ಡಿನ್ನರ್ ಪಾಲಿಟಿಕ್ಸ್​ಗೆ ಕೈತಡೆ; ಕಾಂಗ್ರೆಸ್​ನಲ್ಲಿ ಮತ್ತೆ ಮುನ್ನೆಲೆಗೆ ಬಂತಾ ಪವರ್ ಶೇರಿಂಗ್?

Congress
Published on

ಬೆಂಗಳೂರು: ಸರ್ಕಾರದೊಳಗೆ ತೆರೆಮರೆಯಲ್ಲಿ ಹೊಗೆಯಾಡುತ್ತಿದ್ದ ‘ಪವರ್ ಶೇರಿಂಗ್’ ವಿಚಾರ ಮತ್ತೆ ನಿಧಾನವಾಗಿ ಕಾಂಗ್ರೆಸ್ಸಿನಲ್ಲಿ ಆಂತರಿಕ ತುಮುಲ ಉಂಟುಮಾಡಿದೆ. ಏಟಿಗೆ ಎದಿರೇಟು, ಸೇರಿಗೆ ಸವ್ವಾಸೇರು ಎಂಬ ಬೆಳವಣಿಗೆ ನಡುವೆಯೇ ದಿಢೀರ್ ಮಧ್ಯಪ್ರವೇಶಿಸಿದ ಹೈಕಮಾಂಡ್ ಪ್ರತ್ಯೇಕತಾ ತಂತ್ರಕ್ಕೆ ಬ್ರೇಕ್ ಹಾಕಿದೆ. ಇದರಿಂದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಜ.8ರಂದು ಕರೆದಿದ್ದ ಕಾಂಗ್ರೆಸ್​ನ ಎಸ್​ಸಿ, ಎಸ್​ಟಿ ಶಾಸಕರು, ಸಚಿವರ ಡಿನ್ನರ್ ಮೀಟಿಂಗ್ ರದ್ದಾಗಿದೆ. ‘ಸಮೀಪ ದೃಷ್ಟಿಯ’ ಆಲೋಚನೆಯಲ್ಲಿ ರಾಜ್ಯದ ಉದ್ದಗಲಕ್ಕೂ ಸಮಾವೇಶ ನಡೆಸುವ ಅಂದಾಜಿನಲ್ಲಿ ಒಂದು ವರ್ಗದ ಕೈ ಶಾಸಕರು ಹಾಗೂ ಸಚಿವರ ಪೂರ್ವಭಾವಿ ಸಭೆಯೊಂದು ಬುಧವಾರ ನಡೆಯುವುದಿತ್ತು. ಆದರೆ ಸಭೆ ನಡೆಸಕೂಡದೆಂದು ಹೈಕಮಾಂಡ್ ತಾಕೀತು ಮಾಡಿದೆ.

ಕೆಲ ದಿನಗಳ ಹಿಂದೆ ಹಾಸನದಲ್ಲಿ ಆಯೋಜಿಸಲಾಗಿದ್ದ ಸ್ವಾಭಿಮಾನಿ ಸಮಾವೇಶವನ್ನು ವ್ಯಕ್ತಿ ಕೇಂದ್ರಿತ ಬದಲು ಪಕ್ಷದ ಕಾರ್ಯಕ್ರಮವನ್ನಾಗಿ ಹೈಕಮಾಂಡ್ ಬದಲಿಸಿತ್ತೆಂಬುದು ಇಲ್ಲಿ ಉಲ್ಲೇಖನೀಯ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖವಾಗಿ ಕಾರಣವಾಗಿದ್ದು ಪರಿಶಿಷ್ಟ ಜಾತಿ, ಪಂಗಡದವರು, ಅವರಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಮಾವೇಶ ನಡೆಸಲು ಚಿಂತನೆ ನಡೆದಿತ್ತು. ಇದರ ರೂಪುರೇಷೆಗಾಗಿ ಕಾಂಗ್ರೆಸ್​ನಲ್ಲಿನ ಎಸ್ಸಿಎಸ್ಟಿ ಸಮುದಾಯಕ್ಕೆ ಸೇರಿದ ಸಚಿವರು, ಶಾಸಕರು, ಮುಖಂಡರ ಸಭೆ ಕರೆಯಲಾಗಿತ್ತು. ಗೃಹ ಸಚಿವ ಜಿ.ಪರಮೇಶ್ವರ ಅವರೇ ಖುದ್ದು ಸಭೆಗೆ ಆಹ್ವಾನ ಕಳಿಸಿದ್ದರು.

