

ನವದೆಹಲಿ: ಕರೊನಾ ವೈರಸ್ ನಿಯಂತ್ರಣಕ್ಕೆ ನೆರವಾಗಲು ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆಪ್ ರೂಪಿಸಿದವರು ಯಾರು? ಎಂಬ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದೆ. ಖಾಸಗಿ ಸಹಯೋಗದಲ್ಲಿ ಈ ಆಪನ್ನು ಅಭಿವೃದ್ಧಿಪಡಿಸಲಾಗಿದೆ. ಕರೊನಾ ನಿಯಂತ್ರಣಕ್ಕೆ ನೆರವಾಗುವ ನಿಟ್ಟಿನಲ್ಲಿ ಕೇವಲ 21 ದಿನದಲ್ಲಿ ಈ ಆಪ್ ತಯಾರಿಸಲಾಗಿದೆ. ಇದು ಸಂಪೂರ್ಣ ಸ್ವದೇಶಿಯಾಗಿದ್ದು, ಎಲ್ಲ ಡೇಟಾ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳಿದೆ.
ಆರೋಗ್ಯ ಸೇತು ಆಪ್ ಹೇಗೆ ರೂಪಿಸಲಾಯಿತು ಎಂಬ ಕುರಿತು ತನಗೆ ಗೊತ್ತಿಲ್ಲ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಹೇಳಿದ್ದ ಕಾರಣ ಗೊಂದಲ ಉಂಟಾಗಿತ್ತು. ಲಾಕ್ಡೌನ್ ವೇಳೆ ಕೋಟ್ಯಂತರ ಭಾರತೀಯರು ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದನ್ನು ರೂಪಿಸಿದವರ ಕುರಿತು ಮಾಹಿತಿ ಒದಗಿಸುವಂತೆ ಕೋರಿ ಎನ್ಐಸಿ, ರಾಷ್ಟ್ರೀಯ ಇ-ಆಡಳಿತ ವಿಭಾಗ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸೌರವ್ ದಾಸ್ ಎನ್ನುವವರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ ಎನ್ಐಸಿಯಾಗಲಿ ಸಚಿವಾಲಯವಾಗಲಿ ಆಪ್ ರಚನೆಯ ಕುರಿತ ದತ್ತಾಂಶ ಹೊಂದಿಲ್ಲ ಎಂದು ಉತ್ತರ ನೀಡಿತ್ತು. ಬಳಿಕ ಅವರು ಮುಖ್ಯ ಮಾಹಿತಿ ಆಯುಕ್ತ (ಸಿಐಸಿ)ರಿಗೆ ದೂರು ನೀಡಿದ್ದರು.
ಎನ್ಐಸಿ ಸರ್ಕಾರಿ ವೆಬ್ಸೈಟ್ಗಳನ್ನು ವಿನ್ಯಾಸಗೊಳಿಸುವ ಸಂಸ್ಥೆಯಾಗಿದೆ. ಎಲೆಕ್ಟ್ರಾನಿಕ್ಸ್ ಸಚಿವಾಲಯ ವ್ಯಾಪ್ತಿಗೆ ಬರುವ ಎನ್ಐಸಿಯನ್ನು ತರಾಟೆಗೆ ತೆಗೆದುಕೊಂಡಿರುವ ಮಾಹಿತಿ ಆಯೋಗ, ವಿವಿಧ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆರೋಗ್ಯ ಸೇತು ಆಪ್ ಕುರಿತು ಮಾಹಿತಿ ಹಕ್ಕು ಕಾನೂನು (ಆರ್ಟಿಐ) ಅನ್ವಯ ಅರ್ಜಿ ಸಲ್ಲಿಸಿದವರಿಗೆ ಸೂಕ್ತ ಮಾಹಿತಿ ಒದಗಿಸುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.