5, 8ನೇ ತರಗತಿಗೆ ಮೌಲ್ಯಾಂಕನ: 7ನೇ ಕ್ಲಾಸ್​ಗೆ ನಡೆಸುತ್ತಿದ್ದ ಪಬ್ಲಿಕ್ ಪರೀಕ್ಷೆ ಮಾದರಿ; ಯಾರನ್ನೂ ಫೇಲ್ ಮಾಡುವಂತಿಲ್ಲ

School
Published on

ಬೆಂಗಳೂರು: 2022-23ನೇ ಸಾಲಿನಿಂದಲೇ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ/ ಮೌಲ್ಯಾಂಕನ ಪರೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಅರ್ಧ ಶೈಕ್ಷಣಿಕ ವರ್ಷ ಪೂರ್ಣಗೊಂಡಿದ್ದು, ಈಗಾಗಲೆ ರಚನಾತ್ಮಕ ಮೌಲ್ಯಮಾಪನ (ಎಫ್​ಎ 1 ಮತ್ತು 2) ಹಾಗೂ ಸಂಕಲಾತ್ಮಕ ಮೌಲ್ಯಮಾಪನ (ಎಸ್​ಎ-1) ಪರೀಕ್ಷೆಗಳು ಮುಗಿದಿವೆ.

ಈ ಶೈಕ್ಷಣಿಕ ವರ್ಷ ವಾರ್ಷಿಕ ಪರೀಕ್ಷೆ ನಿರ್ವಹಿಸುವ ಬದಲಾಗಿ ಉಳಿದ ಅರ್ಧ ವರ್ಷಕ್ಕೆ ಸೀಮಿತಗೊಳಿಸಿ ಸಾಂಕೇತಿಕವಾಗಿ ನವೆಂಬರ್-2022ರಿಂದ ಮಾರ್ಚ್-2023ರ ಮೊದಲನೇ ವಾರದೊಳಗೆ ನಿರ್ವಹಿಸಿದ ಪಠ್ಯವಸ್ತು ಆಧರಿಸಿ ಎಸ್​ಎ-2 ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್. ವಿಶಾಲ್ ರಾಜ್ಯ ಪಠ್ಯಕ್ರಮ ಬೋಧಿಸುವ ಎಲ್ಲ ಶಾಲೆಗಳಿಗೆ ಸೂಚಿಸಿದ್ದಾರೆ.

ಮಾ.9ರಿಂದ ಪರೀಕ್ಷೆ: ಮಾ.9ರಿಂದ 17ರವರೆಗೆ ಪರೀಕ್ಷೆ ನಡೆಸಬೇಕು. ಏ.8ರಿಂದ 10ರೊಳಗೆ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಸಿ ಫಲಿತಾಂಶ ಪ್ರಕಟಿಸಬೇಕು. ಎಫ್​ಎ-1,2,3,4 ಮತ್ತು ಎಸ್​ಎ-1 ಮತ್ತು 2 ಅನ್ನು ಸೇರಿಸಿ 100 ಅಂಕಗಳಿಗೆ ಪರಿಗಣಿಸಿ ಶೇ.35 ಅಂಕ ಪಡೆದವರನ್ನು ‘ಕಲಿಕಾ ಪ್ರಗತಿ ಸಾಧಿಸಿದ ವಿದ್ಯಾರ್ಥಿ’ ಎಂದು ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.

ಫೇಲ್ ಮಾಡುವಂತಿಲ್ಲ: ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟವಾದ ಎರಡು ತಿಂಗಳೊಳಗೆ ಪೂರಕ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಸುಧಾರಿಸಬೇಕು. ಬಳಿಕ ಮುಂದಿನ ತರಗತಿಗಳಿಗೆ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಅನುತ್ತೀರ್ಣ ಮಾಡುವಂತಿಲ್ಲ. ಈ ಮೊದಲು 7ನೇ ತರಗತಿಗೆ ನಡೆಸುತ್ತಿದ್ದ ಮೌಲ್ಯಾಂಕನ ಪರೀಕ್ಷೆ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ.

ಅನುಸರಿಸಬೇಕಾದ ನಿಯಮ

  • 5ನೇ ತರಗತಿ ಮಕ್ಕಳಿಗೆ 60 ಅಂಕಗಳಿಗೆ ಸಿಸಿಇ ಮೌಲ್ಯಮಾಪನ ಮತ್ತು 40 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಬೇಕು. ನವೆಂಬರ್​ನಿಂದ ಮಾರ್ಚ್ ಮೊದಲ ವಾರದವರೆಗಿನ ಪಠ್ಯವಸ್ತುವನ್ನು ಮಾತ್ರ ಪರಿಗಣಿಸಬೇಕು
  • 8ನೇ ತರಗತಿಗೆ 40 ಸಿಸಿಇ ಮೌಲ್ಯಮಾಪನ, 60 ಅಂಕಕ್ಕೆ ಲಿಖಿತ ಪರೀಕ್ಷೆ ನಡೆಸಬೇಕು. ಜೂನ್​ನಿಂದ ಫೆಬ್ರವರಿ ಅವಧಿಯಲ್ಲಿನ ಪಠ್ಯವಸ್ತು ಪರಿಗಣಿಸಬೇಕು