ಕಳೆದ ಗುರುವಾರವಷ್ಟೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಭೆ ನಡೆದಿತ್ತು. ಆ ಸಭೆಯ ಮುಂದುವರಿದ ಭಾಗವಾಗಿ ಬುಧವಾರದ ಸಭೆ ಕರೆಯಲಾಗಿದೆ ಎಂಬ ಗುಸುಗುಸು ಕೇಳಿಬಂದಿತ್ತಲ್ಲದೆ ಈ ವಿಚಾರ ಹೈಕಮಾಂಡ್ ಕಿವಿಗೂ ಮುಟ್ಟಿತ್ತು. ಸೋಮವಾರ, ಮಂಗಳವಾರ ದೆಹಲಿಯಲ್ಲೇ ಇದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಡಿನ್ನರ್ ಮೀಟಿಂಗ್ ಹಾಗೂ ಶಾಸಕರ ಪ್ರತ್ಯೇಕ ಸಭೆ ನಡೆಯುವ ಪರಿಣಾಮದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತಂದರೆಂಬ ಮಾತುಗಳೂ ಕೇಳಿಬಂದಿವೆ.

ವರಿಷ್ಠರ ಎಚ್ಚರಿಕೆ ನಡೆ: ಆಪ್ತ ಸಚಿವರೊಂದಿಗೆ ಸಿಎಂ ನಡೆಸಿದ ಭೋಜನ ಕೂಟದ ಚರ್ಚೆ ಬೇರೆಬೇರೆ ವ್ಯಾಖ್ಯಾನಕ್ಕೆ ಕಾರಣವಾದ ಸಂದರ್ಭದಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ ಕರೆದ ಸಭೆ ದಿಕ್ಕು ತಪ್ಪಬಹುದೆಂಬ ಅಂದಾಜಿನಲ್ಲಿ ಹೈಕಮಾಂಡ್ ಎಚ್ಚರಿಕೆ ಹೆಜ್ಜೆ ಇಟ್ಟಿತು. ಮಂಗಳವಾರ ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಪರಮೇಶ್ವರ್, ಜನವರಿ 8ರಂದು ಕಾಂಗ್ರೆಸ್​ನ ಪರಿಶಿಷ್ಟ ಜಾತಿ, ಪಂಗಡದ ಸಚಿವರು, ಶಾಸಕರು ಹಾಗೂ ಮುಖಂಡರ ಸಭೆಯನ್ನು ರ್ಯಾಡಿಸನ್ ಬ್ಲೂನಲ್ಲಿ ಆಯೋಜಿಸಿರುವುದಾಗಿ ಹೇಳಿದ್ದರು.

