ಸಣ್ಣ ಇಲಾಖೆಯ ಪ್ಲಾಟ್‌ಗಳಿಗೆ ಡಿಮ್ಯಾಂಡ್ ಇಲ್ಲ! 93 ಕೋಟಿ ವೆಚ್ಚದಲ್ಲಿ ಯುನಿಟಿ ಮಾಲ್ ನಿರ್ಮಾಣ

Sharanabasappa Darshanapur
Published on

ಬೆಂಗಳೂರು:

ಸಣ್ಣ ಕೈಗಾರಿಕಾ ಇಲಾಖೆಯ ಪ್ಲಾಟ್‌ಗಳಿಗೆ ಡಿಮ್ಯಾಂಡ್ ಇಲ್ಲ! ಈಗಾಗಲೇ ಅಭಿವೃದ್ಧಿಪಡಿಸಿರುವ

ಪ್ಲಾಟ್‌ಗಳಲ್ಲಿ ಶೇ.54 ರಷ್ಟು ಮಾತ್ರ ಬೇಡಿಕೆ ಇರುವುದರಿಂದ ಡಿಮ್ಯಾಂಡ್ ಅಂಡ್ ಸಪ್ಲೆ ನಿಯಮಾವಳಿ ಅನುಸಾರ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ.

ತಮ್ಮನ್ನು ಭೇಟಿಯಾಗಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಸಣ್ಣ ಕೈಗಾರಿಕಾ ಸಚಿವ ಶರಣ ಬಸಪ್ಪ ದರ್ಶನಾಪುರ ಅವರು, ಶೆಡ್‌ಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇದೆ. ಆದರೆ ಪ್ಲಾಟ್‌ಗಳಿಗೆ ಯಾಕೆ ಬೇಡಿಕೆ ಇಲ್ಲ ಎನ್ನುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಇಲಾಖೆ ಅಭಿವೃದ್ಧಿಪಡಿಸಿರುವ 7415 ಶೆಡ್‌ಗಳಲ್ಲಿ 5678 ಶೆಡ್‌ಗಳು (ಶೇ.77) ಬಳಕೆಯಾಗಿದ್ದು, ಅಲ್ಲಿ ಕೈಗಾರಿಕೆಗಳು ನಡೆಯುತ್ತಿವೆ ಎಂದರು.

10,651 ಪ್ಲಾಟ್ (ಬಿಲ್ಡಿಂಗ್)ಗಳಲ್ಲಿ 5804 ಪ್ಲಾಟ್‌ಗಳಲ್ಲಿ(ಶೇ.54) ಮಾತ್ರ ಕೈಗಾರಿಕೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದರು.

93 ಕೋಟಿ ವೆಚ್ಚದಲ್ಲಿ

ಯುನಿಟಿ ಮಾಲ್ ನಿರ್ಮಾಣ

ಪ್ರತಿ ರಾಜ್ಯದಲ್ಲಿಯೂ ಯುನಿಟಿ ಮಾಲ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಅದರ ಯೋಜನೆಯಡಿಯಲ್ಲಿ ರಾಜ್ಯದಲ್ಲಿಯೂ 93 ಕೋಟಿ ವೆಚ್ಚದಲ್ಲಿ ಮಾಲ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಮಾಲ್ ನಿರ್ಮಾಣಕ್ಕೆ ಕನಿಷ್ಠ 2 ಎಕರೆಯಿಂದ 8 ಎಕರೆ ಬೇಕಿದೆ. ಅದಕ್ಕಾಗಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಮಾಲ್ ನಿರ್ಮಿಸಲು ನಿರ್ಧರಿಸಲಾಗಿದ್ದು, ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ. ಎಲ್ಲಾ ರಾಜ್ಯಗಳಿಗೂ ಅಲ್ಲಿನ ಸಣ್ಣ ಕೈಗಾರಿಕೆಗಳ ಉತ್ಪನ್ನಗಳನ್ನು ಪ್ರದರ್ಶನ ಮಾಡಲು ಅವಕಾಶ ಇರುವಂತೆ ಈ ಯುನಿಟಿ ಮಾಲ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕುಡುತಿನಿ ಪ್ಲಾಟ್‌ಗೆ ಬೇಡಿಕೆ ಇಲ್ಲ

ಬಳ್ಳಾರಿ ಜಿಲ್ಲೆಯ ಕುಡುತಿನಿಯಲ್ಲಿ 100 ಎಕರೆ ಜಾಗದಲ್ಲಿ 60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಪ್ಲಾಟ್‌ಗಳಿಗೆ ಡಿಮ್ಯಾಂಡ್ ಇಲ್ಲ. ಕನಿಷ್ಠ 500 ಅರ್ಜಿಗಳನ್ನು ನಿರೀಕ್ಷೆ ಮಾಡಲಾಗಿತ್ತು. ಅಷ್ಟು ಬರಲಿಲ್ಲ ಎಂದರು.

600 ಕೋಟಿ ಸಬ್ಸಿಡಿ ಬಾಕಿ

ಸಣ್ಣ ಕೈಗಾರಿಕೆಗಳಿಗೆ ಸರ್ಕಾರ ಕೊಡಬೇಕಾಗಿರುವ 600 ಕೋಟಿ ರೂ ಸಬ್ಸಿಡಿ ಬಾಕಿ ಇದೆ. ಈ ಬಾರಿ ಸರ್ಕಾರ 100 ಕೋಟಿ ರೂ ಸಬ್ಸಿಡಿಯನ್ನು ಬಿಡುಗಡೆ ಮಾಡಿದೆ. ಇನ್ನೂ 500 ಕೋಟಿ ರೂ ಬಾಕಿ ಇದೆ ಎಂದರು.

ಒತ್ತುವರಿ ತೆರವಿಗೆ ಕ್ರಮ

ಇಲಾಖೆಯ ಆಸ್ತಿ ಎಷ್ಟಿದೆ ಎನ್ನುವುದು ಸದ್ಯ ಮಾಹಿತಿ ಇಲ್ಲ. ಹಾಗಾಗಿ ಈ ಬಗ್ಗೆ ರಾಜ್ಯದ ಎಲ್ಲಾ ಕಡೆಯಲ್ಲೂ ಸರ್ವೆ ಮಾಡಿಸಲು ಉದ್ದೇಶಿಸಲಾಗಿದೆ. ಒತ್ತುವರಿ ಆಗಿರುವ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಸರ್ವೆ ಬಳಿಕ ಒತ್ತುವರಿ ತೆರವು ಮಾಡಿಸಲಾಗುವುದು ಎಂದರು.

ಬೆಂಗಳೂರಿ ಚನ್ನಸಂದ್ರದ ಬಳಿ 23 ಎಕರೆಯಲ್ಲಿ ಸದ್ಯ 19 ಎಕರೆ ಮಾತ್ರ ಉಳಿದಿದೆ. ಇನ್ನುಳಿದ ಜಾಗ ಒತ್ತುವರಿಯಾಗಿದೆ ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net