ಆರ್​ಟಿಇ ಏನು ಹೇಳುತ್ತೆ?: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 (ಆರ್​ಟಿಇ) ಪ್ರಕಾರ, ಯಾವುದೇ ಮಗುವು ಶಿಕ್ಷಣದಿಂದ ವಂಚಿರಾಗಬಾರದು. ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ 5 ಮತ್ತು 8ನೇ ತರಗತಿಗಳಿಗೆ ಪರೀಕ್ಷೆ ನಡೆಸಬೇಕು. ಮುಖ್ಯ ಪರೀಕ್ಷೆಯಲ್ಲಿ ಮಗುವು ಅನುತ್ತೀರ್ಣವಾದಲ್ಲಿ ಫಲಿತಾಂಶ ಪ್ರಕಟವಾದ 2 ತಿಂಗಳೊಳಗೆ ಪೂರಕ ಪರೀಕ್ಷೆ ನಡೆಸುವ ಮೂಲಕ ಮತ್ತೊಂದು ಅವಕಾಶ ಕಲ್ಪಿಸಬೇಕು. ಪೂರಕ ಪರೀಕ್ಷೆಯಲ್ಲಿಯೂ ಮಗುವು ವಿಫಲವಾದರೆ, ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೆ ಮಗುವನ್ನು ತಡೆಹಿಡಿಯದಿರಲು ಸರ್ಕಾರವು ಸೂಕ್ತ ಕ್ರಮ ವಹಿಸಬೇಕು.

5 ಮತ್ತು 8ನೇ ತರಗತಿ ಮಕ್ಕಳನ್ನು ಅನುತ್ತೀರ್ಣ ಮಾಡುತ್ತಿಲ್ಲ. ಬದಲಾಗಿ ಮಕ್ಕಳ ಕಲಿಕೆಯಲ್ಲಿ ಪ್ರಗತಿ ಸಾಧಿಸುವುದು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಅಣಿಗೊಳಿಸುವ ಉದ್ದೇಶ ಹೊಂದಲಾಗಿದೆ. | ಡಾ. ಆರ್. ವಿಶಾಲ್, ಆಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಿಕಾ ದೃಷ್ಟಿಯಿಂದ ಸರ್ಕಾರದ ನಿಯಮವನ್ನು ಸ್ವಾಗತಿಸುತ್ತೇವೆ. ಆದರೆ, ಈ ವರ್ಷಕ್ಕೆ ಅನ್ವಯ ಆಗುವಂತೆ ಪರೀಕ್ಷಾ ನಿಯಮ ಅಳವಡಿಸಿಕೊಳ್ಳಲು ಖಾಸಗಿ ಶಾಲೆಗಳಿಗೆ ಆಯ್ಕೆ ನೀಡಬೇಕು. | ಡಿ. ಶಶಿಕುಮಾರ್ ಕ್ಯಾಮ್ಸ್​ ಪ್ರಧಾನ ಕಾರ್ಯದರ್ಶಿ ಶಿಕ್ಷಣ ಇಲಾಖೆ ಸುತ್ತೋಲೆ ಅವೈಜ್ಞಾನಿಕ ಹಾಗೂ ಶಿಕ್ಷಣದ ಮೂಲ ಉದ್ದೇಶಕ್ಕೆ ತದ್ವಿರುದ್ಧವಾಗಿದೆ. ಶಿಕ್ಷಣ ಎಂಬುದು ಕಲಿಕೆಗಾಗಿ ಕಲಿಸುವುದೇ ವಿನಾ, ಪರೀಕ್ಷೆಗಾಗಿ ಅಲ್ಲ. ಕೇಂದ್ರ ಹಾಗೂ ಇತರೆ ಪಠ್ಯಕ್ರಮ ಶಾಲೆಗಳಲ್ಲಿ ಇಲ್ಲದ ಪರೀಕ್ಷಾ ಪದ್ಧತಿ ಕೇವಲ ರಾಜ್ಯ ಪಠ್ಯಕ್ರಮ ಶಾಲೆಗಳಿಗೆ ಏಕೆ? | ಲೋಕೇಶ್ ತಾಳಿಕಟ್ಟೆ ರುಪ್ಸಾ ಅಧ್ಯಕ್ಷ

ಕೈಗೊಳ್ಳಬೇಕಾದ ಕ್ರಮಗಳೇನು?

