100 ವರ್ಷದಿಂದ ದೀಪಾವಳಿಯೇ ಇಲ್ಲ! ಈ ಊರಲ್ಲಿ ಹಣತೆ ಹಚ್ಚಿದ್ರೆ ಸಾವು ಗ್ಯಾರಂಟಿ! | Sammoo village Diwali curse

Sammoo village Diwali curse
ಹಿಮಾಚಲ ಪ್ರದೇಶದ ಗ್ರಾಮದಲ್ಲಿ 100 ವರ್ಷಗಳಿಂದ ದೀಪಾವಳಿ ನಿಷಿದ್ಧ
Published on: 

No Diwali village Himachal: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದರೆ, ಹಿಮಾಚಲ ಪ್ರದೇಶದ ಹಮೀರ್‌ಪುರದ ಸಮ್ಮೂ ಗ್ರಾಮದಲ್ಲಿ ಮಾತ್ರ ಹಬ್ಬದ ಆಚರಣೆಯೇ ಇರಲಿಲ್ಲ. ಇಡೀ ದೇಶ ಬೆಳಕಿನಲ್ಲಿ ಮಿಂಚುತ್ತಿದ್ದರೂ, ಈ ಊರಿನಲ್ಲಿ ಮಾತ್ರ ದೀಪಾವಳಿ ಮೆರುಗೆ ಇಲ್ಲದಂತೆ ಮೌನ ಆವರಿಸಿತ್ತು.

ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಈ ಗ್ರಾಮದಲ್ಲಿ ಜನರು ದೀಪಾವಳಿಯನ್ನು ಆಚರಿಸುತ್ತಿಲ್ಲ. ತಲೆಮಾರುಗಳಿಂದ ಹರಿದುಬಂದಿರುವ ಶಾಪದ ಭಯದಿಂದಾಗಿ ಇಡೀ ಊರೇ ಹಬ್ಬದ ಸಂಭ್ರಮ ಹಾಗೂ ಆಚರಣೆಯಿಂದ ದೂರ ಉಳಿಯುವಂತಾಗಿದೆ.

ಸತಿ ಶಾಪದ ಭಯ

ಈ ನಂಬಿಕೆ ನಿನ್ನೆ ಮೊನ್ನೆಯದಲ್ಲ, ತಲೆಮಾರುಗಳಿಂದ ಹರಿದುಬಂದಿದೆ. ಹಿಂದೆ ಈ ಊರಿನ ಮಹಿಳೆಯೊಬ್ಬರು ಸತಿಯಾಗುವಾಗ, 'ಇನ್ಮುಂದೆ ಈ ಊರಲ್ಲಿ ದೀಪಾವಳಿ ಆಚರಿಸಲೇಬಾರದು' ಎಂದು ಭೀಕರ ಶಾಪ ನೀಡಿದ್ದರಂತೆ. ಆ ಭಯ ಇಂದಿಗೂ ಸಮ್ಮೂ ಗ್ರಾಮಸ್ಥರ ಮನಸ್ಸಲ್ಲಿ ಆಳವಾಗಿ ಬೇರೂರಿದ್ದು, ಹಬ್ಬ ಆಚರಿಸೋ ಸಾಹಸಕ್ಕೆ ಯಾರೂ ಕೈಹಾಕುತ್ತಿಲ್ಲ.

