

ನವದೆಹಲಿ: ಸೇನಾಪಡೆಗಳನ್ನು ವಾಪಸ್ ಪಡೆದು ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ಕುರಿತು ಭಾರತ ಮತ್ತು ಚೀನಾ ನಡುವೆ ಭಾನುವಾರ ನಡೆದ ಮಾತುಕತೆಯಲ್ಲಿ ಪ್ಯಾಂಗೊಂಗ್ ತ್ಸೊ ಸರೋವರದ ಸಮೀಪದ ಗ್ರೀನ್ ಟಾಪ್ ಪ್ರದೇಶದ ವಿಷಯ ಕಗ್ಗಂಟಾಗಿ ಪರಿಣಮಿಸಿದೆ.
ಉಭಯ ದೇಶಗಳ ಕಮಾಂಡರ್ಗಳ ಮಟ್ಟದ ಐದನೇ ಸುತ್ತಿನ ಮಾತುಕತೆಯಲ್ಲಿ ಗ್ರೀನ್ ಟಾಪ್ ವಿಚಾರದಲ್ಲಿ ಚೀನಾ ಕ್ಯಾತೆ ತೆಗೆದಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಪ್ಯಾಂಗೊಂಗ್ ತ್ಸೊ ಸರೋವರದ ವ್ಯೂಹಾತ್ಮಕವಾಗಿ ಮಹತ್ವದ ಸ್ಥಳವಾದ ಗ್ರೀನ್ ಟಾಪ್ನಿಂದ ಸೈನ್ಯವನ್ನು ವಾಪಸ್ ಪಡೆಯಲು ಚೀನಾ ನಿರಾಕರಿಸಿದೆ. ಚಳಿಗಾಲ ಆರಂಭವಾಗುವುದಕ್ಕೂ ಮುನ್ನ ಉಭಯ ದೇಶಗಳ ನಡುವೆ ವ್ಯಾಪಕ ಮಾತುಕತೆ ನಡೆಯುವ ಸಾಧ್ಯತೆಗೆ ಇದು ಕಲ್ಲು ಹಾಕುವ ಸಾಧ್ಯತೆ ಇದೆ. ಪೊದೆಗಳಿಂದ ಆವೃತವಾದ ಗ್ರೀನ್ ಟಾಪ್ ಪ್ರಸ್ಥಭೂಮಿ ಪ್ಯಾಂಗೊಂಗ್ ತ್ಸೊ ಸರೋವರದ ಉತ್ತರ ತೀರಕ್ಕೆ 5000 ಮೀಟರ್ಗೂ ಅಧಿಕ ಎತ್ತರದಲ್ಲಿ ಹರಡಿಕೊಂಡಿದೆ.
ಗಡಿಯಲ್ಲಿ ಮಹಿಳಾ ಸೈನಿಕರ ನಿಯೋಜನೆ: ಪಾಕ್ ನಡುವಿನ ಗಡಿ ನಿಯಂತ್ರಣ ರೇಖೆ ಬಳಿ ಸೇನೆ ರೈಫಲ್ ವುಮೆನ್ನ ಮಹಿಳಾ ಸೈನಿಕರನ್ನು ಭದ್ರತೆಗೆ ನಿಯೋಜಿಸಿದೆ. ಭಾರತೀಯ ಸೇನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯೋಧೆಯರನ್ನು ಗಡಿ ಬಳಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹತ್ತು ಸಾವಿರ ಅಡಿ ಎತ್ತರದಲ್ಲಿ ಅಸ್ಸಾಂ ರೈಫಲ್ಸ್ನ ಮಹಿಳಾ ಅಧಿಕಾರಿಯ ನೇತೃತ್ವದಲ್ಲಿ ಸುಮಾರು ಅರ್ಧ ಡಜನ್ ’ರೈಫಲ್ ವುಮೆನ್’ಗಳು ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ.
ಚೀನಾಕ್ಕೆ ಅನುಕೂಲ
ಸಿರಿಜಾಪ್ ಬಳಿ ಚೀನಾ ಲಿಬರೇಷನ್ ಆರ್ವಿು ನೆಲೆಗಳಿಗೆ ರಸ್ತೆ ಸಂಪರ್ಕ ಹೊಂದಿರುವ ಗ್ರೀನ್ ಟಾಪ್ನಿಂದ ಭಾರತ ಸೇನೆಯ ಚಲನವಲನ ವೀಕ್ಷಿಸಲು ಚೀನಾಕ್ಕೆ ಸಾಧ್ಯವಾಗುತ್ತದೆ. ಕ್ಷಿಪ್ರವಾಗಿ ಮಧ್ಯ ಪ್ರವೇಶ ಮಾಡಲು ಇದು ಆಯಕಟ್ಟಿನ ಸ್ಥಳವಾಗಿದೆ. ಹೀಗಾಗಿ ಚೀನಾ ಸೇನೆ ಈ ಜಾಗವನ್ನು ತೊರೆಯುತ್ತಿಲ್ಲ.