

ರಾಜ್ಯದ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೂ ಈ ವರ್ಷ ಪರೀಕ್ಷೆ ಬರೆಯದೆ ಪಾಸ್ ಆಗುವ ಭಾಗ್ಯ ದೊರೆಯುವ ಸಾಧ್ಯತೆ ಇದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಬಗ್ಗೆ ಗಂಭೀರ ಚರ್ಚೆ ನಡೆಸಿದೆ.
ಈಗಾಗಲೇ 1ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಉತ್ತೀರ್ಣಗೊಳಿಸುವುದಾಗಿ ಶಿಕ್ಷಣ ಇಲಾಖೆ ಘೋಷಿಸಿದೆ. ಸದ್ಯ ಕರೊನಾ ಭೀತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ಮಾ.31ವರೆಗೆ ರಜೆ ನೀಡಿರುವ ಶಿಕ್ಷಣ ಇಲಾಖೆ 7, 8 ಮತ್ತು 9ನೇ ತರಗತಿಗೆ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಈ ಹಿಂದಿನ ತರಗತಿಯ ಮಕ್ಕಳಿಗೆ ಅವರ ಈ ಮೊದಲ ಪರೀಕ್ಷೆಗಳ ಪ್ರಗತಿಯ ಆಧಾರದ ಮೇಲೆ ಪಾಸ್ ಮಾಡಲು ನಿರ್ಧರಿಸಿರುವಂತೆಯೇ ಉಳಿದ ಮಕ್ಕಳಿಗೂ ಪರೀಕ್ಷೆ ಮಾಡದೆಯೇ ಉತ್ತೀರ್ಣಗೊಳಿಸಬೇಕೆಂದು ಪಾಲಕರಿಂದ ಒತ್ತಾಯ ಕೇಳಿಬರುತ್ತಿದೆ.
ಶಿಕ್ಷಣ ಅಧಿಕಾರಿಗಳು ಈ ವಿಚಾರವಾಗಿ ಆಲೋಚಿಸಿ ರಜೆ ಅವಧಿ ಮುಗಿಯುವ ಮೊದಲು ನಿರ್ಧಾರ ಪ್ರಕಟಿಸಲು ತೀರ್ವನಿಸಿದ್ದಾರೆ. ಮಂಗಳವಾರ ನಡೆದ ಸಾಮಾನ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ಪರೀಕ್ಷೆ ರದ್ದು ಮಾಡಿ ರಜೆ ಮುಂದುವರಿಸುವ ಬಗ್ಗೆ ಪ್ರಸ್ತಾಪಿಸಿದರು. ಆದರೆ, 7ನೇ ತರಗತಿಗೆ ಇದೇ ಮೊದಲ ಬಾರಿಗೆ ಸಾಮಾನ್ಯ ಮೌಲ್ಯಾಂಕಣ ಪರೀಕ್ಷೆ ಮಾಡುತ್ತೇವೆಂದು ಘೋಷಣೆ ಮಾಡಿ ಎಲ್ಲ ಸಿದ್ಧತೆ ಮಾಡಿಕೊಂಡಿರುವುದರಿಂದ ಇದನ್ನು ರದ್ದು ಮಾಡುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ ತಿಳಿಸಿದರು.
ಮೊದಲಿನಿಂದಲೂ ಸಚಿವರು 7ನೇ ತರಗತಿ ಪರೀಕ್ಷೆ ನಡೆಸುತ್ತೇನೆ ಎಂದು ಹೇಳಿಕೊಂಡು ಬಂದಿರುವುದರಿಂದ ರದ್ದು ಮಾಡುವುದು ಬೇಡ. ಆದರೆ, ಈಗಾಗಲೇ 1ರಿಂದ 6ನೇ ತರಗತಿಯವರೆಗೆ ಆದೇಶ ಮಾಡಿರುವ ರೀತಿಯಲ್ಲೇ 8 ಮತ್ತು 9ನೇ ತರಗತಿಗೆ ವಿದ್ಯಾರ್ಥಿಗಳಿಗೂ ಅವರ ಪ್ರಗತಿ ಪರಿಶೀಲನೆ ಮಾಡಿ ಪಾಸ್ ಮಾಡಲು ಗಂಭೀರವಾಗಿ ರ್ಚಚಿಸಲಾಯಿತು. ಇದಕ್ಕೆ ಇನ್ನೂ ಸಮಯ ಇರುವುದರಿಂದ ಮಾ.31ರೊಳಗೆ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತವೆಂದು ಭಾವಿಸಿ ಆ ಅವಧಿಯೊಳಗೆ ಆದೇಶ ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂದು ಗೊತ್ತಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.27ರಂದು ಆರಂಭವಾಗಲಿದೆ. ರಾಜ್ಯದಲ್ಲಿ ಕರೊನಾ ಹರಡುತ್ತಿರುವುದರಿಂದ ಒಂದು ಡೆಸ್ಕ್ನಲ್ಲಿ ಎರಡು ಮಕ್ಕಳನ್ನು ಕೂರಿಸುವ ಬದಲು ಒಬ್ಬರನ್ನೇ ಕೂರಿಸಲು ವ್ಯವಸ್ಥೆ ಮಾಡಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ.
| ದೇವರಾಜ್ ಎಲ್. ಬೆಂಗಳೂರು