ಪರಮೇಶ್ವರ್ ಸಭೆಯ ಬಗ್ಗೆ ಅಭಿಪ್ರಾಯ ಹೊರಹಾಕುತ್ತಿದ್ದಂತೆ, ಔತಣಕೂಟದ ಹಿಂದಿನ ಲಾಭದ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಲೆಕ್ಕಾಚಾರ ಶುರುವಾಗಿತ್ತು. ದಲಿತ ಸಮುದಾಯಕ್ಕೆ ನಾಯಕತ್ವದ ಅವಕಾಶ ಸಿಕ್ಕಲ್ಲಿ ತಮ್ಮನ್ನು ತಾವು ಕ್ಲೇಮ್ ಮಾಡಿಕೊಳ್ಳುವ ಉದ್ದೇಶದಿಂದ ಔತಣಕೂಟ ಕರೆದು ಶಾಸಕರು, ಮುಖಂಡರನ್ನು ಒಟ್ಟಾಗಿ ಕರೆದೊಯ್ಯಲು ಮುಂದಾಗಿದ್ದಾರೆಂಬ ವಿಶ್ಲೇಷಣೆ ನಡೆದಿತ್ತು. ಈ ಎಲ್ಲ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಮಾಹಿತಿ ಕಲೆ ಹಾಕಿದ್ದರು. ಬಳಿಕ, ಪಕ್ಷದ ವೇದಿಕೆ ಹೊರತಾಗಿ ಈ ರೀತಿ ಸಭೆ ನಡೆಯುವುದರಿಂದ ಭವಿಷ್ಯದಲ್ಲಿ ನಡೆಯಬಹುದಾದ ಬೆಳವಣಿಗೆ, ಪರ್ಯಾಯ ಶಕ್ತಿ ಉದಯ, ಗುಂಪುಗಾರಿಕೆಗೆ ಅವಕಾಶ ಆಗಬಹುದೆಂಬ ಅಂದಾಜಿನಲ್ಲಿ ದೆಹಲಿ ನಾಯಕರು ಗಂಭೀರವಾಗಿ ಪರಿಗಣಿಸಿದರು. ಹೀಗಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಬುಧವಾರದ ಸಭೆ ನಡೆಸದಂತೆ ಪರಮೇಶ್ವರ ಅವರಿಗೆ ಸಂದೇಶ ಕಳಿಸಿದರು.

2028ರಲ್ಲಿ ನಾನೂ ಸಿಎಂ ಆಕಾಂಕ್ಷಿ: ಸದ್ಯ ರಾಜ್ಯದಲ್ಲಿ ಸಿಎಂ-ಡಿಸಿಎಂ ಹುದ್ದೆ ಖಾಲಿ ಇಲ್ಲ, ಹೀಗಾಗಿ ಆ ಮಾತು ಈಗ ಬೇಡ. 2028ರಲ್ಲೂ ನಮ್ಮ ಸರ್ಕಾರ ಬರಲಿದೆ. ಆಗ ನಾನು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 2028ರಲ್ಲಿ ಸಿಎಂ ಆಗಬೇಕಾದರೆ ಈಗಿನಿಂದಲೇ ಸೈನಿಕರನ್ನು ಸಿದ್ಧಪಡಿಸಬೇಕಾಗುತ್ತದೆ . ಡಿನ್ನರ್ ಪಾರ್ಟಿಗೆ ರಾಜಕೀಯ ಅರ್ಥ ಕಲ್ಲಿಸಬೇಕಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಮತ್ತೆ ನಾನು ಹೇಳುವುದರ ಅಗತ್ಯವಿಲ್ಲ. ಡಿಕೆಶಿ ಡಿನ್ನರ್ ಪಾರ್ಟಿಗೆ ಆಹ್ವಾನ ಬಂದರೆ ನಾನು ಖಂಡಿತ ಹೋಗುತ್ತೇನೆ. ಅಲ್ಲಿ ಏನೇನು ಚರ್ಚೆ ಆಗುತ್ತದೆ ನೋಡೋಣ

ವರಿಷ್ಠರ ಸೂಚನೆ ಏನು?: ಇಂತಹ ಸಭೆಗಳು ಪಕ್ಷದ ವೇದಿಕೆಯ ಮೂಲಕವೇ ನಡೆಯಬೇಕಾಗುತ್ತದೆ. ಪ್ರತ್ಯೇಕ ಸಭೆ ಕರೆಯುವುದು, ಸಮಾವೇಶ ಮಾಡುವ ತೀರ್ಮಾನ ಮಾಡಿದರೆ ಬೇರೆ ಸಂದೇಶ ಹೋಗಲಿದೆ. ಹೀಗಾಗಿ ತಕ್ಷಣವೇ ಸಭೆ ರದ್ದು ಮಾಡಿ ಎಂದು ಪರಮೇಶ್ವರ್​ಗೆ ವರಿಷ್ಠರು ಸೂಚನೆ ನೀಡಿದ್ದರು.

