

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದು ಜನ/ ಕುಟುಂಬಗಳ ಸ್ವಯಂ ಇಚ್ಛೆ ಬಿಡಲಾಗಿದೆ. ಮಾಹಿತಿ ನೀಡುವಂತೆ ಒತ್ತಾಯ ಮಾಡುತ್ತಿಲ್ಲ. ಸೆ.22ರಿಂದ ಶುರುವಾಗಿರುವ ಈ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ ತಿಳಿಸಿದ್ದಾರೆ.
ಈ ಸಮೀಕ್ಷೆಯಲ್ಲಿ ರಾಜ್ಯದ ಸಂಪೂರ್ಣ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದರೂ, ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ/ಕುಟುಂಬಗಳ ಸ್ವಯಂ ಇಚ್ಛೆಗೆ ಬಿಡಲಾಗಿದ್ದು, ಮಾಹಿತಿ ಒತ್ತಾಯ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
2025ರ ಸೆ. 28 ರಂದು ಕೆಲವು ಜನಪ್ರತಿನಿಧಿಗಳು, ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸುತ್ತಾ, ತಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲವೆಂದು ಹಾಗೂ ಸಾರ್ವಜನಿಕರೂ ಸಹ ಭಾಗವಹಿಸಬಾರದೆಂದು ಹೇಳಿಕೆಗಳನ್ನು ನೀಡಿರುವುದು ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ರೀತಿಯ ಹೇಳಿಕೆಗಳ ಮೂಲಕ ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸದಂತೆ ಪ್ರೇರೇಪಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಈ ರೀತಿಯ ಹೇಳಿಕೆಗಳು ನ್ಯಾಯಾಲಯದ ಆದೇಶದ ಆಶಯಗಳಿಗೆ ವಿರುದ್ಧವಾಗಿವೆ ಎಂದು ಮಧುಸೂದನ ನಾಯ್ಕ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ ಮತ್ತು ಅವರ ಕಲ್ಯಾಣ ಹಾಗೂ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು, ಶಾಸನಬದ್ಧ ನಿಯಮಾವಳಿಗಳನ್ವಯ ಈ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ವಿವರಿಸಿದ್ದಾರೆ.
ಆದರೆ ಸಾರ್ವಜನಿಕ ಹೇಳಿಕೆಗಳು ಸಮೀಕ್ಷೆಯಲ್ಲಿ ಜನರು ಭಾಗವಹಿಸದಂತೆ ಪ್ರಚೋದಿಸುತ್ತಿದ್ದು, ಸಾರ್ವಜನಿಕ ಹಿತಕ್ಕಾಗಿ ಕೈಗೊಳ್ಳಲಾದ ಸಮೀಕ್ಷೆಯ ಉದ್ದೇಶಕ್ಕೆ ವಿರುದ್ಧವಾಗಿವೆ. ನಾಗರಿಕರು ಯಾವುದೇ ಬಲವಂತವಿಲ್ಲದೆ ಸ್ವಇಚ್ಛೆಯಿಂದ ಸಮೀಕ್ಷೆಯಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲಿ, ಅವರ ಭಾಗವಹಿಸುವಿಕೆಯನ್ನು ತಡೆಯುವ ಇಂತಹ ಹೇಳಿಕೆಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿರುತ್ತದೆ ಎಂದಿದ್ದಾರೆ.
ಈ ರೀತಿಯ ಹೇಳಿಕೆಗಳಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ತಲುಪುವ ಸಾಧ್ಯತೆಗಳಿವೆ. ಜತೆಗೆ ನ್ಯಾಯಾಲಯದ ಆದೇಶದ ಆಶಯಕ್ಕೆ ವ್ಯತಿರಿಕ್ತ (ಅಗೇನಸ್ಟ್ ದಿ ಸ್ಪಿರಿಟ್)ವಾಗಿದೆ. ಈ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ ತಿಳಿಸಿದ್ದಾರೆ.