ದೀಪಾವಳಿ ಬೋನಸ್​ ನೀಡದಿದ್ದಕ್ಕೆ ಟೋಲ್​ ಸಂಗ್ರಹಿಸದೇ ವಾಹನಗಳನ್ನು ಓಡಾಡಲು ಬಿಟ್ಟ ಸಿಬ್ಬಂದಿ! Toll

Toll
Published on

ಲಖನೌ: ಬೋನಸ್​ ಕೊಡದಿದ್ದಕ್ಕೆ ಬೇಸತ್ತ ಟೋಲ್​ ( Toll ) ಸಿಬ್ಬಂದಿ ಯಾವುದೇ ಹಣ​ ಪಡೆಯದೇ ವಾಹನಗಳನ್ನು ಉಚಿತವಾಗಿ ಓಡಾಡಲು ಬಿಟ್ಟ ಘಟನೆ ಉತ್ತರ ಪ್ರದೇಶದ ಫತೇಹಬಾದ್​ನಲ್ಲಿರುವ ಆಗ್ರಾ-ಲಖನೌ ಎಕ್ಸ್​ಪ್ರೆಸ್​ವೇನಲ್ಲಿ ಸೋಮವಾರ (ಅ.20) ನಡೆದಿದೆ.

ಶ್ರೀ ಸೈನ್ & ದಾತಾರ್ ಕಂಪನಿ ಫತೇಹಬಾದ್​ನಲ್ಲಿ ಟೋಲ್​ ಪ್ಲಾಜಾ ನಿರ್ವಹಿಸುತ್ತಿದೆ. ಅಲ್ಲಿನ 21 ಸಿಬ್ಬಂದಿಗೆ ದೀಪಾವಳಿ ಬೋನಸ್​ ಆಗಿ ಕೇವಲ 1100 ರೂಪಾಯಿ ನೀಡಿದ್ದಕ್ಕೆ ಅಸಮಾಧಾನಗೊಂಡ ಸಿಬ್ಬಂದಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ಟೋಲ್​ ಪ್ಲಾಜಾದಲ್ಲಿ ಕುಳಿತುಕೊಳ್ಳದೇ ಹೊರಗಡೆ ಬಂದು ಒಟ್ಟಿಗೆ ಪ್ರತಿಭಟಿಸಿದರು. ಈ ವೇಳೆ ಸಾವಿರಾರು ವಾಹನಗಳು ಯಾವುದೇ ಟೋಲ್​ ಪಾವತಿ ಮಾಡದೇ ಟೋಲ್​ಗೇಟ್​ ಮೂಲಕ ಹಾದು ಹೋದವು.

ಇದರ ನಡುವೆ ಟೋಲ್​ ಪ್ಲಾಜಾ ಮ್ಯಾನೇಜ್​ಮೆಂಟ್​ ಬೇರೆ ಟೋಲ್​ಗಳಿಂದ ಸಿಬ್ಬಂದಿಯನ್ನು ಕರೆತಂದು ಟೋಲ್​ ಸಂಗ್ರಹ ಮಾಡಲು ಮುಂದಾದರು. ಆದರೆ, ಪ್ರತಿಭಟನೆ ನಡೆಸುತ್ತಿದ್ದವರು ಸಿಬ್ಬಂದಿ ಬದಲಾವಣೆಗೆ ಒಪ್ಪದೇ ಇದ್ದಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ತಮ್ಮ ಪಡೆಗಳೊಂದಿಗೆ ಟೋಲ್​ ಪ್ಲಾಜಾಗೆ ಆಗಮಿಸಿ, ಮಾತಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು.

ಈ ವೇಳೆ ಟೋಲ್ ಅಧಿಕಾರಿಗಳು ಮುಂದೆ ಬಂದು ಸಿಬ್ಬಂದಿಗೆ ಪರಿಸ್ಥಿತಿಗಳನ್ನು ಸುಧಾರಿಸುವ ಬಗ್ಗೆ ಭರವಸೆ ನೀಡಿ, ನೌಕರರ ಬೇಡಿಕೆಗಳನ್ನು ಪರಿಹರಿಸಲು ಚರ್ಚೆಗಳಲ್ಲಿ ತೊಡಗಿದರು. ಟೋಲ್ ಕಂಪನಿಯ ಹಿರಿಯ ಅಧಿಕಾರಿಗಳು ತಕ್ಷಣದ ಪರಿಹಾರವಾಗಿ ಶೇ. 10 ರಷ್ಟು ವೇತನ ಹೆಚ್ಚಳ ಭರವಸೆಯನ್ನು ನೀಡಿದರು. ಈ ಭರವಸೆಯ ನಂತರ, ನೌಕರರು ಕೆಲಸವನ್ನು ಪುನರಾರಂಭಿಸಲು ಒಪ್ಪಿಕೊಂಡರು. ಸುಮಾರು ಎರಡು ಗಂಟೆಗಳ ಅಡಚಣೆಯ ನಂತರ ಸಾಮಾನ್ಯ ಟೋಲ್ ಕಾರ್ಯಾಚರಣೆಯನ್ನು ಮತ್ತೆ ಆರಂಭವಾಯಿತು.

ಇನ್ನು ಶ್ರೀ ಸೈನ್ & ದಾತಾರ್ ಕಂಪನಿ ಕಡಿಮೆ ಬೋನಸ್​ ನೀಡಿದ್ದನ್ನು ಸಮರ್ಥಿಸಿಕೊಂಡಿತು. ಮಾರ್ಚ್‌ನಲ್ಲಿ ಮಾತ್ರ ಒಪ್ಪಂದವನ್ನು ವಹಿಸಿಕೊಂಡಿದ್ದರಿಂದ ಪೂರ್ಣ ವರ್ಷದ ಬೋನಸ್ ನೀಡಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net