ರೈತಸಾಲಕ್ಕೆ ಸಿಬಿಲ್ ಅಂಕ ಬೇಡ: ಬ್ಯಾಂಕ್​ಗಳ ಎದುರು ಪ್ರಸ್ತಾವನೆ ಇಟ್ಟ ಹಣಕಾಸು ಇಲಾಖೆ

Farmer
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರೈತ ಸಮುದಾಯ ಸಾಲ ಪಡೆಯುವ ಸಂದರ್ಭದಲ್ಲಿ ಬ್ಯಾಂಕ್​ಗಳು ಸಿಬಿಲ್ ಸ್ಕೋರ್ ಪರಿಗಣಿಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಎದ್ದಿದೆ. ರಾಜ್ಯ ಸರ್ಕಾರ ಕೂಡ ರೈತರ ಪರ ದನಿ ಎತ್ತಿ ಬ್ಯಾಂಕುಗಳ ಮುಂದೆ ಪ್ರಸ್ತಾವನೆಯೊಂದನ್ನು ಇಟ್ಟಿರುವುದು ಹೊಸ ಬೆಳವಣಿಗೆ. ಕ್ರೆಡಿಟ್ ಇನ್ಪರ್ಮೇಷನ್ ಬ್ಯೂರೋ ಆಫ್ ಇಂಡಿಯಾ ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ವರದಿಯನ್ನು ಸಿದ್ಧಪಡಿಸುತ್ತದೆ. ಸಾಲ ಅಪೇಕ್ಷಿತ ಅರ್ಜಿದಾರರ ಸಾಲ ಪಡೆಯುವ ಸಾಮರ್ಥ್ಯವನ್ನು ಈ ಸಿಬಿಲ್ ಸ್ಕೋರ್ ನಿರ್ಧರಿಸುತ್ತದೆ.

ರೈತರ ವಿಚಾರದಲ್ಲಿ ಈ ಸಿಬಿಲ್ ಸ್ಕೋರ್ ಅನ್ವಯಿಸಬಾರದೆಂದು ರೈತ ಸಮೂಹವೊಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಸರ್ಕಾರ ಈ ವಿಷಯವನ್ನು ಹಣಕಾಸು ಇಲಾಖೆಯ ಗಮನಕ್ಕೆ ತಂದು, ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಇದೀಗ ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿಯವರು ಕರ್ನಾಟಕ ಬ್ಯಾಂಕರುಗಳ ಸಮಿತಿ ಕನ್ವೀನರ್​ಗೆ ಪತ್ರ ಬರೆದು, ಈ ವಿಷಯ ಪ್ರಸ್ತಾಪಿಸಿ, ತೀರ್ಮಾನ ಕೈಗೊಳ್ಳಲು ತಿಳಿಸಿದ್ದಾರೆ.

ಏನಿದು ಸಿಬಿಲ್ ಸ್ಕೋರ್?: ಸಾಲ ಅಪೇಕ್ಷಿತ ಅರ್ಜಿದಾರರ ಸಾಲ ಪಡೆಯುವ ಸಾಮರ್ಥ್ಯ ನಿರ್ಧಾರಕವೇ ಸಿಬಿಲ್ ಸ್ಕೋರ್. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕುಗಳು ಸಾಲ ನೀಡುವಾಗ ಸಿಬಿಲ್ ಸ್ಕೋರ್ ಆಧಾರದ ಮೇಲೆ ಮುಂದುವರಿಯುತ್ತವೆ. ಈ ಹಿಂದೆ ಪಡೆದ ಸಾಲದ ಮರುಪಾವತಿ, ತಡವಾದ ಪಾವತಿ, ಕ್ರೆಡಿಟ್ ಕಾರ್ಡ್ ಬಾಕಿಗಳು, ತಪ್ಪಾದ ಮಾಹಿತಿಗಳು ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ನಿಗದಿತ ದಿನಾಂಕದೊಳಗೆ ಸಾಲ ಮರುಪಾವತಿ ಮಾಡಿದ್ದರೆ ಸಿಬಿಲ್ ಸ್ಕೋರ್ ಉತ್ತಮ ಮಟ್ಟದಲ್ಲಿರುತ್ತದೆ. ಇಲ್ಲದಿದ್ದರೆ ಸಾಲ ಕೊಡಲು ಬ್ಯಾಂಕ್​ಗಳು ನಿರಾಕರಿಸುತ್ತವೆ.