ದೀಪಾವಳಿ ದಿನ ವಿಶೇಷ ಅಡುಗೆ ಮಾಡಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಗ್ರಾಮಸ್ಥರು, ‘ದೀಪಾವಳಿ ದಿನ ನಮ್ಮಲ್ಲಿ ಯಾರೂ ವಿಶೇಷ ಅಡುಗೆ ಮಾಡುವುದಿಲ್ಲ. ನಿಯಮ ಮೀರಿ ಹಬ್ಬ ಆಚರಿಸಲು ಯತ್ನಿಸಿದರೆ ಏನಾದರೂ ಅಹಿತಕರ ಘಟನೆ ಸಂಭವಿಸುತ್ತದೆ. ಹಿಂದೆ ಹಬ್ಬ ಆಚರಿಸಲು ಹೋದಾಗ ವ್ಯಕ್ತಿಯೊಬ್ಬರು ಅನಿರೀಕ್ಷಿತವಾಗಿ ಮೃತಪಟ್ಟಿದ್ದರು. ಹೀಗಾಗಿ ನಾವು ಕೇವಲ ಮನೆಯಲ್ಲಿ ದೀಪಗಳನ್ನು ಹಚ್ಚಿ ಸುಮ್ಮನಾಗುತ್ತೇವೆ’ ಎಂದು ತಿಳಿಸಿದ್ದಾರೆ.

ಹಬ್ಬ ಮಾಡಿದ್ರೆ ಅಪಾಯ ಗ್ಯಾರಂಟಿ

ಗ್ರಾಮದ ಇನ್ನೊಬ್ಬ ನಿವಾಸಿ ರಾಮ್ ಸಿಂಗ್ ಹೇಳುವಂತೆ, ‘ದೀಪಾವಳಿ ಆಚರಣೆ ನಮ್ಮ ಗ್ರಾಮದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿದೆ. ಈ ಶತಮಾನಗಳ ಸಂಪ್ರದಾಯವನ್ನು ಮುರಿಯಲು ಅಥವಾ ಶಾಪದಿಂದ ಮುಕ್ತಿ ಪಡೆಯಲು ಪೂಜೆ-ಪುನಸ್ಕಾರಗಳನ್ನು ಮಾಡಲು ಹೋದಾಗಲೆಲ್ಲಾ ಅಗ್ನಿ ಅವಾಂತರಗಳು ಹಾಗೂ ಅಕಾಲಿಕ ಸಾವುಗಳು ಸಂಭವಿಸಿವೆ. ಹಾಗಾಗಿ ಊರಿನಲ್ಲಿ ಯಾರೂ ಹಬ್ಬ ಆಚರಿಸುವ ಸಾಹಸಕ್ಕೆ ಕೈಹಾಕುವುದಿಲ್ಲ.‘

ಇದನ್ನೂ ಓದಿ: ತಮಿಳುನಾಡಿನಲ್ಲಿ ದೀಪಾವಳಿ ಪಟಾಕಿ ದುರಂತ: ಮಗು ಸಾವು, 269ಕ್ಕೂ ಹೆಚ್ಚು ಜನರಿಗೆ ಗಾಯ! | TN Diwali Firecrackers Accidents

ಇಲ್ಲಿ ಬೆಳೆಯುವ ಪ್ರತಿಯೊಂದು ಮಗುವೂ ಸತಿ ಶಾಪದ ಕಥೆಯನ್ನು ಹಾಗೂ ಅದಕ್ಕಾಗಿ ದೀಪಾವಳಿ ಆಚರಿಸಬಾರದು ಎಂಬುದನ್ನು ಬಾಲ್ಯದಿಂದಲೇ ಕೇಳಿ ಬೆಳೆಯುತ್ತಿದೆ. ಹಬ್ಬದ ದಿನದಂದು ಗ್ರಾಮಸ್ಥರು ಯಾವುದೇ ಪಟಾಕಿ ಸಿಡಿಸುವುದಿಲ್ಲ, ವಿಶೇಷ ಅಡುಗೆಯನ್ನೂ ತಯಾರಿಸುವುದಿಲ್ಲ. ಮುನ್ನೆಚ್ಚರಿಕೆಯಾಗಿ ಬಹುತೇಕ ಜನರು ಹಬ್ಬದ ದಿನದಂದು ಮನೆಯ ಒಳಗಡೆಯೇ ಕಾಲ ಕಳೆಯುತ್ತಾರೆ.