ಡಿನ್ನರ್ ಮೀಟಿಂಗ್ ಹಿಂದಿನ ಲೆಕ್ಕಾಚಾರ?

  • ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಎಸ್ಸಿ, ಎಸ್ಟಿ ಸಮಾವೇಶವನ್ನು ಆಯೋಜಿಸುವುದು
  • ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದಲೇ ಸಮಾವೇಶದ ಸರಣಿ ಆರಂಭಿಸುವುದು
  • ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲೇ ಈ ಕುರಿತಂತೆ ಚರ್ಚೆ ನಡೆದಿತ್ತು
  • ಜಿಲ್ಲಾ ಕೇಂದ್ರಗಳ ಸಮಾವೇಶ ಮಾಹಿತಿ ಹೈಕಮಾಂಡ್ ಅಂಗಳ ತಲುಪಿತ್ತು
  • ಎಸ್ಸಿ ಎಸ್ಟಿ ಸಚಿವ, ಶಾಸಕ, ಮುಖಂಡರ ಸಭೆ ಹಿಂದೆ ಕಾರ್ಯತಂತ್ರವಿತ್ತು
  • ಬೇರೆ ಯಾರೇ ಸಭೆ ಕರೆದರೂ ಬೇರೆ ಸಂದೇಶ ಹೋಗುತ್ತದೆ ಎಂಬ ನೆಪ
  • ಇದೇ ಕಾರಣದಿಂದ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಲು ತೀರ್ಮಾನ
  • ದಲಿತ ಸಂಘಟನೆ ಮೂಲಕ ಜಿಲ್ಲಾವಾರು ಸರಣಿ ಸಮಾವೇಶ ಆಯೋಜನೆ
  • ದಲಿತ ಸಂಘಟನೆಗಳಿಂದ ಸಿಎಂ ಸಹಿತ ಎಲ್ಲ ಸಚಿವರನ್ನ ಆಹ್ವಾನಿಸುವುದು
  • ಚಿತ್ರದುರ್ಗದಲ್ಲಿ ದೊಡ್ಡಮಟ್ಟದ ಸಮಾವೇಶ ನಡೆಸುವುದಕ್ಕೆ ಕಾರ್ಯತಂತ್ರ
  • ಅಲ್ಲಿಂದಲೇ ಹೈಕಮಾಂಡ್​ಗೆ ಸ್ಪಷ್ಟ ಸಂದೇಶವನ್ನು ಕಳುಹಿಸುವ ಲೆಕ್ಕಾಚಾರ
  • ಬಳಿಕ ಜಿಲ್ಲಾವಾರು ಸಭೆ ಆಯೋಜಿಸಿ 20-25 ಸಾವಿರ ಜನರ ಸೇರಿಸುವುದು
  • ಆ ಮೂಲಕ ರಾಜ್ಯ, ಕೇಂದ್ರ ನಾಯಕರ ಎದುರು ಶಕ್ತಿ ಪ್ರದರ್ಶನಕ್ಕೆ ಪ್ಲ್ಯಾನ್​

ನಾನು ಹೊರದೇಶದಲ್ಲಿದ್ದ ಕಾರಣಕ್ಕೆ ನನಗೆ ಸಭೆಯ ಬಗ್ಗೆ ಮಾಹಿತಿಯಿಲ್ಲ. ಬೆಂಗಳೂರಿಗೆ ಹೋದ ನಂತರ ಇದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ.

| ಡಿ.ಕೆ.ಶಿವಕುಮಾರ್ ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net