ಪಂಪ್​ಸೆಟ್​ಗಳಿಗೆ ಅಸಮರ್ಪಕ ವಿದ್ಯುತ್​ ಪೂರೈಕೆ; ಅಕ್ಷರಶಃ ಬಾಯಿ ಬಡೆದುಕೊಳ್ಳುತ್ತಿರುವ ಅನ್ನದಾತರು....

No Electricity For Pump Set Farmers Strike
Published on

- ಸರ್ಕಾರದ ನಡೆಗೆ ಅಸಮಾಧಾನ, ಅಧಿಕಾರಿಗಳ ದುರಾಡಳಿತಕ್ಕೆ ಆಕ್ರೋಶ

ವಿಜಯಪುರ: ರಾಜ್ಯದಲ್ಲಿ ಮಳೆ-ಬೆಳೆ ಇಲ್ಲದೇ ಭೀಕರ ಬರ ಆವರಿಸಿದ್ದು, ಅಳಿದುಳಿದ ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಅನ್ನದಾತನಿಗೆ  ವಿದ್ಯುತ್​​ ಅಸಮರ್ಪಕತೆಯ ಶಾಕ್​​ ಹೊಡೆದಿದ್ದು, ರೈತರು ಅಕ್ಷರಶಃ ಬಾಯಿ ಬಡೆದುಕೊಳ್ಳುತ್ತಿದ್ದಾರೆ.

ಲೋಡ್​​ಶೆಡ್ಡಿಂಗ್​ನಿಂದ ಪಂಪ್​​​​​ಸೆಟ್​​ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲವೆಂದು ಬೆಳಗಾವಿ, ಚಾಮರಾಜಗರ, ಗದಗ ಹಾಗೂ ವಿವಿಧ ಜಿಲ್ಲೆಗಳಲ್ಲಿ ಕೃಷಿಕರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ‌ ಮಾಡುತ್ತಿದ್ದಾರೆ.

ಉಚಿತ ವಿದ್ಯುತ್ ಆಮಿಷ ತೋರಿಸಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರದ ವಿರುದ್ಧ ದಿನೇ ದಿನೇ ಆಕ್ರೋಶ ಭುಗಿಲೇಳುತ್ತಿದೆ. ಸಕಾಲಕ್ಕೆ ತ್ರಿಪೇಸ್ ವಿದ್ಯುತ್ ಪೂರೈಸದ ಅಧಿಕಾರಿಗಳ ವಿರುದ್ಧ ಆಕ್ರೋಶ ಉಲ್ಭಣಿಸಿದೆ. ಎಲ್ಲೆಂದರಲ್ಲಿ ಅಸಮಾಧಾನ ಸ್ಫೋಟಗೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಭೀಮಾತೀರದ ಇಂಡಿ ತಾಲೂಕಿ‌ನ ಹಿರೇಮಸಳಿಯಲ್ಲಿ ಹೆಸ್ಕಾಂ ಸಿಬ್ಬಂದಿ ದುರಾಡಳಿತದಿಂದ ಬೇಸತ್ತ ಜನ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಆದರೆ ಸಂಬಂಧಿಸಿದ ಅಭಿಯಂತರ ಮಾತ್ರ ಜಪ್ಪಯ್ಯ ಎನ್ನದೇ ಪ್ರತಿಭಟನೆ ಸ್ಥಳಕ್ಕೆ ಆಗಮಿಸದೆ ಮೊಂಡುತನ ಪ್ರದರ್ಶಿಸಿದನು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು ಆತನ ದುರಾಡಳಿತದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟರಲ್ಲದೇ ಬಾಯಿ ಬಡೆದುಕೊಂಡು ಆಕ್ರೋಶ ಹೊರಹಾಕಿದರು.

ರೈತರದಾರ ನಬೀಲಾಲ ಸೌದಾಗರ, ಮನುಗೌಡ ಪಾಟೀಲ, ದಯಾನಂದ ಹುಬ್ಬಳ್ಳಿ, ಸಂಜೀವ ರಜಪೂತ, ಸಂಜೀವ ಸೋಲಾಪುರ, ಸಿದ್ದುಸಾಹುಕಾರ ಕಲ್ಲೂರ, ರೇವಣಸಿದ್ದ ಹುಬ್ಬಳ್ಳಿ ಮತ್ತಿತರರಿದ್ದರು.

ಕಳೆದ ಹಲವು ದಿನಗಳಿಂದ ಸರಿಯಾಗಿ ರೈತರ ಪಂಪ್ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಬದಲಿಗೆ ಅನ್ಯ ಉದ್ಯಮ ಮತ್ತು ಕೈಗಾರಿಕೆಗಳಿಗೆ ಮಾರಿಕೊಳ್ಳಲಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂತು. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ವಿದ್ಯುತ್ ಪೂರೈಸದೇ ಹೋದಲ್ಲಿ ಉಗ್ರ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು‌.

ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆ ಬೆಳೆಗಳು ಒಣಗುತ್ತಿವೆ. ತೋಟದ ವಸತಿ ಪ್ರದೇಶದಲ್ಲಿ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ರೈತರು ಮಾಧ್ಯಮದವರೊಂದಿಗೆ  ಅಳಲು ತೊಡಿಕೊಳ್ಳುತ್ತಿದ್ದಾರೆ.

ಬೆಳಗಾವಿ: ಅಥಣಿಯಲ್ಲಿನ ಹೆಸ್ಕಾಂ ಕಚೇರಿ ಎದುರು ಕ್ಯಾಂಡಲ್ ಹಚ್ಚಿ ಪ್ರತಿಭಟನೆ ನಡೆಸಿದ ರೈತರು, ಕತ್ತಲಿನಲ್ಲಿರುವ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು.

ಚಾಮರಾಜನಗರ: ಕಳೆದ 15 ದಿನಗಳಿಂದ ಕೇವಲ 2 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ನೀಡುತ್ತಿದ್ದಾರೆ. ಈ ಹಿಂದೆ ಜಮೀನುಗಳಿಗೆ 7 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಲೋಡ್​ಶೆಡ್ಡಿಂಗ್ ಎಫೆಕ್ಟ್ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಕೇವಲ 2 ಗಂಟೆ ತ್ರಿಪೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ. ಇನ್ನು ವಿದ್ಯುತ್ ನೀಡುವ 2 ಗಂಟೆ ಸಮಯವನ್ನು ಕೂಡ ತಿಳಿಸದ ಸೆಸ್ಕ್ ಸಿಬ್ಬಂದಿ ತಿಳಿಸಿಲ್ಲ ಎಂದು ಅನ್ನದಾತರು ಕೆಂಡಾಮಂಡಲನಾಗಿದ್ದಾರೆ.

ರಾಯಬಾಗ ತಾಲೂಕಿನ ಯಲ್ಪಾರಟ್ಟಿ ವಿದ್ಯುತ್ ವಿತರಣಾ ಕೇಂದ್ರದ ಎದುರು, ಜಮಖಂಡಿ ಮೀರಜ್ ರಾಜ್ಯ ಹೆದ್ದಾರಿಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net