  • ಸ್ಯಾಟ್ಸ್ ಸಂಖ್ಯೆ ಆಧಾರಿಸಿ ಪರೀಕ್ಷೆ ನೋಂದಣಿ ಪತ್ರ, ಫಲಿತಾಂಶ, ಅಂಕಗಳ ಕ್ರೋಡೀಕರಣ ನಡೆಯಲಿದೆ. ಆದ್ದರಿಂದ ಪ್ರತಿ ಶಾಲೆಯು ಸ್ಯಾಟ್ಸ್​ನಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ದೃಢೀಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಪಟ್ಟಿ ಸಲ್ಲಿಸಬೇಕು
  • ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯದೆ ಸಂಪೂರ್ಣವಾಗಿ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಭರಿಸಲು ಸರ್ಕಾರ ಆದೇಶ
  • 5ನೇ ತರಗತಿಗೆ ಪ್ರತಿ 25 ಮತ್ತು 8ನೇ ತರಗತಿಗೆ 50 ಮಕ್ಕಳಿಗೆ ಪರೀಕ್ಷಾ ಕೇಂದ್ರ ನಿರ್ವಿುಸಬೇಕು. 25 ಮಕ್ಕಳು ಲಭ್ಯವಾಗದಿದ್ದಲ್ಲಿ 2 ಕಿಮೀ ವ್ಯಾಪ್ತಿಯಲ್ಲಿರುವ ಶಾಲೆಗಳ ಮಕ್ಕಳನ್ನು ಸೇರಿಸಿ ಕೇಂದ್ರ ಸ್ಥಾಪಿಸಬೇಕು
  • ಶಾಲಾ ಹಂತದಲ್ಲಿ ಮುಖ್ಯಶಿಕ್ಷಕರು ಆನ್​ಲೈನ್ ಮೂಲಕ ಮಾಹಿತಿ ಪಡೆದು ಪ್ರವೇಶಪತ್ರ ಮುದ್ರಿಸಿ ಕೊಡಬೇಕು. 5 ಮತ್ತು 8ನೇ ತರಗತಿಗೆ 50 ಅಂಕಗಳಿಗೆ 2 ಗಂಟೆ ಕಾಲ ಪರೀಕ್ಷೆ ನಡೆಸಬೇಕು
  • ಡಿಎಸ್​ಇಆರ್​ಟಿ ಸಹಾಯ ಪಡೆದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕು. 40 ಅಂಕಗಳಿಗೆ ಲಿಖಿತ (20 ಅಂಕಗಳಿಗೆ ಎಂಸಿಕ್ಯೂ, 20 ಅಂಕಗಳಿಗೆ ವಾಕ್ಯರೂಪದ ಪ್ರಶ್ನೆ) ಮತ್ತು 10 ಅಂಕಗಳಿಗೆ ಮೌಖಿಕ ಪರೀಕ್ಷೆ
  • ಪರೀಕ್ಷೆ ನಡೆಸಲು ಬೇಕಾದ ಅವಶ್ಯಕ ಮೂಲ ಸೌಕರ್ಯಗಳನ್ನು ಆಯಾ ಪರೀಕ್ಷಾ ಕೇಂದ್ರದ ಶಾಲೆಯವರು ನಿರ್ವಹಿಸುವುದು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನಾಗಿ ಶಾಲಾ ಮುಖ್ಯಶಿಕ್ಷಕರು ಹಾಗೂ ಕೊಠಡಿ ಮೇಲ್ವಿಚಾರಕರಾಗಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಕ್ಷಕರನ್ನು ಬದಲಾಯಿಸಿ ನಿಯೋಜಿಸಲು ಬಿಇಒಗಳು ಕ್ರಮ ವಹಿಸಬೇಕು
  • 5ನೇ ತರೆಗತಿ ಮೌಲ್ಯಮಾಪನವನ್ನು ತಾಲೂಕು ಹಂತದಲ್ಲಿ ಮತ್ತು 8ನೇ ತರಗತಿ ಮೌಲ್ಯಮಾಪನವನ್ನು ಬ್ಲಾಕ್ ಹಂತದಲ್ಲಿ ನಡೆಸಬೇಕು. ತಾಲೂಕು ಹಂತದಲ್ಲಿ ಮೌಲ್ಯಮಾಪನ ಕಾರ್ಯ ಕೈಗೊಳ್ಳಲು ಕ್ರಮ ವಹಿಸಬೇಕು. ಆಂಗ್ಲ ಮಾಧ್ಯಮ ಪರೀಕ್ಷೆಗಳಿಗೆ ಅವಶ್ಯವೆನಿಸಿದರೆ ಖಾಸಗಿ ಶಾಲಾ ಶಿಕ್ಷಕರನ್ನು ನಿಯೋಜಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net