತ ಚುನಾವಣಾ ಆಯೋಗ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಂಗವಿಕಲರು ಹಾಗೂ 80 ವರ್ಷ ವಯಸ್ಸು ಮೀರಿದವರಿಗೆ ಮನೆ ಬಾಗಿಲಲ್ಲೇ ಮತ ಹಾಕುವ ಅವಕಾಶ ಕಲ್ಪಿಸಿದೆ. ಈ ಅವಕಾಶದತ್ತ ನಿರಾಸಕ್ತಿ ತೋರಿರುವ ಬಹಳಷ್ಟು ಅಂಗವಿಕಲರು ಹಾಗೂ ವೃದ್ಧರು ಮೇ 10ರಂದು ಮತಗಟ್ಟೆಗೆ ತೆರಳಿ ಮತ ಹಾಕಲು ನಿರ್ಧರಿಸಿದಂತಿದೆ. ರಾಜ್ಯದಲ್ಲಿ 58,545 ಮತಗಟ್ಟೆಗಳು ಹಾಗೂ 5,30,85,556 ಮತದಾರರಿದ್ದಾರೆ. ಇವರಲ್ಲಿ್ಲ 80 ವರ್ಷಕ್ಕೂ ಅಧಿಕ ವಯೋಮಾನದ ಪುರುಷರು 5,46,487, ಮಹಿಳೆಯರು 6, 69,417 ಹಾಗೂ ಇತರ 16 ಮಂದಿ ಸೇರಿ 12,15,920 ಮತದಾರರು ಇದ್ದಾರೆ. ಇಷ್ಟು ಮತದಾರರಲ್ಲಿ 80,250 ಮಂದಿ ಮನೆ ಬಳಿ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ. ಪುರುಷ 3,35, 387 ಹಾಗೂ ಮಹಿಳೆ 2,35,833 ಹಾಗೂ ಇತರ 61 ಮಂದಿ ಸೇರಿ ರಾಜ್ಯದಲ್ಲಿ 5,71,281 ಅಂಗವಿಕಲ ಮತದಾರರು ಇದ್ದಾರೆ. ಮತದಾನಕ್ಕೆ ನೋಂದಣಿ ಮಾಡಿಕೊಂಡ ಅಂಗವಿಕಲರ ಸಂಖ್ಯೆ 19,279 ಮಾತ್ರ. ಇನ್ನು, ಅಗತ್ಯ ಸೇವೆಯಲ್ಲಿರುವ 13,771, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿ 1,78,523 ಮಂದಿ ಹಕ್ಕು ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದಾರೆ.
ರೆಡಿಯಾಗಿದೆ ತಂಡ: ಈ ಮತದಾರರ ಮನೆಗಳಿಗೆ ಹೋಗಲು ರೂಟ್ವ್ಯಾಪ್ ಸಿದ್ಧವಾಗಿದೆ. ಮೈಕ್ರೋಅಬ್ಸರ್ವರ್, ಪೊಲೀಸ್ ಸಿಬ್ಬಂದಿ ವಿಡಿಯೋ ಗ್ರಾಫರ್ಗಳು ಹಾಗೂ ಅಗತ್ಯ ಪರಿಕರಗಳೊಂದಿಗೆ ಮತ ಹಾಕಿಸಿಕೊಳ್ಳಲು ತಂಡ ಸಜ್ಜಾಗುತ್ತಿದೆ. ಇವರು ಮತಗಟ್ಟೆ ಏಜೆಂಟರಿಗೆ ಮಾಹಿತಿ ನೀಡಿದ ಬಳಿಕವೇ ತಂಡ ಮನೆಗಳಿಗೆ ತೆರಳಲಿದೆ. ಏ.29 ರಿಂದ ಮೇ 6ರೊಳಗೆ ಮತದಾನದ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ನಿರ್ದೇಶಿಸಿದೆ.
ಮೇ 2ರಿಂದ ಪಿವಿಎಸ್ ಶುರು: ಅಗತ್ಯ ಸೇವೆಗಳಲ್ಲಿರುವ ವಿವಿಧ 12 ಇಲಾಖೆಗಳ ನೌಕರರ ಪೈಕಿ ಅಂಚೆ ಮತದಾನಕ್ಕೆ ನೋಂದಾಯಿಸಿದವರಿಗೆ ಮತದಾನ ಮಾಡಲು ಆಯೋಗ ಮೇ 2 ರಿಂದ 6 ರವರೆಗೆ ಆಯಾ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಪೋಸ್ಟಲ್ ವೋಟಿಂಗ್ ಸೆಂಟರ್(ಪಿವಿಎಸ್) ಆರಂಭಿಸಲಿದ್ದು, 3 ದಿನದೊಳಗೆ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶಿಸಿದೆ. ವಿದ್ಯುತ್, ಆರೋಗ್ಯ ಇಲಾಖೆ, ಬಿಎಸ್ಎನ್ಎಲ್, ರೈಲ್ವೆ, ದೂರದರ್ಶನ, ಆಕಾಶವಾಣಿ, ವಿಮಾನಯಾನ, ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಗಳ ನೌಕರರು, ಅಗ್ನಿಶಾಮಕ ಸೇವೆ, ಮಾನ್ಯತೆ ಹೊಂದಿರುವ ಪತ್ರಕರ್ತರು, ಟ್ರಾಫಿಕ್ ಪೊಲೀಸ್ ಮತ್ತು ಆಂಬುಲೆನ್ಸ್ ಇತ್ಯಾದಿ ಅಗತ್ಯ ಸೇವೆಗಳಲ್ಲಿ ಪಿವಿಎಸ್ಗಳಲ್ಲಿ ಮತ ಚಲಾಯಿಸಬಹುದಾಗಿದೆ.