ಸರ್ಕಾರದ ವಾದವೇನು?: ಬರ, ಅತಿವೃಷ್ಟಿ, ಬೆಲೆ ಇಳಿಕೆ ಸೇರಿ ವಿವಿಧ ಕಾರಣಗಳಿಂದ ರೈತರು ನೆಮ್ಮದಿಯಾಗಿಲ್ಲ. ಪಡೆದ ಸಾಲ ಕಟ್ಟದೇ ಇದ್ದಾಗ ಅಥವಾ ಬ್ಯಾಂಕಿನವರ ಒತ್ತಾಯದಿಂದ ಸಮಯ ಮುಗಿದ ನಂತರ ಸಾಲ ತೀರಿಸಬಹುದು. ಹೀಗಾದಾಗ ಸಿಬಿಲ್ ಸ್ಕೋರ್ ವ್ಯತ್ಯಾಸವಾಗಿ ಬ್ಯಾಂಕುಗಳು ರೈತರಿಗೆ ಸಾಲ ನಿರಾಕರಿಸುತ್ತವೆ. ಹವಾಮಾನ ಸಮಸ್ಯೆಯಿಂದ ರೈತ ಸಮಸ್ಯೆಗೆ ಸಿಲುಕುವಾಗ, ಸಿಬಿಲ್ ಸ್ಕೋರ್ ಪರಿಗಣಿಸುವುದು ಎಷ್ಟು ಸೂಕ್ತ ಎಂಬುದು ಸರ್ಕಾರದ ಮುಂದೆ ರೈತರ ಪ್ರಶ್ನೆಯಾಗಿತ್ತು. ಈ ಪ್ರಶ್ನೆಯನ್ನು ಗಂಭೀರವಾಗಿಯೇ ಪರಿಗಣಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಹಕಾರ ಇಲಾಖೆಯ ಗಮನ ಸೆಳೆದಿದ್ದರು. ಬಳಿಕ ಹಣಕಾಸು ಇಲಾಖೆಗೆ ವಿಷಯ ವರ್ಗವಾಗಿತ್ತು.

ಬ್ಯಾಂಕುಗಳ ವಾದ

ಸಾಲ ಮರುಪಾವತಿಯಲ್ಲಿ ಶಿಸ್ತು ಮೂಡಿಸಲು ಸಿಬಿಲ್ ಸ್ಕೋರ್ ಪರಿಗಣನೆ ಅನಿವಾರ್ಯ

ಬ್ಯಾಂಕ್ ಅಧಿಕಾರಿ ಬದಲಾಗುತ್ತಲೇ ಇರುತ್ತಾರೆ, ಸಿಬಿಲ್ ಮೇಲೆ ಸಾಲ ಮಾನದಂಡವೇ ಸೂಕ್ತ

ನಾಳೆ ಚರ್ಚೆ

ಡಿ.28ರಂದು ನಡೆಯಲಿರುವ ರಾಜ್ಯ ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. 4 ಪ್ರಮುಖ ಬ್ಯಾಂಕ್, 8 ರಾಷ್ಟ್ರೀಕೃತ ಬ್ಯಾಂಕ್, 21 ವಾಣಿಜ್ಯ ಬ್ಯಾಂಕ್, ಎರಡು ಗ್ರಾಮೀಣ ಬ್ಯಾಂಕ್ ಸೇರಿದಂತೆ ಬ್ಯಾಂಕರುಗಳ ಸಮಿತಿಯ ಇತರ ಸದಸ್ಯರು ಈ ಬಗ್ಗೆ ರ್ಚಚಿಸಲಿದ್ದಾರೆ.

No Farmer Loan Sybil Score

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net