ತಮಿಳುನಾಡಿನಲ್ಲಿ ದೀಪಾವಳಿ ಪಟಾಕಿ ದುರಂತ: ಮಗು ಸಾವು, 269ಕ್ಕೂ ಹೆಚ್ಚು ಜನರಿಗೆ ಗಾಯ! | TN Diwali Firecrackers Accidents

Diwali firecracker tragedy in Tamil Nadu
ತಮಿಳುನಾಡಿನಲ್ಲಿ ದೀಪಾವಳಿ ಪಟಾಕಿ ದುರಂತ
Published on: 

Tamil Nadu Deepavali burns: ತಮಿಳುನಾಡಿನಲ್ಲಿ ದೀಪಾವಳಿ ಸಂಭ್ರಮದ ಬೆನ್ನಲ್ಲೇ ಪಟಾಕಿ ದುರಂತ ಸಂಭವಿಸಿದ್ದು, ಮಗುವೊಂದು ಪ್ರಾಣ ಕಳೆದುಕೊಂಡಿದೆ. ಪಟಾಕಿಯಿಂದ ಉಂಟಾದ ಬೆಂಕಿ ಗಾಯಗಳಿಗೆ ರಾಜ್ಯಾದ್ಯಂತ 269 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಬ್ಬದ ವೇಳೆ ಬರುವ ತುರ್ತು ಕರೆಗಳನ್ನು ನಿಭಾಯಿಸಲು ತಮಿಳುನಾಡಿನಲ್ಲಿ 1,283 ಆಂಬ್ಯುಲೆನ್ಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು. ಕೇವಲ 24 ಗಂಟೆಗಳಲ್ಲಿ 108 ಆಂಬ್ಯುಲೆನ್ಸ್ ನೆಟ್‌ವರ್ಕ್‌ಗೆ 16,079 ತುರ್ತು ಕರೆಗಳು ಹರಿದುಬಂದಿವೆ. ಇದರಲ್ಲಿ 2,475 ರಸ್ತೆ ಅಪಘಾತ, 396 ಸಣ್ಣಪುಟ್ಟ ಗಾಯ ಹಾಗೂ 98 ಬೆಂಕಿ ಅವಾಂತರದ ಕರೆಗಳು ಸೇರಿವೆ.

ಈ 24 ಗಂಟೆಯಲ್ಲಿ ರಾಜ್ಯದ ಸರಕಾರಿ ಆಸ್ಪತ್ರೆಗಳಿಗೆ ಒಟ್ಟು 1,387 ಜನರು ಒಳರೋಗಿಗಳಾಗಿ ದಾಖಲಾಗಿದ್ದಾರೆ! ಇವುಗಳಲ್ಲಿ 956 ಅಪಘಾತ, 321 ಗಲಾಟೆ-ಸಣ್ಣಪುಟ್ಟ ಗಾಯ ಹಾಗೂ 110 ಬೆಂಕಿ ಗಾಯದ ಕೇಸ್‌ಗಳು ಸೇರಿವೆ. ಈ ದುರಂತದಲ್ಲಿ 15 ವರ್ಷದೊಳಗಿನ ಮಗುವೊಂದು ಮೃತಪಟ್ಟಿದೆ.

ಒಟ್ಟು 269 ಬೆಂಕಿ ಗಾಯದ ಸಂತ್ರಸ್ತರಲ್ಲಿ 159 ಜನರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗಿದ್ದು, 110 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಾಲಿನಲ್ಲಿ 168 ಪುರುಷರು (92 ಹೊರರೋಗಿ, 76 ಒಳರೋಗಿ) ಅತಿ ಹೆಚ್ಚು ಗಾಯಗೊಂಡಿದ್ದರೆ, 65 ಮಕ್ಕಳು (48 ಹೊರರೋಗಿ, 17 ಒಳರೋಗಿ) ಮತ್ತು 36 ಮಹಿಳೆಯರು (19 ಹೊರರೋಗಿ, 17 ಒಳರೋಗಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Crackers psychology: ಪಟಾಕಿ ಸದ್ದಿನಿಂದ ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಭಯ ಯಾಕೆ? ಇಲ್ಲಿದೆ ಅಚ್ಚರಿ ಮೂಡಿಸುವ ಮನೋವಿಜ್ಞಾನ!

ರಾಜ್ಯದಲ್ಲೇ ತಂಜಾವೂರು ಸರಕಾರಿ ಆಸ್ಪತ್ರೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಬಂದಿದ್ದು, 36 ಹೊರರೋಗಿಗಳು ಹಾಗೂ 87 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಜೊತೆಗೆ ಚೆಂಗಲ್ಪಟ್ಟು ಆಸ್ಪತ್ರೆಯಲ್ಲಿ 85, ಮಧುರೈನಲ್ಲಿ 84, ಪೆರಿಯಾರ್ ನಗರದಲ್ಲಿ 64 ಮತ್ತು ತೂತುಕುಡಿಯಲ್ಲಿ 13 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. (ಏಜೆನ್ಸೀಸ್​)