ಮೆಕಾನಿಕಲ್, ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಕೇಳೋರಿಲ್ಲ; ಕನ್ನಡ ಮಾಧ್ಯಮ ಕೋರ್ಸ್ ಪಡೆಯಲೂ ನಿರಾಸಕ್ತಿ

Engineering
Published on

| ಎನ್.ಎಲ್.ಶಿವಮಾದು ಬೆಂಗಳೂರು

ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಕೋರ್ಸ್​ಗಳು ಭರ್ತಿಯಲ್ಲಿ ನಾಗಾಲೋಟ ಮುಂದುವರಿಸಿವೆ. ಆದರೆ, ಸಿವಿಲ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸ್​ಗಳ ಬೇಡಿಕೆ ಕುಸಿದಿದೆ. ಕಳೆದ ಮೂರು ವರ್ಷಗಳಿಂದ ಕಂಪ್ಯೂಟರ್ ಸೈನ್ಸ್ ಕೋರ್ಸ್​ಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಈ ಬಾರಿ ಕಂಪ್ಯೂಟರ್ ಸೈನ್ಸ್ ಜತೆಗೆ ತಂತ್ರಜ್ಞಾನ ಆಧಾರಿತ ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಬ್ಲಾಕ್ ಚೈನ್, ಮಾಹಿತಿ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ ಸೇರಿ ಇತರೆ ಕೋರ್ಸ್​ಗಳ ಶೇ.90ಕ್ಕೂ ಹೆಚ್ಚಿನ ಸೀಟುಗಳು ಭರ್ತಿಯಾಗಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದತ್ತಾಂಶ ಮಾಹಿತಿ ನೀಡಿದೆ.

ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 14,039 ಕೋರ್ಸ್​ಗಳಿದ್ದವು. ಈ ಪೈಕಿ ಕೇವಲ 30 ಸೀಟುಗಳು ಮಾತ್ರ ಉಳಿಕೆಯಾಗಿವೆ. ಉಳಿದೆಲ್ಲ ಸೀಟುಗಳು ಭರ್ತಿಯಾಗಿವೆ. ಇದೇ ರೀತಿ ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಬ್ಲಾಕ್ ಚೈನ್ ಸೇರಿ ಇತರೆ ಕೋರ್ಸ್​ಗಳಲ್ಲಿ 12 ಸಾವಿರ ಪೈಕಿ 11 ಸಾವಿರಕ್ಕೂ ಹೆಚ್ಚು ಸೀಟು ಭರ್ತಿಯಾಗಿವೆ.

15 ಸಾವಿರ ಸೀಟು ಉಳಿಕೆ: ಈ ಬಾರಿ ಸರ್ಕಾರಿ ಕಾಲೇಜುಗಳ ಸೀಟುಗಳು ಮತ್ತು ಖಾಸಗಿ ಕೋಟಾ ಶೇ. 40 ಸೀಟು ಸೇರಿ 65292 ಸೀಟುಗಳು ಲಭ್ಯವಿದ್ದವು. ಇದರಲ್ಲಿ 50,293 ಸೀಟುಗಳು ಭರ್ತಿಯಾಗಿವೆ. 14,499 ಸೀಟುಗಳು ಉಳಿದಿವೆ. ಹಿಂದಿನ ವರ್ಷಕ್ಕೆ ಹೋಲಿಸಿಕೊಂಡಾಗ ಹೆಚ್ಚು ಸೀಟುಗಳು ಭರ್ತಿಯಾಗಿವೆ. ಬೇಡಿಕೆ ಇಲ್ಲದ ಸೀಟುಗಳನ್ನು ಬಿಟ್ಟು ಬೇಡಿಕೆ ಇರುವ ಕೋರ್ಸ್​ಗಳಿಗೆ ಆದ್ಯತೆ ನೀಡಲಾಗಿತ್ತು. ಸಿವಿಲ್ ಮತ್ತು ಮೆಕಾನಿಕಲ್ ಸೀಟು ಇನ್ ಟೇಕ್ (ಸಂಖ್ಯೆ) ಕಡಿಮೆ ಮಾಡಿ ಕಂಪ್ಯೂಟರ್ ಸೈನ್ಸ್ ಕೋರ್ಸ್​ಗಳನ್ನು ಹೆಚ್ಚಳ ಮಾಡಿತ್ತು. ಹೀಗಾಗಿ ಹೆಚ್ಚಿನ ಸೀಟುಗಳು ಭರ್ತಿಯಾಗಿವೆ.

ಕನ್ನಡ ಮಾಧ್ಯಮ ಸೀಟು ಕೇಳೋರಿಲ್ಲ: ಕಳೆದ ಎರಡು ವರ್ಷಗಳಿಂದ ಕನ್ನಡ ಮಾಧ್ಯಮ ಇಂಜಿನಿಯರಿಂಗ್ ಕೋರ್ಸ್​ಗಳನ್ನು ಆರಂಭಿಸಿದೆ. ಕಳೆದ ವರ್ಷ 90 ಸೀಟುಗಳಲ್ಲಿ ಒಂದೂ ಸೀಟು ತುಂಬಿರಲಿಲ್ಲ. ಈ ವರ್ಷ ಕೂಡ ಅದೇ ದಾರಿ ಮುಂದುವರಿದಿದೆ. ಸಿವಿಲ್ ಮತ್ತು ಮೆಕಾನಿಕಲ್ ಸೇರಿ 66 ಸೀಟುಗಳು ಲಭ್ಯವಿದ್ದವು. ಇದರಲ್ಲಿ ಕೇವಲ ಒಂದು ಸೀಟು ಮಾತ್ರ ತುಂಬಿದೆ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಉದ್ಯೋಗ ಸಿಗುವುದಿಲ್ಲ ಎಂಬ ಕಾರಣದಿಂದ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ ಎಂದು ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.

ಬದಲಾದ ಟ್ರೆಂಡ್: ಮಾಹಿತಿ ತಂತ್ರಜ್ಞಾನ ಸೇರಿ ಇತರೆ ಕೋರ್ಸ್​ಗಳಿಗೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಸೀಟು ಆಯ್ಕೆ ಟ್ರೆಂಡ್ ಬದಲಾಗಿದ್ದು, ಸಿವಿಲ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಗಳು ಬೇಡಿಕೆ ಕಳೆದುಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net